ಸಾರಾಂಶ
ಗುರುಮಠಕಲ್ ಪಟ್ಟಣದ ವೀರಸೋಮೇಶ್ವರ ಕೊಡ್ಲಿಮಠ ಆವರಣದಲ್ಲಿ ಡಾ. ಭೀಮಾಶಂಕರ ಮುತ್ತಗಿ ಸುದ್ದಿಗೋಷ್ಠಿ ನಡೆಸಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಕಳೆದ ಕೆಲ ದಶಕಗಳಿಂದ ಕೊಡ್ಲಿಮಠದ ಟ್ರಸ್ಟ್ ಮುಖಾಂತರ ನಾವು ಅದರ ಅಭಿವೃದ್ಧಿ ಕಾರ್ಯಗಳನ್ನು ಜರುಗಿಸುತ್ತಿದ್ದು, ಏಕಏಕಿಯಾಗಿ ಖಾಸಾಮಠದ ಶಾಂತವೀರ ಗುರುಮರುಘರಾಜೇಂದ್ರ ಸ್ವಾಮೀಜಿಯು ಮಠ ತಮ್ಮ ಅಧೀನದಲ್ಲಿ ಬರುತ್ತದೆ ಎಂದು ಪುರಸಭೆಗೆ ಅರ್ಜಿ ಸಲ್ಲಿಸಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಕೊಡ್ಲಿಮಠ ಅಧ್ಯಕ್ಷ ಡಾ. ಭೀಮಾಶಂಕರ ಮುತ್ತಗಿ ಹೇಳಿದರು.ಇಲ್ಲಿನ ವೀರಸೋಮೇಶ್ವರ ಕೊಡ್ಲಿಮಠ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿಗೆ ಖಾಸಮಠ ಶ್ರೀಗಳು ಪಟ್ಟಣದ ಗಡ್ಡಿ ಬಜಾರ್ ನಲ್ಲಿರುವ ಕೊಡ್ಲಿಮಠ ತಮ್ಮ ಪೀಠದ ಅಡಿಯಲಿದ್ದು, ತಮ್ಮ ಹೆಸರಿಗೆ ವರ್ಗಾವಣೆ ಮಾಡಿ ಎಂದು ಪುರಸಭೆಗೆ 20 ಜನರ ಸಹಿಯುಳ್ಳ ಭಕ್ತರ ಒಪ್ಪಿಗೆ ಪತ್ರ ಸಲ್ಲಿಸಿ ಕೋರಿರುತ್ತಾರೆ ಎಂದರು.
ಶ್ರೀಗಳು ಸಲ್ಲಿಸಿದ ಪತ್ರದಲ್ಲಿ ಮೇಲ್ನೋಟಕ್ಕೆ ಎದ್ದು ಕಾಣುವಂತೆ ಹಲವು ದೋಷಗಳಿದ್ದು, ಸಹಿ ಮಾಡಿರುವವರಲ್ಲಿ ಅನೇಕರು ಈ ವಿಷಯವಾಗಿ ನಾವೆಂದು ಸಹಿ ಮಾಡಿಲ್ಲ. ಶ್ರೀಮಠಕ್ಕೆ ಬೇರೆ ಯಾವುದೊ ಮೀಟಿಂಗ್ ಹೋದಾಗ ಮಾಡಿರೋ ಸಹಿ ದುರ್ಬಳಕೆಯಾಗಿದೆ ಎಂದು ತಿಳಿಸಿದ್ದಾರೆಂದು ಮಾಹಿತಿ ನೀಡಿದರು.ಗುರುಮಠಕಲ್ ನ ಖಾಸಾಮಠವು ಐತಿಹಾಸಿಕ ಹಿನ್ನೆಲೆಯುಳ್ಳ ಮಠವಾಗಿದ್ದು, ಪ್ರಸ್ತುತ ಪೀಠಾಧಿಪತಿಗಳ ನಡೆ ಭಕ್ತ ವೃಂದದ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಂಡು ಆವಿಶ್ವಾಸಕ್ಕೆ ಕಾರಣವಾಗಿದೆ ಎಂದು ವಿಷಾದಿಸಿದರು.
ಟ್ರಸ್ಟ್ ಕಳೆದ ಎರಡು ದಶಕಗಳಿಂದ ಕೊಡ್ಲಿಮಠದ ಜೀರ್ಣೋದ್ಧಾರ ಕಾರ್ಯ ನಡೆಸಿಕೊಂಡು ಬರುತ್ತಿದ್ದು, ಸತತ ಮಳೆಗೆ ಗೋಡೆ ಕುಸಿತ, ರೂಮ್ ಕುಸಿತಗೊಂಡಿತ್ತು. ಇದೆ ಮಠದಲ್ಲಿ ಖಾಸಗಿ ಶಾಲೆ ನಡೆಸಲು ಗುತ್ತಿಗೆ ಆಧಾರದ ಮೇಲೆ ಕೊಡಲಾಗಿತ್ತು. ದಿ. ನಾಗನಗೌಡ ಕಂದಕೂರು ಅವರ ಅವಧಿಯಲ್ಲಿ ₹10 ಲಕ್ಷ ಅನುದಾನದಲ್ಲಿ ಕಾಂಪೌಂಡ್ ನಿರ್ಮಿಸಲಾಯಿತು. ಹೀಗೆ ಹಲವಾರು ಚಟುವಟಿಕೆ ನಡೆದಾಗ ಇತ್ತ ಸುಳಿಯದ ಖಾಸಮಠ ಶ್ರೀಗಳು ಏಕಾಏಕಿಯಾಗಿ ಪುರಸಭೆಗೆ ಅರ್ಜಿ ಸಲ್ಲಿಸಿ ಆಸ್ತಿ ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಿದ್ದು, ಭಕ್ತರಿಗೆ ಮುಜುಗರ ತಂದಂತಾಗಿದೆ ಎಂದು ಅವರು ಹೇಳಿದರು.ಸದಸ್ಯರಾದ ಮಹಾದೇವಪ್ಪ ಉಪ್ಪಿನ್, ನೀಲಕಂಠಪ್ಪ ಮುತ್ತಗಿ, ಶಂಕ್ರಯ್ಯ ಸ್ವಾಮಿ ಸಾಲಿಮಠ, ನಾಗಣ್ಣ ಕಾಳಗಿ, ಶಿವಾನಂದ ಬೂದಿ, ಜಗದೀಶ ಶಹಾಪುರಕರ್, ಜಗದೀಶ ಭೂಮ, ವಿಜಯಕುಮಾರ ಇತರರಿದ್ದರು.