ಸಾರಾಂಶ
ಚಿತ್ರದುರ್ಗ: ಲಂಬಾಣಿ ಜನಾಂಗದವರಲ್ಲಿರುವ ಮುಗ್ಧತೆ ಬಳಸಿಕೊಂಡು ಮತಾಂತರ ಮಾಡುತ್ತಿರುವುದರ ವಿರುದ್ಧ ಪ್ರತಿ ತಾಂಡಾಗಳಲ್ಲಿ ಜನಜಾಗೃತಿ ಅಭಿಯಾನ ನಡೆಸಲಾಗುವುದೆಂದು ಬಂಜಾರಾ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ತಿಳಿಸಿದರು.
ಬಂಜಾರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ರೈಸ್ತ ಮಿಷನರಿಗಳು ನಮ್ಮ ಜನಾಂಗದವರನ್ನು ಮತಾಂತರ ಮಾಡಿಕೊಳ್ಳುತ್ತಿರುವುದರಿಂದ ಲಂಬಾಣಿ ಸಂಸ್ಕೃತಿ ಹಾಳಾಗುತ್ತಿದೆ. ಅನ್ಯಧರ್ಮಿಯರು ನಮ್ಮ ಜನಾಂಗದರನ್ನೆ ಎತ್ತಿಕಟ್ಟಿ ಮತಾಂತರಗೊಳಿಸುತ್ತಿರುವುದು ಜಾಸ್ತಿಯಾಗುತ್ತಿರುವುದನ್ನು ತಡೆಗಟ್ಟಬೇಕಿರುವುದರಿಂದ ತಾಂಡಾಗಳಿಗೆ ಭೇಟಿ ನೀಡಿ ಜಾಗೃತಿಗೊಳಿಸಲಾಗುವುದೆಂದರು.ರಾಜಕೀಯವಾಗಿ ಹಿಂದಿನಿಂದಲೂ ಲಂಬಾಣಿ ಸಮಾಜವನ್ನು ನಿರ್ಲಕ್ಷಿಸಲಾಗುತ್ತಿದೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಂಜಾರ ಜನಾಂಗಕ್ಕೆ ಸೇರಿದವರಿಗೆ ಚಿತ್ರದುರ್ಗ ಪಾರ್ಲಿಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೊಡಬೇಕು. 1.25 ಲಕ್ಷ ಮತದಾರರು ಕ್ಷೇತ್ರದಲ್ಲಿದ್ದಾರೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಸರ್ದಾರ್ ಸೇವಾಲಾಲ್ ಮಹಾರಾಜರ ಜಯಂತಿ ಸರ್ಕಾರ ಆಚರಿಸಿರುವುದನ್ನು ಸ್ವಾಗತಿಸುತ್ತೇವೆ. ಪ್ರತಿ ವರ್ಷದಂತೆ ಈ ಬಾರಿಯೂ ಮಾ.1ರಂದು ಬಂಜಾರ ಭವನದಲ್ಲಿ ಸರ್ದಾರ್ ಸೇವಾಲಾಲ್‍ರ 285ನೇ ಜಯಂತಿ ಆಚರಿಸಲಾಗುವುದು. ಮಳೆ ಬೆಳೆ ಕಡಿಮೆಯಾಗಿ ರೈತರು ಸಂಕಷ್ಟದಲ್ಲಿರುವುದರಿಂದ ಸರಳವಾಗಿ ಆಚರಿಸುತ್ತೇವೆ. ಜಿಲ್ಲೆಯ ಎಲ್ಲಾ ತಾಲೂಕಿನಿಂದಲೂ ಜನಾಂಗದವರು ಜಯಂತಿಯಲ್ಲಿ ಭಾಗವಹಿಸಲಿದ್ದಾರೆ. ಬಂಜಾರ ಜನಾಂಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಗುವುದು. ಹೊಸದುರ್ಗದಲ್ಲಿ ಫೆ.29ರಂದು ಆಚರಿಸುವ ಸರ್ದಾರ್ ಸೇವಾಲಾಲ್ ಜಯಂತಿಯಲ್ಲಿ ಶಾಸಕ ಬಿ.ಜಿ.ಗೋವಿಂದ್ಪಪ ಅವರನ್ನು ಸನ್ಮಾನಿಸಲಾಗುವುದು. ಸಹಸ್ರಾರು ಸಂಖ್ಯೆಯಲ್ಲಿ ಲಂಬಾಣಿ ಸಮಾಜದವರು ಜಯಂತಿಯಲ್ಲಿ ಪಾಲ್ಗೊಳ್ಳುವಂತೆ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮನವಿ ಮಾಡಿದರು.ಬಂಜಾರ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್ ಕುಮಾರ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಮಾ.1ರಂದು ಸರ್ದಾರ್ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಅಂದು ಬೆಳಗ್ಗೆ 11.30ಕ್ಕೆ ಮೆರವಣಿಗೆ ಹೊರಟು ಒನಕೆ ಓಬವ್ವ ವೃತ್ತದ ಮೂಲಕ ಬಂಜಾರ ಭವನ ತಲುಪಲಿದೆ. ಕೆಲವು ದುಷ್ಟಶಕ್ತಿಗಳು ಅಪಪ್ರಚಾರ ಮಾಡುತ್ತಿರುವುದಕ್ಕೆ ಯಾರು ಕಿವಿಗೊಡಬಾರದೆಂದು ವಿನಂತಿಸಿದರು.
ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಜಯಂತಿಯಲ್ಲಿ ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಡಾ.ಜ್ಯೋತಿಬಾಯಿ ಇವರುಗಳು ಪಾಲ್ಗೊಳ್ಳಲಿದ್ದಾರೆಂದರು.ಬಂಜಾರ ಲಂಬಾಣಿ ಜನಾಂಗದ ಉಪಾಧ್ಯಕ್ಷ ತಣಿಗೆಹಳ್ಳಿ ಉಮಾಪತಿ, ಅನಂತಮೂರ್ತಿ ನಾಯ್ಕ, ಸಿದ್ದೇಶ್ ನಾಯ್ಕ, ಪ್ರವೀಣ್‍ಸಿಂಗ್, ಪರಮೇಶ್ ನಾಯ್ಕ, ಸಂತೋಷ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.