ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹಾಗೂ ಅವರ ವಚನಗಳನ್ನು ತಪ್ಪಾಗಿ ವಿಶ್ಲೇಷಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ಬಸವಣ್ಣನವರು ಕೇವಲ ಲಿಂಗಾಯತ ಧರ್ಮಕ್ಕೆ ಸೀಮಿತವಾದವರಲ್ಲ. ಇಡೀ ಸಮಾಜಕ್ಕೆ ಮಾದರಿಯಾದ ಮಹಾನ್ ವ್ಯಕ್ತಿತ್ವ ಎಂದು ಶಾಸಕ, ಮಾಜಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಹಾವೇರಿ:ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹಾಗೂ ಅವರ ವಚನಗಳನ್ನು ತಪ್ಪಾಗಿ ವಿಶ್ಲೇಷಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ಬಸವಣ್ಣನವರು ಕೇವಲ ಲಿಂಗಾಯತ ಧರ್ಮಕ್ಕೆ ಸೀಮಿತವಾದವರಲ್ಲ. ಇಡೀ ಸಮಾಜಕ್ಕೆ ಮಾದರಿಯಾದ ಮಹಾನ್ ವ್ಯಕ್ತಿತ್ವ ಎಂದು ಶಾಸಕ, ಮಾಜಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೇಖಕ ರವಿ ಹಂಜ್ ಪುಸ್ತಕದಲ್ಲಿ ಬಸವಣ್ಣನವರ ಕುರಿತು ತಪ್ಪು ವ್ಯಾಖ್ಯಾನ ಅಥವಾ ಆಕ್ಷೇಪಾರ್ಹ ಅಂಶಗಳನ್ನು ದಾಖಲಿಸಿದ್ದರೆ ಅದು ಖಂಡಿತ ಖಂಡನೀಯ. ಬಸವಣ್ಣನವರನ್ನು ನಾವು ದೇವರ ಸ್ವರೂಪದಲ್ಲಿ ಕಾಣುತ್ತೇವೆ. ಅವರ ವ್ಯಕ್ತಿತ್ವಕ್ಕೆ ಅಪಚಾರ ಎಸಗುವ ಕೆಲಸ ಯಾರೂ ಮಾಡಬಾರದು. ವಚನಗಳನ್ನು ತಪ್ಪಾಗಿ ವಿಶ್ಲೇಷಿಸುವುದು ದೊಡ್ಡ ಅಪರಾಧ. ಲಿಂಗಾಯತರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಸಲ್ಲದು ಎಂದರು.ಬಸವಣ್ಣನವರು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಮಾತ್ರ ಮಾರ್ಗದರ್ಶನ ನೀಡಿದವರಲ್ಲ. ಅವರ ವಚನಗಳಲ್ಲಿ ಮನುಷ್ಯತ್ವದ ಸುಧಾರಣೆ ಹಾಗೂ ಸಮಾಜಕ್ಕೆ ಉತ್ತಮ ಸಂದೇಶಗಳಿವೆ. ಸರ್ಕಾರ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಸ್ವಾಗತಾರ್ಹ. ಪುಸ್ತಕದ ವಿಚಾರವಾಗಿ ನ್ಯಾಯಾಲಯ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ತಾವು ಈವರೆಗೆ ಪುಸ್ತಕ ಓದಿಲ್ಲ. ಓದಿದ ಬಳಿಕ ಸಂಪೂರ್ಣ ವಿಚಾರ ತಿಳಿದುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಕಬ್ಬಿಗೆ ಕೇಂದ್ರದಿಂದಲೇ ಎಂಎಸ್ಪಿ ಘೋಷಣೆಯಾಗಲಿಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರೆಯಬೇಕಾದರೆ ಕೇಂದ್ರ ಸರ್ಕಾರವೇ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿಪಡಿಸಬೇಕು. ಎಫ್ಆರ್ಪಿ ದರವನ್ನು ₹ 3,600ಕ್ಕೆ ನಿಗದಿಪಡಿಸುವ ಕೇಂದ್ರ ಸರ್ಕಾರ ಎಂಎಸ್ಪಿ ಘೋಷಣೆ ಮಾಡಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಮಾಜಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಪ್ರಶ್ನಿಸಿದರು.
ಕಬ್ಬಿನ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕಾರ್ಖಾನೆ ಮಾಲೀಕರ ಮನವಿಯನ್ನು ಕಳೆದ 8-9 ವರ್ಷಗಳಿಂದ ಕೇಂದ್ರ ಸರ್ಕಾರ ಪರಿಗಣಿಸಿಲ್ಲ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳಿಗೆ ಸಾರಿಗೆ ವೆಚ್ಚದ ಹೊರೆ ಹೆಚ್ಚಾಗಿದೆ. ಅಲ್ಲದೆ, ಕಾರ್ಖಾನೆಯಿಂದ ಕಾರ್ಖಾನೆಗೆ ಲಾಭದ ಪ್ರಮಾಣವೂ ವಿಭಿನ್ನವಾಗಿರುತ್ತದೆ. ಹೀಗಾಗಿ ಎಲ್ಲ ಕಾರ್ಖಾನೆಗಳಿಗೂ ಒಂದೇ ಮಾನದಂಡದಲ್ಲಿ ಬೆಲೆ ನಿಗದಿಪಡಿಸುವ ಬದಲು ಲಾಭ ಹಂಚಿಕೆ (ಪ್ರಾಫಿಟ್ ಶೇರಿಂಗ್) ಆಧಾರದಲ್ಲಿ ರೈತರಿಗೆ ಹೆಚ್ಚುವರಿ ಹಣ ನೀಡಲು ಸರ್ಕಾರ ಮುಂದಾಗಬೇಕು ಎಂದರು.ರೈತರು 12 ತಿಂಗಳು ಕಷ್ಟಪಟ್ಟು ಕಬ್ಬು ಬೆಳೆದಿರುತ್ತಾರೆ. ಅವರಿಗೆ ಯೋಗ್ಯ ಬೆಲೆ ಸಿಗಲೇಬೇಕು. ಕಬ್ಬಿನ ಸಕ್ಕರೆ ಅಂಶದ ಹೆಸರಿನಲ್ಲಿ ಕಾರ್ಖಾನೆ ಮಾಲೀಕರು ರೈತರಿಗೆ ಮೋಸ ಮಾಡಬಾರದು. ಕೇವಲ ರಿಕವರಿ ಪ್ರಮಾಣವನ್ನೇ ಆಧರಿಸಿ ಕಬ್ಬಿನ ಬೆಲೆ ನಿಗದಿಪಡಿಸುವುದು ಸರಿಯಲ್ಲ. ಮಳೆ ಕೊರತೆಯಿಂದ ಈಗಾಗಲೇ ಇಳುವರಿ ಕುಸಿದಿದ್ದು, ರೈತರು ಎರಡು ರೀತಿಯ ನಷ್ಟ ಅನುಭವಿಸುವಂತಾಗಬಾರದು ಎಂದು ಹೇಳಿದರು.
ಜಿಲ್ಲಾಡಳಿತ, ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ತ್ರಿಪಕ್ಷೀಯ ಒಪ್ಪಂದವಾಗುವುದು ಅನಿವಾರ್ಯ. ಮೊದಲು ಕಬ್ಬು ಕಟಾವು ಪ್ರಕ್ರಿಯೆ ಆರಂಭಿಸಿ ರೈತರ ಹಿತ ಕಾಪಾಡಬೇಕು. ಕಾರ್ಖಾನೆಗಳ ಲಾಭದ ಪ್ರಮಾಣಕ್ಕೆ ಅನುಗುಣವಾಗಿ ರೈತರಿಗೆ ಪ್ರಾಫಿಟ್ ಶೇರಿಂಗ್ ನೀಡಬೇಕು. ರೈತರಿಗೆ ಹೆಚ್ಚಿನ ಹಣ ನೀಡಿದರೆ ಕಾರ್ಖಾನೆಗಳಿಗೆ ಹೊರೆಯಾಗುತ್ತದೆ ಎಂಬ ವಾದ ಸರಿಯಲ್ಲ ಎಂದು ತಿಳಿಸಿದರು.