ಪತ್ರಕರ್ತರ ಮೇಲೆ ಹಲ್ಲೆ ಯತ್ನಕ್ಕೆ ಖಂಡನೆ

| Published : Feb 18 2024, 01:31 AM IST

ಸಾರಾಂಶ

ಹೊಸಕೋಟೆ: ತಾಲೂಕಿನ ಬಿಸನಹಳ್ಳಿ ಡೇರಿ ಚುನಾವಣೆ ಸಂದರ್ಭದಲ್ಲಿ ವರದಿಗೆ ತೆರಳಿದ ಪತ್ರಕರ್ತರ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆಯನ್ನು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.

ಹೊಸಕೋಟೆ: ತಾಲೂಕಿನ ಬಿಸನಹಳ್ಳಿ ಡೇರಿ ಚುನಾವಣೆ ಸಂದರ್ಭದಲ್ಲಿ ವರದಿಗೆ ತೆರಳಿದ ಪತ್ರಕರ್ತರ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆಯನ್ನು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಸಂಪಾದಕರ ಹಾಗೂ ವರದಿಗಾರರ ಸಂಘದ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಾ.ಜಿ.ಶ್ರೀನಿವಾಸ್ ಮಾತನಾಡಿ, ಹೊಸಕೋಟೆ ತಾಲೂಕಿನಲ್ಲಿ ಈ ಹಿಂದೆಯೂ ಹಲವು ಬಾರಿ ಪತ್ರಕರ್ತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆದಿದೆ. ಅದೇ ರೀತಿ ಶುಕ್ರವಾರ ಬಿಸನಹಳ್ಳಿ ಡೇರಿ ಚುನಾವಣೆ ಸಂದರ್ಭದಲ್ಲಿ ವರದಿ ಮಾಡಲು ತೆರಳಿದ್ದ ಪತ್ರಕರ್ತರು ಮತ ಕೇಂದ್ರದ ಬಳಿ ದೃಶ್ಯಾವಳಿಗಳನ್ನು ಚಿತ್ರೀಕರಿಸುವ ವೇಳೆ ಸ್ಥಳಕ್ಕೆ ಆಗಮಿಸಿದ ಕಿಡಿಗೇಡಿಗಳು, ನೀವ್ಯಾಕೆ ಚಿತ್ರೀಕರಣ ಮಾಡುತ್ತಿದ್ದೀರಿ ಎಂದು ಪತ್ರಕರ್ತರ ಬಳಿ ಮೊಬೈಲ್ ಹಾಗೂ ಕ್ಯಾಮೆರಾ ಕಿತ್ತುಕೊಳ್ಳಲು ಯತ್ನಿಸಿ ತಳ್ಳಾಟ-ನೂಕಾಟ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸರಿರುವುದನ್ನು ಕೂಡ ಲೆಕ್ಕಿಸದೆ ಪತ್ರಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ತಾಲೂಕಿನಲ್ಲಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಅಗತ್ಯವಿದೆ ಎಂದರು.

ಕರ್ನಾಟಕ ಸಂಪಾದಕರ ಹಾಗೂ ವರದಿಗಾರರ ಸಂಘದ ಜಿಲ್ಲಾಧ್ಯಕ್ಷ ರಾಮೇಗೌಡ ಮಾತನಾಡಿ, ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ವರದಿಗೆ ತೆರಳುವ ಪತ್ರಕರ್ತರಿಗೆ ಯಾರ ಅಪ್ಪಣೆಯು ಅವಶ್ಯಕತೆ ಇಲ್ಲ. ಆದರೆ ಡೇರಿ ಚುನಾವಣೆ ವರದಿಗೆ ತೆರಳಿದ ಪತ್ರಕರ್ತರಿಗೆ ಹೀಗೆ ಬೆದರಿಸಿರುವುದು ಸರಿಯಲ್ಲ. ಪೊಲೀಸರು ಪತ್ರಕರ್ತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.ಹಿರಿಯ ಪತ್ರಕರ್ತ ಟಿ.ನಾಗರಾಜ್‌ ಮಾತನಾಡಿ, ಪೊಲೀಸರು ಕಾನೂನು ಸುವ್ಯವಸ್ಥೆ ಹಾಳುಗೆಡವುತ್ತಿದ್ದ ಕಿಡಿಗೇಡಿಗಳನ್ನು ಮಟ್ಟ ಹಾಕುವುದು ಬಿಟ್ಟು ಪತ್ರಕರ್ತರನ್ನೆ ದೂರ ಕಳುಹಿಸುವುದು ಸಮಂಜಸವಲ್ಲ. ಆದ್ದರಿಂದ ಈ ವಿಚಾರವಾಗಿ ರಾಜ್ಯಪಾಲರಿಗೆ ದೂರು ಸಲ್ಲಿಸಿ ಸೂಕ್ತ ರಕ್ಷಣೆ ಕೋರುತ್ತೇವೆ ಎಂದು ತಿಳಿಸಿದರು.

ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ರಮೇಶ್, ಖಜಾಂಚಿ ಶಾಂತಮೂರ್ತಿ, ಕೇರಾ ಸಂಘದ ಜಿಲ್ಲಾ ಕಾರ್ಯದರ್ಶಿ ನಟರಾಜ್, ಹಿರಿಯ ಪತ್ರಕರ್ತರಾದ ನಾಗರಾಜ್, ಜಿ.ಎಸ್.ಮಂಜುನಾಥ್, ಕೆ ಮಂಜುನಾಥ್, ಜ್ಯೋತೀಶ್ವರಪ್ಪ ಇತರರು ಹಾಜರಿದ್ದರು.

ಫೋಟೋ : 17 ಹೆಚ್ ಎಸ್ ಕೆ 1

ಹೊಸಕೋಟೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಪದಾಧಿಕಾರಿಗಳು ಪತ್ರಕರ್ತರ ಮೇಲಿನ ದೌರ್ಜನವನ್ನು ಖಂಡಿಸಿದರು.