ಸಭೆಗೆ ಅಧಿಕಾರಿಗಳ ಹಾಜರಾತಿ ಕಡ್ಡಾಯ

| Published : May 13 2025, 01:24 AM IST

ಸಾರಾಂಶ

ಜನಸ್ಪಂದನಾ ಸಭೆ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ. ಈ ಸಭೆಯ ಮೂಲಕ ಜನರಿಗೆ ಸಿಗುವಂತಹ ಸೌಲಭ್ಯಗಳನ್ನು ಸ್ಥಳದಲ್ಲಿಯೇ ದೊರಕಿಸಿಕೊಡುವ ಹಾಗೂ ಸರ್ಕಾರಿ ಇಲಾಖೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ತಾಲೂಕು ಅಧಿಕಾರಿಗಳು ಹಾಜರಿರಬೇಕು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಾಲೂಕಿನ ಉಲ್ಲೋಡು ಗ್ರಾಪಂ ವ್ಯಾಪ್ತಿಯಲ್ಲಿ ಮೇ 16 ರಂದು ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ಬೇರೆ ಯಾರನ್ನೂ ನಿಯೋಜಿಸದೆ ಖುದ್ದು ಸಭೆಯಲ್ಲಿ ಹಾಜರಿರಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನಾ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತಿಚಿಗೆ ಕೆಲ ತಾಲೂಕು ಮಟ್ಟದ ಅಧಿಕಾರಿಗಳು ಜನಸ್ಪಂದನಾ ಕಾರ್ಯಕ್ರಮಕ್ಕೆ ತಮ್ಮ ಅಧೀನ ಅಧಿಕಾರಿಗಳನ್ನು ಕಳುಹಿಸುವುದು ಸರಿಯಲ್ಲ ಎಂದರು.

ಸಾರ್ವಜನಿಕರಿಗೆ ಅನುಕೂಲ

ಜನಸ್ಪಂದನಾ ಸಭೆ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ. ಈ ಸಭೆಯ ಮೂಲಕ ಜನರಿಗೆ ಸಿಗುವಂತಹ ಸೌಲಭ್ಯಗಳನ್ನು ಸ್ಥಳದಲ್ಲಿಯೇ ದೊರಕಿಸಿಕೊಡುವ ಹಾಗೂ ಸರ್ಕಾರಿ ಇಲಾಖೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ತಾಲೂಕು ಅಧಿಕಾರಿಗಳು ಬಂದರೇ ತಮ್ಮ ಇಲಾಖೆಗಳಲ್ಲಿ ಸಿಗುವಂತಹ ಸೌಲಭ್ಯಗಳನ್ನು ದೊರಕಿಸಿಕೊಡಲು ಹಾಗೂ ಮಾಹಿತಿ ನೀಡಲು ಅನೂಕೂಲವಾಗುತ್ತದೆ. ಇಲ್ಲವಾದಲ್ಲಿ ಸಮಸ್ಯೆಯಾಗುತ್ತದೆ. ಆದ್ದರಿಂದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಈ ಸಭೆಗೆ ಹಾಜರಾಗಬೇಕು ಎಂದು ಸೂಚಿಸಿದರು.

ಅಹವಾಲು ಆಲಿಸಿದ ಶಾಸಕ

ಈ ಸಮಯದಲ್ಲಿ ಹಾಜರಿದ್ದ ಉಲ್ಲೋಡು ಗ್ರಾ.ಪಂ ವ್ಯಾಪ್ತಿಯ ಮುಖಂಡರು ಹಾಗೂ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾ.ಪಂ ಇಒ ನಾಗಮಣಿ, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀಪತಿರೆಡ್ಡಿ, ಕೃಷಿ ಇಲಾಖೆಯ ಕೇಶವರೆಡ್ಡಿ, ಪಶು ಇಲಾಖೆಯ ಸುಬ್ರಮಣಿ,ತೋಟಗಾರಿಕೆ ಇಲಾಖೆಯ ಬಾಲಾಜಿ, ಉಲ್ಲೋಡು ಗ್ರಾ.ಪಂ ಪಿಡಿಒ ಅರ್ಚನಾ, ಮುಖಂಡರಾದ ಲಕ್ಷ್ಮೀನಾರಾಯಣ, ರಾಜಾರೆಡ್ಡಿ ಸೇರಿದಂತೆ ಹಲವರು ಇದ್ದರು.