ಅವಧಿ ಮುಗಿದಿರುವ ಅಂಗಡಿಗಳ ಹರಾಜು ಮಾಡಿ: ಶಾಸಕ ಎಚ್.ಸಿ.ಬಾಲಕೃಷ್ಣ

| Published : Oct 08 2024, 01:05 AM IST

ಅವಧಿ ಮುಗಿದಿರುವ ಅಂಗಡಿಗಳ ಹರಾಜು ಮಾಡಿ: ಶಾಸಕ ಎಚ್.ಸಿ.ಬಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆಯಲ್ಲಿ ಅವಧಿ ಮುಗಿದಿರುವ ವಾಣಿಜ್ಯ ಮಳಿಗೆಗಳ ಮರು ಹರಾಜಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾಗಡಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

-ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ

ಕನ್ನಡಪ್ರಭ ವಾರ್ತೆ ಮಾಗಡಿ

ಪುರಸಭೆಯಲ್ಲಿ ಅವಧಿ ಮುಗಿದಿರುವ ವಾಣಿಜ್ಯ ಮಳಿಗೆಗಳ ಮರು ಹರಾಜಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಳಿಕೆ ಇರುವ 31 ಅಂಗಡಿಗಳನ್ನು ಮರು ಹರಾಜು ಮಾಡಲು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಪ್ರಕ್ರಿಯೆ ಆರಂಭಿಸಬೇಕು. ಇದರಲ್ಲಿ ಕುವೆಂಪು ವಾಣಿಜ್ಯ ಮಳಿಗೆಯನ್ನು ಸೇರಿಸುವಂತೆ ಪುರಸಭಾ ಸದಸ್ಯರಾದ ಅಶ್ವಥ್ ಹಾಗೂ ರಂಗಹನುಮಯ್ಯ ಒತ್ತಾಯಿಸಿದರು.

ಇನ್ನೊಂದು ತಿಂಗಳ ಒಳಗಾಗಿ ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮೀಸಲಾತಿಯೊಂದಿಗೆ ಹರಾಜು ಪ್ರಕ್ರಿಯೆಗೆ ತರಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತ್ಯಾಜ್ಯ ನಿರ್ವಹಣೆಗೆ ಆಗ್ರಹ: ಪಟ್ಟಣದ ತಿರುಮಲೆ ಸಮೀಪ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. 2018ರಲ್ಲಿ ಖರೀದಿಸಿರುವ ಯಂತ್ರವನ್ನು ಇದುವರೆಗೂ ಬಳಸಿಲ್ಲ. ಈಗ ಮತ್ತೆ ಹೊಸ ಯಂತ್ರಗಳನ್ನು ತರಿಸುತ್ತೇವೆ ಎನ್ನುತ್ತಿದ್ದಾರೆ. ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡದಿದ್ದರೆ ಎಷ್ಟು ಲಕ್ಷ ಹಣದ ಯಂತ್ರಗಳನ್ನು ತಂದರೂ ಪ್ರಯೋಜನವಿಲ್ಲ. ಅಧಿಕಾರಿಗಳು ಈ ಬಗ್ಗೆ ಸರಿಯಾದ ಕ್ರಮ ವಹಿಸಬೇಕು ಎಂದು ಸದಸ್ಯರಾದ ಎಂ.ಎನ್. ಮಂಜುನಾಥ್, ಅಶ್ವಥ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಸಕ ಬಾಲಕೃಷ್ಣ ಮಾತನಾಡಿ, 10 ಎಕರೆ ಗೋಮಾಳ ಜಾಗ ಗುರುತಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಘನ ತ್ಯಾಜ್ಯ ಘಟಕ ಸ್ಥಳಾಂತಿರಿಸಿ ಎಲ್ಲಾ ರೀತಿಯ ಯಂತ್ರಗಳನ್ನು ಬಳಸಿ ಘನ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಸಲಾಗುವುದು ಎಂದರು.

ಕರ ವಸೂಲಿ ಮಾಡದಿದ್ದರೆ ಸಂಬಳ ಕಟ್: ಪುರಸಭೆ ನಿರ್ವಹಣೆ ಮಾಡಲು ಅಧಿಕಾರಿಗಳು ಕರ ವಸೂಲಿಗೆ ಹೆಚ್ಚಿನ ಒತ್ತು ಕೊಡಬೇಕು. ಯಾವ ಅಧಿಕಾರಿ ಗುರಿಯನ್ನು ತಲುಪುವುದಿಲ್ಲವೋ ಅಂತಹ ಅಧಿಕಾರಿಗಳ ಸಂಬಳ ಕಟ್ ಮಾಡಬೇಕು. ಒಂದು ವೇಳೆ ಮುಖ್ಯಾಧಿಕಾರಿಗಳು ಅಧಿಕಾರಿಗಳಿಂದ ಕೆಲಸ ಸರಿಯಾಗಿ ಮಾಡಿಸದಿದ್ದರೆ ಮುಖ್ಯಾಧಿಕಾರಿಗಳ ಸಂಬಳ ಕಟ್ ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಬೇಕಾಗುತ್ತದೆ. ಪಟ್ಟಣ ನಿರ್ವಹಣೆಗೆ ಕರ ವಸೂಲಿಗೆ ಹೆಚ್ಚಿನ ಒತ್ತನ್ನು ಕೊಡಬೇಕು ಎಂದು ಬಾಲಕೃಷ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪತ್ರಿಕಾ ಭವನ, ಕನ್ನಡ ಭವನಕ್ಕೆ ನಿವೇಶನ: ಪುರಸಭಾ ವ್ಯಾಪ್ತಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮತ್ತು ಕನ್ನಡ ಭವನಕ್ಕೆ ನಿವೇಶನ ನೀಡಲು ಸದಸ್ಯರು ಸಭೆಯಲ್ಲಿ ಒಪ್ಪಿಗೆ ಸೂಚಿದರು. ಶಾಸಕ ಬಾಲಕೃಷ್ಣ ಪಟ್ಟಣದ ಗುಂಡಯ್ಯನ ಬಾವಿ ಸಮೀಪ ಪತ್ರಿಕಾ, ಕನ್ನಡ ಭವನ ನಿವೇಶನ ನೀಡಲು ತೀರ್ಮಾನಿಸಿದರು.

ಪಟ್ಟಣದ 8 ಮತ್ತು 9 ನೇ ವಾರ್ಡನಲ್ಲಿ ಅಂಗನವಾಡಿ ಇಲ್ಲ, ಇದರ ಬಗ್ಗೆ ಗಮನ ಹರಿಸುವಂತೆ ಆಶಾರಾಣಿ ಮತ್ತು ಅಶ್ವಥ್ ಮನವಿ ಮಾಡಿದರು. ಶಾಸಕರು ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಅಂಗನವಾಡಿ ಕೇಂದ್ರ ತೆರೆಯಲು ಸೂಚಿಸಿ, ಇನ್ನೂ ಯಾವ್ಯಾವ ವಾರ್ಡ್‌ಗಳಲ್ಲಿ ಅಂಗನವಾಡಿ ಇಲ್ಲ, ಅದನ್ನು ಗಮನಕ್ಕೆ ತಂದರೆ ಅಂಗನವಾಡಿ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ ವಹಿಸಿದ್ದರು. ಉಪಾಧ್ಯಕ್ಷ ರಿಯಾಜ್, ಮುಖ್ಯ ಅಧಿಕಾರಿ ಶಿವರುದ್ರಯ್ಯ ಸೇರಿದಂತೆ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.