ಪ್ರಜಾಪ್ರಭುತ್ವ ಹತ್ತಿಕ್ಕುವ ಪ್ರಯತ್ನಗಳ ವಿಫಲಗೊಳಿಸಿ: ತಹಸೀಲ್ದಾರ್‌

| Published : Feb 06 2024, 01:34 AM IST

ಸಾರಾಂಶ

ನಾವು ತರ್ಕಬದ್ಧ ಚಿಂತನೆ ಮೂಲಕ ನಮ್ಮ ಹಕ್ಕುಗಳ ಪಡೆಯಬೇಕು ಅಂತಹ ಹಕ್ಕುಗಳ ನಮಗೆ ಸಂವಿಧಾನ ನೀಡಿದೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನಗಳ ನಾವು ವಿಫಲಗೊಳಿಸಬೇಕು. ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ, ಸಂವಿಧಾನವೇ ಪವಿತ್ರವಾದ ಧರ್ಮ, ಇದನ್ನು ಸದಾ ರಕ್ಷಣೆ ಮಾಡುವ ಕರ್ತವ್ಯ ನಮ್ಮದು.

ಕನ್ನಡಪ್ರಭ ವಾರ್ತೆ ನ್ಯಾಮತಿ

ಸಂವಿಧಾನವು ಪ್ರತಿಯೊಬ್ಬ ನಾಗರಿಕನ ಮಾರ್ಗಸೂಚಿ, ಇಲ್ಲಿ ಕಾನೂನು, ನಿಯಮಗಳ ಬಗ್ಗೆ ತಿಳಿವಳಿಕೆ ನೀಡಿದ್ದು ಭಾರತವು ಸಮಾಜವಾದಿ, ಜಾತ್ಯತೀತತೆ, ಸಾರ್ವಭೌಮ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದೆ. ಇಲ್ಲಿ ತನ್ನ ಜನರ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ತಿಳಿಸಿ ಜನರ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ ಎಂದು ನ್ಯಾಮತಿ ತಹಸೀಲ್ದಾರ್‌ ಎಚ್‌.ಬಿ.ಗೋವಿಂದಪ್ಪ ತಿಳಿಸಿದರು.

ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಅಭಿಯಾನದ ಅಂಬೇಡ್ಕರ್‌, ಬುದ್ಧ, ಬಸವೇಶ್ವರ ಸ್ತಬ್ಧಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿ ಮಾತನಾಡಿ

ನಾವು ತರ್ಕಬದ್ಧ ಚಿಂತನೆ ಮೂಲಕ ನಮ್ಮ ಹಕ್ಕುಗಳ ಪಡೆಯಬೇಕು ಅಂತಹ ಹಕ್ಕುಗಳ ನಮಗೆ ಸಂವಿಧಾನ ನೀಡಿದೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನಗಳ ನಾವು ವಿಫಲಗೊಳಿಸಬೇಕು. ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ, ಸಂವಿಧಾನವೇ ಪವಿತ್ರವಾದ ಧರ್ಮ, ಇದನ್ನು ಸದಾ ರಕ್ಷಣೆ ಮಾಡುವ ಕರ್ತವ್ಯ ನಮ್ಮದು ಎಂದರು. ಪ್ರಪಂಚದಲ್ಲಿಯೇ ನಮ್ಮ ರಾಷ್ಟ್ರ ವಿಶಿಷ್ಟತೆಯಿಂದ ಕೂಡಿದ್ದು ಭಾಷೆ, ಉಡಿಗೆ, ಆಹಾರ ಪದ್ಧತಿಗಳು ಸೇರಿ ಎಲ್ಲವೂ ವಿಭಿನ್ನವಾಗಿದ್ದರೂ ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಏಕೈಕ ರಾಷ್ಟ್ರ ನಮ್ಮದು ಅದಕ್ಕೆ ಕಾರಣ ಅಂಬೇಡ್ಕರ್‌ ರಚಿಸಿರುವ ಸಂವಿಧಾನ ಎಂದು ಹೇಳಿದರು.

ಪ.ಪಂ.ಮುಖ್ಯಾಧಿಕಾರಿ ಪಿ.ಗಣೇಶ್‌ರಾವ್‌ ಮಾತನಾಡಿ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಭಾನ್ವಿತ ಆದರ್ಶ ವ್ಯಕ್ತಿತ್ವ ಹೊಂದಿದವರು. ಭಾರತದ ರುಪಾಯಿ ಸಮಸ್ಯೆಗೆ ಪರಿಹಾರ ಕೊಟ್ಟ ಆರ್ಥಿಕ ರೂವಾರಿ, ಇಡೀ ವಿಶ್ವದಲ್ಲಿ ಯಾವುದೇ ಪ್ರಭುತ್ವವಿರಲಿ ಆ ದೇಶದಲ್ಲಿ ಕಾನೂನು ಸಂಹಿತೆ ಇರಬೇಕು ಆಗ ಮಾತ್ರ ಆ ದೇಶದ ಜನರಿಗೆ ಸಿಗಬೇಕಾದ ಎಲ್ಲ ಹಕ್ಕುಗಳು ತಾನಾಗಿಯೇ ಸಿಗುತ್ತವೆ ಎಂದು ಹೇಳಿದರು.

ಈ ಸಮಯದಲ್ಲಿ ಮುಖಂಡರಾದ ಗುಂಡೂರು ಲೋಕೇಶ್‌, ಸಿ.ಕೆ.ಸುರೇಶ್‌, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ಮತ್ತಿತರರಿದ್ದರು.