ಕನ್ನಡಪ್ರಭ ವಾರ್ತೆ ಮುಧೋಳಕೊಲೆ ಮಾಡಲು ಯತ್ನಿಸಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಗೆ ಸಮರ್ಪಕ ಸಾಕ್ಷ್ಯಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿ ಬಿಡುಗಡೆ ಮಾಡಿದೆ.
ಕನ್ನಡಪ್ರಭ ವಾರ್ತೆ ಮುಧೋಳ
ಕೊಲೆ ಮಾಡಲು ಯತ್ನಿಸಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಗೆ ಸಮರ್ಪಕ ಸಾಕ್ಷ್ಯಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿ ಬಿಡುಗಡೆ ಮಾಡಿದೆ.ಬಾಗಲಕೋಟೆ ಜಿಲ್ಲೆಯ ರಬಕವಿ–ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಶ್ರೀಶೈಲ ತಂದೆ ಪುಂಡಲಿ ಪಾಚ್ಚಾಪೂರ ಅವರ ಕೊಲೆಗೆ ಯತ್ನಿಸಿದ ಆರೋಪದ ಪ್ರಕರಣ ಇದಾಗಿದೆ.
ಮುಧೋಳ ತಾಲೂಕಿನ ಚನ್ನಾಳ ಗ್ರಾಮದ ಈರಪ್ಪ ತಂದೆ ನಿಂಗಪ್ಪ ಚಿನ್ನಾನಿ ಅವರು ತಮ್ಮ ಅಳಿಯ ಶ್ರೀಶೈಲ ಅವರಿಗೆ ಪಾಲಿನಿಂದ ಬಂದಿದ್ದ ಜಮೀನಿನಲ್ಲಿ ಸಾಗುವಳಿ ಮಾಡಲು ಜಮೀನು ನೀಡಿದ್ದರು. ಈ ವೇಳೆ, ‘ಚಟ ಮಾಡಬೇಡ, ಸರಿಯಾಗಿ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಹೋಗು’ ಎಂದು ಬುದ್ಧಿವಾದ ಹೇಳಿದ್ದಕ್ಕೆ ಶ್ರೀಶೈಲ ಸಿಟ್ಟುಗೊಂಡಿದ್ದರು ಎನ್ನಲಾಗಿದೆ.ಈರಪ್ಪ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಶ್ರೀಶೈಲ ಕಬ್ಬಿನ ಜಮೀನಿನಲ್ಲಿ ಅವಿತುಕೊಂಡು, 2025ರ ಮಾರ್ಚ್ 30ರಂದು ಸಂಜೆ 7.20ರ ಸುಮಾರಿಗೆ ಈರಪ್ಪ ಅವರು ಹೊಳೆ ಮೋಟಾರ್ ಚಾಲು ಮಾಡಿಕೊಂಡು ಮರಳುತ್ತಿದ್ದಾಗ ಹಿಂದಿನಿಂದ ಬಂದು ಕುಡುಗೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರು ನೀಡಲಾಗಿತ್ತು.
ಈ ಕುರಿತ ಪ್ರಕರಣವು ಬಾಗಲಕೋಟೆಯ 3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಮುಧೋಳ ಪೀಠದಲ್ಲಿ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ದೇವೇಂದ್ರ ಪಂಡಿತ ಅವರು, ಆರೋಪ ಸಾಬೀತುಪಡಿಸಲು ಸಮರ್ಪಕ ಸಾಕ್ಷ್ಯಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಆರೋಪಿಯನ್ನು ಆಪಾದನೆಗಳಿಂದ ಮುಕ್ತಗೊಳಿಸಿ ನಿರ್ದೋಷಿ ಎಂದು ತೀರ್ಪು ನೀಡಿದ್ದಾರೆ. ಆರೋಪಿಯ ಪರವಾಗಿ ಮುಧೋಳದ ವಕೀಲ ಕೆ.ಎಂ.ಕನ್ನಗಾರ ಅವರು ವಾದ ಮಂಡಿಸಿದ್ದರು.