ತಳ ಸಮುದಾಯಗಳನ್ನು ತುಳಿಯಲು ಯತ್ನ

| Published : Jul 29 2025, 01:00 AM IST

ಸಾರಾಂಶ

ರಾಜ್ಯದಲ್ಲಿ ಹಿಂದುಳಿದ ಮತ್ತು ತಳ ಸಮುದಾಯಗಳು ಸಂಘಟನೆಯಾಗಿ ಸಾಮಾಜಿಕ ಅಭಿವೃದ್ಧಿ ಹೊಂದುವುದನ್ನು ತಡೆಗಟ್ಟಲು ಮೇಲ್ವರ್ಗದ ಮಠಗಳ ಸ್ವಾಮೀಜಿಗಳು ಹುನ್ನಾರ ನಡೆಸಿದ್ದಾರೆ ಎಂದು ಕನಕ ಗುರು ಪೀಠ ಹೊಸದುರ್ಗ ಶಾಖಾಮಠದ ಪೀಠಾಧ್ಯಕ್ಷ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿರಾರಾಜ್ಯದಲ್ಲಿ ಹಿಂದುಳಿದ ಮತ್ತು ತಳ ಸಮುದಾಯಗಳು ಸಂಘಟನೆಯಾಗಿ ಸಾಮಾಜಿಕ ಅಭಿವೃದ್ಧಿ ಹೊಂದುವುದನ್ನು ತಡೆಗಟ್ಟಲು ಮೇಲ್ವರ್ಗದ ಮಠಗಳ ಸ್ವಾಮೀಜಿಗಳು ಹುನ್ನಾರ ನಡೆಸಿದ್ದಾರೆ ಎಂದು ಕನಕ ಗುರು ಪೀಠ ಹೊಸದುರ್ಗ ಶಾಖಾಮಠದ ಪೀಠಾಧ್ಯಕ್ಷ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ನಗರದ ಶ್ರೀ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕನಕ ನೌಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇತ್ತೀಚಿಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಜಾತಿ ಮಠಗಳಿಂದ ಸಮಾಜ ಕಲುಷಿತಗೊಂಡಿದೆ ಎಂಬುದಾಗಿ ತನ್ನದೇ ಜಾತಿಯ ಸಮಾರಂಭದಲ್ಲಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಎಲ್ಲಾ ತಳ ಸಮುದಾಯದ ಹಾಗೂ ಹಿಂದುಳಿದ ವರ್ಗಗಳ ಜನರು ಖಂಡಿಸಬೇಕಾಗಿದೆ. ಮೇಲ್ಜಾತಿಯ ಸ್ವಾಮೀಜಿಗಳು ಹಾಗೂ ಮಠಗಳು, ಕೆಲಸಮುದಾಯದ ಅಭಿವೃದ್ಧಿಗೆ ಶ್ರಮಿಸಲಿಲ್ಲವಾದ್ದರಿಂದ, ನಿರ್ಲಕ್ಷಕ್ಕೊಳಪಟ್ಟ ಕೆಳಹಂತದ ಜಾತಿಗಳು ಮಠಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಅವರು ಯಾವ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸ ಸಮಯದಲ್ಲಿ ಪರಿಶ್ರಮ ಹಾಕಿ, ತ್ಯಾಗ ಮನೋಭಾವದಿಂದ ತನ್ನ ಗುರಿಯೆಡೆಗೆ ತಲುಪಲು ಪ್ರತಿನಿತ್ಯ ಶ್ರಮವಹಿಸುತ್ತಾನೋ ಅಂತಹ ವಿದ್ಯಾರ್ಥಿ ತನ್ನ ಜೀವನದಲ್ಲಿ ಸಮಾಜ ಮೆಚ್ಚುವಂತಹ ಸಾಧನೆ ಮಾಡುತ್ತಾನೆ ಎಂದರು.ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ಹಾಲುಮತ ಸಮುದಾಯದ ಇತಿಹಾಸವನ್ನು ತಿಳಿಸಿದ ಅವರು, ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರವನ್ನು ಸ್ವೀಕರಿಸಿದ ನಂತರ ಸಾಧನೆ ಮಾಡುವುದನ್ನು ನಿಲ್ಲಿಸಬಾರದು. ಭವಿಷ್ಯದಲ್ಲಿ ಮೂಢನಂಬಿಕೆ ಮತ್ತು ಕಂದಾಚಾರವನ್ನು ನಿಲ್ಲಿಸುವ ಮೂಲಕ ಕನಕದಾಸರ ಆಶಯವನ್ನು ಸಾಕಾರಗೊಳಿಸಬೇಕು. ರಾಜ್ಯದಲ್ಲಿ ಮೂರನೇ ಅತಿ ದೊಡ್ಡ ಜನಸಂಖ್ಯೆ ಇರುವ ಹಾಲುಮತ ಸಮುದಾಯವು ರಾಜಕೀಯ ಪ್ರಾತಿನಿಧ್ಯವನ್ನು ಪಡೆಯುವ ಮೂಲಕ ತಮಗಿಂತ ಕೆಳ ಸಮುದಾಯದ ಜನರ ಏಳಿಗೆಗೆ ಶ್ರಮಿಸಬೇಕು ಎಂದರು.ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದ ಅಬಕಾರಿ ಇಲಾಖೆ ಉಪಾಧೀಕ್ಷಕ ವಿ.ಶೇಖರಪ್ಪ ಮಾತನಾಡಿ, ಜೀವನದಲ್ಲಿ ಎಲ್ಲರೂ ಪ್ರತಿಭಾನ್ವಿತರೆ ಆದರೆ ಪರಿಶ್ರಮ ಹಾಕುವಲ್ಲಿ ಕೆಲವರು ಹಿಂದೆ ಬೀಳುತ್ತಾರೆ. ವಿದ್ಯಾರ್ಥಿಗಳು ತನ್ನ ಗುರಿಯೆಡೆಗೆ ನಿರಂತರವಾಗಿ ನಿಧಾನವಾಗಿಯಾದರೂ ನಡೆಯುತ್ತಲೇ ಇರಬೇಕು, ಯಾವುದೇ ಕಾರಣಕ್ಕೂ ಹಿಂತಿರುಗಬೇಡಿ ಹಾಗೂ ಶ್ರೇಷ್ಠವಾದ ಕನಸು ಕಾಣಿರಿ, ಅದನ್ನು ಸಹಕಾರಗೊಳಿಸಲು ಪ್ರತಿದಿನವೂ ಪ್ರಯತ್ನಪಟ್ಟಾಗ ಮಾತ್ರ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು. ಬಿಜೆಪಿ ಮುಖಂಡ ಬಿ.ಕೆ.ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜ್, ನಗರಸಭಾ ಸದಸ್ಯ ಎಸ್.ಎಲ್. ರಂಗನಾಥ್, ವೈದ್ಯ ಡಾ. ಕೆ.ಸಿ.ರಘು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಡಾ.ಎಸ್.ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧುಗಿರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ಬಿ.ಎಸ್. ಲಕ್ಷ್ಮಣ್ ವಹಿಸಿದ್ದರು. ನಗರಸಭಾ ಸದಸ್ಯರಾದ ಎಸ್.ಪಿ. ಶಿವಶಂಕರ್, ತೇಜಭಾನುಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಪಿ. ಪಾಂಡುರಂಗಯ್ಯ, ತಾಲೂಕು ವೈದ್ಯಾಕಾರಿ ಡಾ.ಜಿ.ಸಿದ್ಧೇಶ್ವರ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎ.ಸುಧಾಕರ್, ಮಧುಗಿರಿ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್, ಮುಖಂಡ ಬರಗೂರು ಶ್ರೀನಿವಾಸ್, ವಿ.ಜಿ.ಧೃವಕುಮಾರ್, ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ ಸೇರಿದಂತೆ ಎಲ್ಲಾ ಪದಾಕಾರಿಗಳು ಹಾಜರಿದ್ದರು.