ಸ್ಥಳೀಯ ವಿನಾಯಕ ನಗರದಲ್ಲಿ ನಾಗರಿಕ ವೇದಿಕೆಯಿಂದ ಆಯೋಜಿಸಿದ್ದ ನಿಶ್ಚಯಿಸಿದ ವಿವಾಹ ಹಾಗೂ ಪ್ರೇಮ ವಿವಾಹ ವಿಷಯದ ಸಂವಾದ ವಿಶೇಷ ಗಮನ ಸೆಳೆಯಿತು.

ಹಾವೇರಿ: ಸ್ಥಳೀಯ ವಿನಾಯಕ ನಗರದಲ್ಲಿ ನಾಗರಿಕ ವೇದಿಕೆಯಿಂದ ಆಯೋಜಿಸಿದ್ದ ನಿಶ್ಚಯಿಸಿದ ವಿವಾಹ ಹಾಗೂ ಪ್ರೇಮ ವಿವಾಹ ವಿಷಯದ ಸಂವಾದ ವಿಶೇಷ ಗಮನ ಸೆಳೆಯಿತು. ನಿಶ್ಚಿಯಿಸಿದ ವಿವಾಹದ ಕುರಿತು ಶಿಕ್ಷಕ ಬಿ.ಆರ್. ನದಾಫ್, ಉಪನ್ಯಾಸಕಿ ಸುಮಂಗಲ ಕಾರಗಿ, ಅನಿತಾ ಹಿಂಚಿಗೇರಿ ಮಾತನಾಡಿ, ನಿಶ್ಚಿತ ಮದುವೆಯ ಸಂಬಂಧಗಳನ್ನು ತಂದೆ-ತಾಯಿ ಸಮೇತ ಅಪಾರ ಬಂಧು ಬಳಗದವರು ಮಾಡುತ್ತಾರೆ. ಅದಕ್ಕೆ ಅವರ ಹಾಜರಿ, ಹಾರೈಕೆ, ಆಶೀರ್ವಾದ ಇರುತ್ತದೆ. ಗಂಡ-ಹೆಂಡತಿ ನಡುವೆ ಬಿರುಕುಗಳು ಮೂಡಿದರೆ ಅವುಗಳು ದೊಡ್ಡ ದೊಡ್ಡ ಕಂದಕಗಳಾಗಲು ಬಿಡದೇ ಆಗಿಂದಾಗಲೇ ಪರಸ್ಪರ ತಿಳಿ ಹೇಳಿ ಹಿರಿಯರು ಸರಿಪಡಿಸುತ್ತಾರೆ ಎಂದು ವಾದ ಮಂಡಿಸಿದರು. ಪ್ರೇಮ ವಿವಾಹಗಳ ಕುರಿತಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಯಾಳ, ಶಿಕ್ಷಕ ಎಸ್.ಎ.ಸಾಣಿ, ನಿವೃತ್ತ ಶಿಕ್ಷಕ ಎಸ್.ಎಲ್.ಕಾಡದೇವರಮಠ ಸಮರ್ಥನೆಯನ್ನು ವಿರೋಧಿಸಿ ಮಾತನಾಡಿ, ಬಾಳಸಂಗಾತಿ ಆಯ್ಕೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ಪರಸ್ಪರ ಭೇಟಿಯಾಗಿ ಅವರ ಆಸೆ, ಆಕಾಂಕ್ಷೆ, ಅಭಿರುಚಿಗಳ ಪರಸ್ಪರ ಚರ್ಚೆಗೆ ಅವಕಾಶಗಳು ಪ್ರೇಮ ವಿವಾಹದಲ್ಲಿ ಹೆಚ್ಚಿರುತ್ತವೆ. ಇದರಿಂದ ಮುಂದಿನ ಅವರ ಬಾಳು ಸುಂದರವಾಗಲು ಕಾರಣವಾಗುತ್ತದೆ. ಈ ಅವಕಾಶಗಳು ನಿಶ್ಚಿತ ವಿವಾಹದಲ್ಲಿ ಇರುವುದಿಲ್ಲ. ಅಜ್ಜ ಹಾಕಿದ ಆಲದಮರಕ್ಕೆ ಉರುಳು ಹಾಕಿಕೊಳ್ಳುವುದು ಬೇಡ ಎಂದು ಏಟಿಗೆ ಎದುರೇಟು ನೀಡಿದರು.ಸಂವಾದವನ್ನು ನಡೆಸಿಕೊಟ್ಟ ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಗಂಡ- ಹೆಂಡತಿ ಇಬ್ಬರೂ ತಮ್ಮ ಅಹಂನ್ನು ಬಿಟ್ಟು ತಮ್ಮಲ್ಲೇ ತಾವು ಸೋಲಲು ಸಿದ್ಧರಾದರೆ ಪ್ರೇಮ ವಿವಾಹವೇ ಇರಲಿ, ನಿಶ್ಚಿತ ವಿವಾಹಗಳೆ ಇರಲಿ ಎಲ್ಲವೂ ಪರಿಪೂರ್ಣತೆ ಸಾಧಿಸಿ ಕೌಟುಂಬಿಕ ಜೀವನ ಸುಖಮಯವಾಗುತ್ತದೆ ಎಂದು ಸಮನ್ವಯ ಸಾಧಿಸಿದರು. ಸಂಘದ ಅಧ್ಯಕ್ಷ ಎನ್.ಬಿ. ಕಾಳೆ ಮಾತನಾಡಿದರು. ಶಂಕರ ಸುತಾರ, ಆಶಾ ತಿಮ್ಮಾಪೂರ, ರಂಜಿತ್ ಕೊಪರ್ಡೆ, ಜಯಶ್ರೀ ದೊಡ್ಡಮನಿ ತಮ್ಮ ಅನಿಸಿಕೆ ಹಂಚಿಕೊಂಡರು. ಸಿದ್ದಣ್ಣ ಎಲಿಗಾರ, ಬಸವರಾಜ ಮರಳಿಹಳ್ಳಿ, ಕೊಟ್ರೇಶ ನಡುವಿನಮಠ, ರಮೇಶ ದೊಡ್ಡಮನಿ, ಟಿ.ಜಿ. ಚನ್ನವೀರಪ್ಪ, ಹಜೀಬ್ ಇದ್ದರು. ಪ್ರಾಚಾರ್ಯ ಶಶಿಧರ್ ಕಾರಗಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿಂಚಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಮಲ್ಲಿಕಾರ್ಜುನ ಅಗಡಿ ವಂದಿಸಿದರು.