ಹಾಸನದಲ್ಲಿ ರೈತನ ಭೂಮಿ ಹರಾಜು: ಕೆನರಾ ಬ್ಯಾಂಕಿಗೆ ರೈತರಿಂದ ಮುತ್ತಿಗೆ

| Published : Mar 06 2024, 02:19 AM IST

ಸಾರಾಂಶ

ರೈತ ಸಂಘದ ಕಾರ್ಯಕರ್ತರು ಮಂಗಳವಾರ ಹಾಸನದ ಕೆನರಾ ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿ ಬ್ಯಾಂಕ್‌ ಡಿಜಿಎಂ ಪಿ.ವಿ.ಜಯಕುಮಾರ್‌ ಅವರಿಗೆ ಘೇರಾವ್‌ ಹಾಕಿದರು. ಬಳಿಕ ಅವರಿಂದಲೇ ಆಶ್ವಾಸನೆ ಪಡೆದರು.

ಸಾಲ ಮಾಡಿಕೊಳ್ಳಲು ಕೆನರಾ ಬ್ಯಾಂಕ್‌ ಕ್ರಮ । ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ । ಬ್ಯಾಂಕ್‌ ಡಿಜಿಎಂಗೆ ಘೇರಾವ್‌

ಕನ್ನಡಪ್ರಭ ವಾರ್ತೆ ಹಾಸನ

ಪಡೆದಿದ್ದ ಸಾಲ ತೀರಿಸಿಲ್ಲ ಎನ್ನುವ ಕಾರಣಕ್ಕೆ ಇ ಟೆಂಡರ್‌ ಮೂಲಕ ಭೂಮಿ ಹರಾಜು ಮಾಡಿದ್ದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಕೆನರಾ ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿ ಬ್ಯಾಂಕ್‌ ಡಿಜಿಎಂ ಪಿ.ವಿ.ಜಯಕುಮಾರ್‌ ಅವರಿಗೆ ಘೇರಾವ್‌ ಹಾಕಿದರು. ಬಳಿಕ ಅವರಿಂದಲೇ ಆಶ್ವಾಸನೆ ಪಡೆದರು.

ಆಲೂರು ತಾಲೂಕಿನ ರಾಯರಕೊಪ್ಪಲು ಕೆನರಾ ಬ್ಯಾಂಕ್‌ನಲ್ಲಿ ರುದ್ರಪ್ಪ ಎಂಬುವವರು 7.5 ಅಕರೆ ಜಮೀನನ್ನು ಅಡವಿಟ್ಟು 10 ಲಕ್ಷ ರುಪಾಯಿ ಸಾಲ ಪಡೆದಿದ್ದರು. ಆದರೆ, ಸರಿಯಾದ ಸಮಯದಲ್ಲಿ ಬಡ್ಡಿ ಕಟ್ಟದ ಕಾರಣ ಸಾಲ 42 ಲಕ್ಷ ರು. ಆಗಿತ್ತು. ಇದೀಗ ಬ್ಯಾಂಕ್‌ ಈ ಆಸ್ತಿಯನ್ನು ಇ ಹರಾಜಿನ ಮೂಲಕ 65 ಲಕ್ಷ ರುಪಾಯಿಗೆ ಮಾರಾಟ ಮಾಡಿದೆ. ರುದ್ರಪ್ಪ ಅವರು ಇಷ್ಟು ದೊಡ್ಡ ಮೊತ್ತದ ಬಡ್ಡಿಯನ್ನು ಪಾವತಿಸಲು ಸಾಧ್ಯವಿಲ್ಲ. ಹೆಚ್ಚಿನ ಮೊತ್ತಕ್ಕೆ ಹರಾಜು ಮಾಡಿದ್ದು, ಅಸಲು ಕಳೆದು ಉಳಿಕೆ ಮೊತ್ತವನ್ನು ರುದ್ರಪ್ಪ ಅವರಿಗೆ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಡಿಜಿಎಂ ಜಯಕುಮಾರ್‌ ಸಮಸ್ಯೆ ಬಗೆಹರಿಸಲು ತಮ್ಮ ವ್ಯಾಪ್ತಿಯಲ್ಲಿ ಅಧಿಕಾರ ಇಲ್ಲ. ಹಾಗಾಗಿ ಇದನ್ನು ಮುಖ್ಯ ಕಚೇರಿ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಲಿಖಿತವಾಗಿ ಹೇಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಣಗಾಲ್ ಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಮಗ್ಗೆ ರಾಯರ ಕೊಪ್ಪಲಿನ ಶಿವಕುಮಾರ್ ಎಂಬುವರ 7.5 ಎಕರೆ ಜಮೀನನ್ನು ೧೨ ವರ್ಷಗಳ ಹಿಂದೆ ಅಡವಿಟ್ಟು ೧೦ ಲಕ್ಷ ರು. ಸಾಲ ಪಡೆದಿದ್ದರು. ಆದರೆ ಈಗ ಈ ಜಮೀನನ್ನು ಹರಾಜು ಹಾಕಿದ್ದು, ಈಗಾಗಲೇ ಅವರ ಅಕ್ಕ-ತಂಗಿಯರು ಆಸ್ತಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಬ್ಯಾಂಕಿನಿಂದ ಸಾಲ ಪಡೆದಿದ್ದು ೧೦ ಲಕ್ಷ ರು. ಆದರೆ ಜಮೀನನ್ನು ಹರಾಜು ಹಾಕಿರುವುದು 67 ಲಕ್ಷ ರು.ಗೆ. ಈ ಬಗ್ಗೆ ಸ್ಪಷ್ಟನೆ ಕೇಳಿದರೆ ಹರಾಜು ಆಗಿದೆ ಎಂದು ಬೇಜವಾಬ್ದಾರಿಯಾಗಿ ಹೇಳುತ್ತಾರೆ ಎಂದು ಆರೋಪಿಸಿದರು.

ಈ ಬಗ್ಗೆ ರೈತರು ಎಲ್ಲಾ ಸೇರಿ ಪ್ರತಿಭಟನೆ ಮಾಡಿದ್ದೇವೆ. ರೈತರನ್ನು ಕೂರಿಸಿಕೊಂಡು ಸಭೆ ಮಾಡುವಂತೆ ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ಆದರೆ ಗುಟ್ಟಾಗಿ ಕರೆಸಿಕೊಂಡು ಎಲ್ಲದಕ್ಕೂ ಸಹಿ ಮಾಡಿಸಿಕೊಂಡರು. ರೈತರ ಸಾಲಕ್ಕೆ ಬಡ್ಡಿ ಬಿಟ್ಟು ಕಟ್ಟಿಸಿಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿದ್ದರೂ ಆನ್ಲೈನ್ ಮೂಲಕ ಹರಾಜು ಮಾಡಿದ್ದಾರೆ, ಇದರಿಂದ ರೈತರಿಗೆ ಏನೂ ತಿಳಿಯುವುದಿಲ್ಲ. ಆದರೆ ಈ ಬ್ಯಾಂಕಿನವರು ಒಟ್ಟಿಗೆ ಕರೆಯದೆ ಒಬ್ಬೊಬ್ಬರನ್ನೆ ಕರೆಯಿಸಿಕೊಂಡು ಮಾತನಾಡಿದ್ದಾರೆ ಎಂದು ಹೇಳಿದರು.

ರಾಜ್ಯ ರೈತ ಸಂಘದ ಮುಖಂಡರಾದ ಶಿವಕುಮಾರ್, ಮಂಜುನಾಥ್, ಮಲ್ಲೇಶ್, ಲಕ್ಷ್ಮಣ್ ಇತರರು ಉಪಸ್ಥಿತರಿದ್ದರು.

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಕೆನರಾ ಬ್ಯಾಂಕ್‌ ಹಿರಿಯ ಅಧಿಕಾರಿಗಳು, ಈ ಪ್ರಕರಣದಲ್ಲಿ ಕಾನೂನು ರೀತಿಯಲ್ಲಿ ಏನು ಮಾಡಬೇಕೋ ಅದನ್ನೇ ಮಾಡಲಾಗಿದೆ. ಅವರು ಪಡೆದಿದ್ದು 10 ಲಕ್ಷ ರು. ಸಾಲ. ಆ ನಂತರದಲ್ಲಿ ಅವರು ಬಡ್ಡಿಯನ್ನೂ ಕಟ್ಟಿಲ್ಲ. ಹಾಗಾಗಿ ಹತ್ತಾರು ವರ್ಷಗಳಲ್ಲಿ ಆ ಮೊತ್ತ ಎಲ್ಲಾ ಸೇರಿ 42 ಲಕ್ಷ ರು. ಆಗಿದೆ. ಅಡವಿಟ್ಟುಕೊಂಡಿದ್ದ ಭೂಮಿಯನ್ನು ಬ್ಯಾಂಕ್‌ ಏಕಾಏಕಿ ಹರಾಜು ಮಾಡಿಲ್ಲ. ನಿಯಮದ ಪ್ರಕಾರ ಅವರಿಗೆ ಸಾಕಷ್ಟು ಬಾರಿ ನೋಟೀಸ್‌ ನೀಡಲಾಗಿದೆ. ಸಾಲದ್ದಕ್ಕೆ ಒಟಿಎಸ್ (ಒನ್‌ ಟೈಮ್‌ ಸೆಟಲ್‌ಮೆಂಟ್) ಅವಕಾಶ ಮಾಡಲಾಗಿತ್ತು. ಒಟಿಎಸ್‌ ಅಡಿ ಅಸಲು 10 ಲಕ್ಷ ರು. ಬಡ್ಡಿ 9 ಲಕ್ಷ ರು. ಸೇರಿ 19 ಲಕ್ಷ ರು. ಪಾವತಿಸುವಂತೆ ಅವಕಾಶ ನೀಡಲಾಗಿತ್ತು. ಅವರು ಬರದ ಕಾರಣ

ನ್ಯಾಯಾಲಯದ ಮೂಲಕ ಸಾರ್ವಜನಿಕ ಪ್ರಕಟಣೆಯನ್ನೂ ನೀಡಿ ಹರಾಜು ಮಾಡಲಾಗಿದೆ ಎಂದು ಹೇಳಿದರು. ಹಾಸನದಲ್ಲಿ ರೈತ ಸಂಘದ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ ಕೆನರಾ ಬ್ಯಾಂಕ್‌ ಅಧಿಕಾರಿಗಳು.