ಮಡಿಕೇರಿ: ಗಮನ ಸೆಳೆದ ಮತದಾನ ಜಾಗೃತಿ ಜಾಥಾ

| Published : Apr 22 2024, 02:15 AM IST

ಸಾರಾಂಶ

ನಮ್ಮ ನಡೆ ಮತಗಟ್ಟೆ ಕಡೆ ಕಾಲ್ನಡಿಗೆ ಜಾಥಾವನ್ನು ಭಾನುವಾರ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದ ಆವರಣದಿಂದ ಆಯೋಜಿಸಲಾಗಿತ್ತು. ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಡಿಕೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸಲು ನಮ್ಮನಡೆ ಮತಗಟ್ಟೆ ಕಡೆ ಕಾಲ್ನಡಿಗೆ ಜಾಥಾವನ್ನು ಭಾನುವಾರ‌ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದ ಆವರಣದಿಂದ ಆಯೋಜಿಸಲಾಗಿತ್ತು.

ನಮ್ಮ‌ನಡೆ‌ ಮತಗಟ್ಟೆ ಕಡೆ ಕಾಲ್ನಡಿಗೆ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ್ ನೇಗಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ‌ ನೀಡಿದರು.

ಕಾಲ್ನಡಿಗೆ ಜಾಥಾವು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಹಿಲ್ ರಸ್ತೆಯಲ್ಲಿರುವ ನಗರಸಭಾ ಪ್ರಾಥಮಿಕ ಶಾಲಾ ಆವರಣ ತಲುಪಿತು. ಅಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ವರ್ಣೀತ್ ಮೇಗಿ ಅವರು ಮತದಾನ ಧ್ವಜಾರೋಹಣ ನೆರವೇರಿಸಿ‌ ಮಾತನಾಡಿದರು.

ಸಂವಿಧಾನ ಎಲ್ಲರಿಗೂ ಮತದಾನ ಹಕ್ಕು ನೀಡಿದೆ, ಅದನ್ನು ಅರ್ಹರಿಗೆ ನೀಡಬೇಕು. ನೀವು ಮತದಾನ ಮಾಡಿ ನಿಮ್ಮವರನ್ನು ಮತ ಚಲಾಯಿಸಲು ಪ್ರೇರೇಪಣೆ ಮಾಡಿ ಎಂದು ಕರೆ ನೀಡಿದರು.

ಏ. 26ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಜಿಲ್ಲಾದ್ಯಂತ ಲೋಕಸಭಾ‌ ಚುನಾವಣೆಗೆ ಮತದಾನ ನಡೆಯಲಿದೆ. ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಮತದಾರರ ಚೀಟಿ, ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಗುತ್ತಿದೆ. ಮತದಾರರ ಚೀಟಿ ಇನ್ನೂ ದೊರೆಯದಿದ್ದಲ್ಲಿ ಸಂಬಂಧಪಟ್ಟ ಕ್ಷೇತ್ರ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆಯಬಹುದು. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ ಸೇರಿದಂತೆ ಇತರೆ ದಾಖಲೆಗಳನ್ನು ಹಾಜರುಪಡಿಸಿ ಮತದಾನ ಮಾಡಬಹುದು. ಎಲ್ಲರೂ ತಪ್ಪದೇ ಮತದಾನ ಮಾಡಿ ಸುಭದ್ರ ಸರ್ಕಾರ ರಚನೆ‌ ಮಾಡುವಲ್ಲಿ ತಾವುಗಳೆಲ್ಲರು ಪಾಲ್ಗೊಳ್ಳುವಂತೆ ತಿಳಿಸಿದರು.

ನಮ್ಮ ನಡೆ ಮತಗಟ್ಟೆಯ ಕಡೆ ಜಾಗೃತಿ ಹಾಗೂ ಧ್ವಜಾರೋಹಣ ಕಾರ್ಯಕ್ರಮವನ್ನು ಪ್ರಸ್ತುತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಕರ್ನಾಟಕದಲ್ಲಿ ಏಪ್ರಿಲ್ 26 ರಂದು ನಡೆಯಲಿದ್ದು ಮತದಾರರ ಜಾಗೃತಿಗಾಗಿ ಎಲ್ಲಾ 14 ಲೋಕಸಭಾ ಕ್ಷೇತ್ರಗಳ 112 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 30, 577 ಮತಗಟ್ಟೆಗಳಲ್ಲಿ ಏಪ್ರಿಲ್ 21 ರಂದು ಬೆಳಗ್ಗೆ 8 ಗಂಟೆಗೆ ಏಕ ಕಾಲಕ್ಕೆ ನಮ್ಮ ನಡೆ ಮತಗಟ್ಟೆ ಕಡೆ ಜಾಗೃತಿ ಹಾಗೂ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲು ಚುನಾವಣಾ ಆಯೋಗ‌‌‌ ಸೂಚಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ‌ ಎಂದರು.

ಕೊಡಗು ಜಿಲ್ಲೆಯ 2 ವಿಧಾನ‌ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.‌ ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಉಪವಿಭಾಗಾಧಿಕಾರಿ ವಿನಾಯಕ್ ನಾರ್ವೆ ಅವರು ಮತದಾರರಿಗೆ ಓಟರ್ ಸ್ಲೀಪ್ ವಿತರಿಸಿ ಮಾತನಾಡಿ, ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಹಲವಾರು ಮತದಾನ ಜಾಗೃತಿ ಚಟುವಟಿಕೆಗಳನ್ನು ಆಯೋಜಿಸಿ ಜಿಲ್ಲೆಯ ನಾಗರಿಕರಿಗೆ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಏ. 26 ರಂದು ತಪ್ಪದೇ‌ ಮತಗಟ್ಟೆಗೆ ತೆರಳಿ‌ ಮತದಾನ‌ಮಾಡಿ, ನಿಮ್ಮ ಕರ್ತವ್ಯ ಪೂರ್ಣಗೊಳಿಸುವಂತೆ ಹೇಳಿದರು.

ಜಿಲ್ಲಾ‌ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಶೇಖರ ಅವರಿಂದ ನೆರದ ಸಾರ್ವಜನಿಕರು, ಅಧಿಕಾರಿಗಳಿಗೆ ಮತದಾನ ಪ್ರತಿಜ್ಞೆ ವಿಧಿ ಬೋಧನೆ ಮಾಡಲಾಯಿತು.

ವಿದ್ಯಾ ಸಾಗರ ಕಲಾತಂಡದಿಂದ ಮತದಾನ ನಮ್ಮ ಹಕ್ಕು ನಾಟಕ ಪ್ರದರ್ಶನ ಏರ್ಪಡಿಸಲಾಗುತ್ತು. ಕಲಾವಿದರು ತಮ್ಮದೇ ಶೈಲಿಯಲ್ಲಿ ಮತದಾನ ಜಾಗೃತಿ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಿದರು.

ಜಾಥಾ ಮಾರ್ಗದುದ್ದಕ್ಕೂ ಚುನಾವಣಾ ಘೋಷವಾಕ್ಯಗಳಾದ ಚುನಾವಣಾ ಪರ್ವ-ದೇಶದ ಗರ್ವ, ಮತದಾನ ನಮ್ಮ ಹಕ್ಕು, ಎಲ್ಲರೂ ನೈತಿಕ ಮತದಾನ ಬೆಂಬಲಿಸಿ, ಕಡ್ಡಾಯವಾಗಿ ಮತದಾನ ಮಾಡಿ ಸೇರಿದಂತೆ ಜಾಗೃತಿ ಘೋಷವಾಕ್ಯಗಳನ್ನು ಮೊಳಗಿಸಿ ನಾಗರಿಕರಿಗೆ ಮತದಾನದ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.