ಸಾರಾಂಶ
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸ್ಥಾಪನೆಗೆ ಸರ್ಕಾರದಿಂದ ಶಾಸಕರು ಕ್ರಮಕೈಗೊಳ್ಳಲು ಸಹಕಾರ ನೀಡಲಿದ್ದಾರೆ.
ಹೊಸಪೇಟೆ: ಜಿಲ್ಲಾ ನ್ಯಾಯಾಲಯಕ್ಕೆ ಅಗತ್ಯ ಜಮೀನು, ಮೂಲಭೂತ ಸೌಕರ್ಯಗಳ ಕಲ್ಪಿಸಲು ಸರ್ಕಾರದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ರಾಜ್ಯ ವಕೀಲರ ಪರಿಷತ್ತು ಬೆಂಗಳೂರು, ನ್ಯಾಯಾಲಯ ಇಲಾಖೆ, ವಿಜಯನಗರ ಜಿಲ್ಲಾ ವಕೀಲರ ಸಂಘ ಹೊಸಪೇಟೆ ಸಹಯೋಗದಲ್ಲಿ ಶುಕ್ರವಾರ ನಡೆದ "ವಕೀಲರಿಗಾಗಿ ಮೂರು ದಿನಗಳ ಕಾನೂನು ಕಾರ್ಯಾಗಾರ " ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸ್ಥಾಪನೆ ಮತ್ತು 10 ಎಕರೆ ಜಮೀನು ಹಸ್ತಾಂತರದ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿಕೊಂಡಿರುವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ವಕೀಲರು ಕಕ್ಷಿದಾರರಿಗೆ ಶೀಘ್ರ ನ್ಯಾಯ ದೊರಕಿಸಿಕೊಡಬೇಕು. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸ್ಥಾಪನೆಗೆ ಸರ್ಕಾರದಿಂದ ಶಾಸಕರು ಕ್ರಮಕೈಗೊಳ್ಳಲು ಸಹಕಾರ ನೀಡಲಿದ್ದಾರೆ ಎಂದರು.
ಮುಖಂಡ ಕೆ.ಬಿ. ಶ್ರೀನಿವಾಸರೆಡ್ಡಿ, ವಿಜಯನಗರ ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಕೆ. ಪ್ರಹ್ಲಾದ್, ಉಪಾಧ್ಯಕ್ಷ ಎಚ್.ಎಂ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಪಿ. ಶ್ರೀನಿವಾಸಮೂರ್ತಿ, ಜಂಟಿ ಕಾರ್ಯದರ್ಶಿ ರವಿಕುಮಾರ, ಖಜಾಂಚಿ ಎ. ಮರಿಯಪ್ಪ, ಹಿರಿಯ ವಕೀಲರಾದ ವೀರಭದ್ರಪ್ಪ, ಖಾದರ್ ವಲಿ, ಗುಜ್ಜಲ ನಾಗರಾಜ, ಎ.ಕರುಣಾನಿಧಿ, ಕಲ್ಲಂಭಟ್ ಮತ್ತಿತರರಿದ್ದರು.