ಕನ್ನಡಪ್ರಭ ವಾರ್ತೆ ಸೊರಬ
ತಾವು ಬದುಕಿಗಾಗಿ ಉದ್ಯಮ ನಡೆಸುತ್ತಿದ್ದೇನೆ. ಇದರಲ್ಲಿ ತಾಲೂಕಿನ ನೂರಾರು ಸಂಖ್ಯೆಯ ಯುವಕರಿಗೆ ಉದ್ಯೋಗ ನೀಡಿ ಜೀವನ ನಿರ್ವಹಣೆಗೆ ಸಹಕಾರಿಯಾಗಿದ್ದೇನೆ. ಆದರೆ ಸಚಿವ ಮಧು ಬಂಗಾರಪ್ಪ ಅವರು ತಾಲೂಕಿನ ಎಷ್ಟು ವಿದ್ಯಾವಂತ ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸಿ ನೆರವಾಗಿದ್ದಾರೆ ಎನ್ನುವುದನ್ನು ಅವರ ಹಿಂಬಾಲಕರು ತಿಳಿಸಲಿ. ಇದನ್ನು ಬಿಟ್ಟು ಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆಗೆ ಪ್ರಯತ್ನಿಸಿದರೆ ತಗ್ಗುವ ವ್ಯಕ್ತಿ ನಾನಲ್ಲ ಎಂದು ರಾಜ್ಯ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಬಿಜೆಪಿಯ ಮುಖಂಡ ರಾಜು ಎಂ. ತಲ್ಲೂರು ಕಿಡಿಕಾರಿದರು.ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿರುವ ಸೊರಬ ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ತಾವು ಪೆಟ್ರೋಲ್ ಬಂಕ್ ಉದ್ಯಮ ನಡೆಸುತ್ತಿರುವುದು ಯಾವುದೇ ರಾಜಕೀಯ ಪಕ್ಷದ ಹಣದಿಂದಲ್ಲ, ಬದಲಾಗಿ ಹಲವು ಉದ್ಯಮದಿಂದ ಬಂದ ಲಾಭಾಂಶದಿಂದ ಬಂಕ್ ಆರಂಭಿಸಿದ್ದೇನೆ. ಇದಕ್ಕೆ ಸರ್ಕಾರಕ್ಕೆ ಎಲ್ಲಾ ರೀತಿಯ ತೆರಿಗೆ ಕಟ್ಟುತ್ತಿದ್ದೇನೆ. ಇದು ಕಾಂಗ್ರೆಸ್‌ನ ಕೆಲವು ಮುಖಂಡರ ಕಣ್ಣು ಕುಕ್ಕುತ್ತಿದ್ದು, ತಮ್ಮ ಬೆಳವಣಿಗೆಯನ್ನು ಸಹಿಸದ ಸಚಿವರು ತಮ್ಮ ಹಿಂಬಾಲಕರನ್ನು ಛೂ ಬಿಟ್ಟು ಸಲ್ಲದ ಆರೋಪಗಳನ್ನು ಮಾಡಿ ಬೆದರಿಕೆವೊಡ್ಡುತ್ತಿದ್ದಾರೆ. ಆದರೆ ಇದಕ್ಕೆಲ್ಲ ತಗ್ಗುವ ಮಾತೇ ಇಲ್ಲ ಎಂದರು.ಕಾಂಗ್ರೆಸ್ ಮುಖಂಡರಾದ ತಬಲಿ ಬಂಗಾರಪ್ಪ, ಎಚ್. ಗಣಪತಿ ಅವರ ಬಗ್ಗೆ ತಮಗೆ ಗೌರವವಿದೆ. ಆದರೆ ತಮ್ಮ ಮೇಲೆ ಏಕ ವಚನ ಬಳಸಿದರೆ ಸುಮ್ಮನಿರುವ ವ್ಯಕ್ತಿ ನಾನಲ್ಲ. ಸಚಿವ ಮಧು ಬಂಗಾರಪ್ಪ ತಮಗೆ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ. ನಾಲಗೆ ತೊದಲುತ್ತದೆ ಎಂದು ಅವರೇ ಸಭೆ ಸಮಾರಂಭಗಳಲ್ಲಿ ಹೇಳಿಕೊಂಡಿದ್ದಾರೆ. ಹಾಗಾಗಿ ಅನಕ್ಷರಸ್ಥ ಶಿಕ್ಷಣ ಸಚಿವ ಎಂದು ಇಡೀ ರಾಜ್ಯದ ಜನರೇ ಹೇಳಿದ್ದಾರೆ. ಅದನ್ನೇ ತಾವೂ ಕೂಡಾ ಹೇಳಿದ್ದೇನೆ. ಇದಕ್ಕೆ ಪ್ರತ್ಯುತ್ತರ ಕೊಡಬೇಕಾದವರು ಶಿಕ್ಷಣ ಸಚಿವರು. ಹಿಂಬಾಲಕರನ್ನು ಬಿಟ್ಟು ಸಲ್ಲದ ಹೇಳಿಕೆ ನೀಡುವುದು ಅವರ ವ್ಯಕ್ತಿತ್ವಕ್ಕೆ ಗೌರವ ತಂದುಕೊಡುವುದಿಲ್ಲ ಎಂದ ಅವರು, ಮುಂದಿನ ದಿನಗಳಲ್ಲಿ ಏಕವಚನ ಬಳಸಿ ನಿಂದನೆಗೆ ಪ್ರಯತ್ನಿಸಿದರೆ ಅಂಥವರ ವಿರುದ್ದ ಕಾನೂನು ಮೊರೆಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಹಿಂದೆ ಕೂಡಾ ಶಿಕ್ಷಣ ಸಚಿವರಾಗಿದ್ದ ಮಧು ಬಂಗಾರಪ್ಪ ಅವರು ೧೬ ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದಾರೆ ಅಲ್ಲದೇ ಮೆಟ್ರಿಕ್ ಮತ್ತು ಪಿಯುಸಿ ಪೂರ್ವ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಆರೋಪಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮತ್ತು ಬಿ.ವೈ. ರಾಘವೇಂದ್ರ ಸಂಸದರಾಗಿ ತಾಲೂಕಿನ ರೈತ ಸಮೂಹಕ್ಕೆ ಅನುಕೂಲವಾಗಲಿ ಎಂದು ನೀರಾವರಿ ಯೋಜನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ೨೮೦೦ ಕೋಟಿ ರು.ಗಳನ್ನು ನೀಡಿ, ಅಭಿವೃದ್ಧಿ ಮಾಡಿ ತೋರಿಸಿದ್ದಾರೆ. ಇದನ್ನೇ ಸಚಿವರು ತಮ್ಮ ಅಭಿವೃದ್ಧಿ ಕೆಲಸಗಳು ಎಂದು ಜನತೆ ಎದುರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ, ಇನ್ನಾದರೂ ತಾಲೂಕನ್ನು ನಂಜುಂಡಪ್ಪ ವರದಿಯಿಂದ ಮುಕ್ತಗೊಳಿಸಿ ಎಂದು ಸಲಹೆ ನೀಡಿದರು.
ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಸೊರಬ ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಕಡಸೂರು, ಮುಖಂಡರಾದ ಗುರುಪ್ರಸನ್ನಗೌಡ, ಮಂಜುನಾಥ ಹುರಳಿ, ರಾಜು ಮಾವಿನಬಳ್ಳಿಕೊಪ್ಪ, ಸುರೇಶ್, ನಂದೀಶ್, ರವಿ ದ್ಯಾವನಹಳ್ಳಿ, ಸಂಜಯ್, ವಿನಾಯಕ ಬುಳ್ಳಿ, ಹರೀಶ, ಕೇಶವ ಪೇಟ್ಕರ್ ಮೊದಲಾದವರು ಹಾಜರಿದ್ದರು.