ಸಿಜೆಐ ಮೇಲೆ ಶೂ ಎಸೆಯಲೆತ್ನ: ಶೀಘ್ರವೇ ಆರೋಪಿ ಬಂಧಿಸಲು ಆಗ್ರಹ

| Published : Oct 11 2025, 12:03 AM IST

ಸಾರಾಂಶ

ತಾಲೂಕು ವಕೀಲರ ಸಂಘದ ಅಧ್ಯಕ್ಷ ಅನಿಲ ಮಾನೆ ಮಾತನಾಡಿ, ಭಾರತದ ಸುಪ್ರೀಂ ಕೋರ್ಟನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರ ಅವರ ಮೇಲೆ ವಕೀಲ ಮಾಡಿರುವ ಕೃತ್ಯ ಖಂಡನೀಯ. ಇಡೀ ನ್ಯಾಯವಾದಿಗಳ ಪಾಲಿಗೆ ಇದೊಂದು ಕಪ್ಪುಚುಕ್ಕೆಯಾಗಿದೆ ಎಂದರು.

ಶಿರಹಟ್ಟಿ: ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸಿದ ಹೀನ ಕೃತ್ಯ ನಡೆಸಿರುವ ಹಿರಿಯ ನ್ಯಾಯವಾದಿ ರಾಕೇಶಕುಮಾರ ಅವರನ್ನು ಕೂಡಲೇ ಬಂಧಿಸಿ ತನಿಖೆಗೆ ಒಳಪಡಿಸಿ ಆತನಿಗೆ ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಅನಿಲ ಮಾನೆ ನೇತೃತ್ವದಲ್ಲಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಅನಿಲ ಮಾನೆ ಮಾತನಾಡಿ, ಭಾರತದ ಸುಪ್ರೀಂ ಕೋರ್ಟನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರ ಅವರ ಮೇಲೆ ವಕೀಲ ಮಾಡಿರುವ ಕೃತ್ಯ ಖಂಡನೀಯ. ಇಡೀ ನ್ಯಾಯವಾದಿಗಳ ಪಾಲಿಗೆ ಇದೊಂದು ಕಪ್ಪುಚುಕ್ಕೆಯಾಗಿದೆ ಎಂದರು.ತಪ್ಪಿತಸ್ಥ ವಕೀಲರ ವಿರುದ್ಧ ಕ್ರಮ ಕೈಗೊಳ್ಳಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾರು ದೊಡ್ಡವರಲ್ಲ ಎಂಬ ಸಂದೇಶವನ್ನು ರವಾನಿಸಬೇಕು. ಜತೆಗೆ ಮುಂದೆ ಇಂತಹ ಘಟನೆಗಳು ನ್ಯಾಯಾಧೀಶರ ಮತ್ತು ವಕೀಲರ ಮಧ್ಯೆ ನ್ಯಾಯಾಲಯದಲ್ಲಿ ಮರುಕಳಿಸದಂತೆ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಇಂತಹ ಕೃತ್ಯವು ನಮ್ಮ ರಾಷ್ಟ್ರದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಗೆ ಮಾಡಿದ ಅಗೌರವ ಮಾತ್ರವಲ್ಲದೆ ಕಾನೂನಿನ ನಿಯಮ ಮತ್ತು ನಮ್ಮ ಪ್ರಜಾಸತ್ತಾತ್ಮಕ ಚೌಕಟ್ಟಿನ ಘನತೆಗೆ ಮಾಡಿದ ಅವಮಾನವೂ ಆಗಿದೆ. ಸಂವಿಧಾನ ಪ್ರಾಧಿಕಾರವನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನ ಖಂಡನೀಯ ಎಂದರು.ನಂತರ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಶಿರಹಟ್ಟಿ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಮಹಾಂತೇಶ ಪವಾಡಶೆಟ್ಟರ, ಖಜಾಂಚಿ ಚಂದ್ರು ಜಾಧವ, ಹೇಮಂತ ಕೆಂಗೊಂಡ, ಸಂಜೀವ ಮಠದ, ಮಹೇಶ ದಾನಪ್ಪಗೌಡ್ರ, ರವಿ ಪೂಜಾರ, ಎಸ್.ವೈ. ಗೊಬ್ಬರಗುಂಪಿ, ಎ.ಎ. ಬೇವಿನಗಿಡದ ಹಾಗೂ ಮುಖಂಡರಾದ ಎಂ.ಕೆ. ಲಮಾಣಿ, ಶಿವನಗೌಡ ಪಾಟೀಲ ಇತರರು ಇದ್ದರು.