ಹಳ್ಳಿಕಾರ್ ಹೋರಿಗಳ ಹರಾಜು: 60.89 ಲಕ್ಷ ರು. ಸಂಗ್ರಹ

| Published : Jan 14 2025, 01:01 AM IST

ಸಾರಾಂಶ

ತಾಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣಿಕೇನಹಳ್ಳಿ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದಲ್ಲಿ ಹಳ್ಳಿಕಾರ್ ತಳಿ ಹೋರಿ ಕರುಗಳ ಬಹಿರಂಗ ಹರಾಜು ಪ್ರಕ್ರಿಯೆ ಜರುಗಿತು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣಿಕೇನಹಳ್ಳಿ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದಲ್ಲಿ ಹಳ್ಳಿಕಾರ್ ತಳಿ ಹೋರಿ ಕರುಗಳ ಬಹಿರಂಗ ಹರಾಜು ಪ್ರಕ್ರಿಯೆ ಜರುಗಿತು.

ಕುಣಿಕೇನಹಳ್ಳಿ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದಲ್ಲಿ 33 ಜೋಡಿಯ 71 ಹಳ್ಳಿಕಾರ್ ಹೋರಿಗಳು ಮತ್ತು 5 ಒಂಟಿ ಹಳ್ಳಿಕಾರ್ ಹೋರಿಗಳನ್ನು ಬಹಿರಂಗ ಹರಾಜು ಇಡಲಾಗಿತ್ತು. ಹೋರಿಗಳ ಹರಾಜಲ್ಲಿ ಹಾವೇರಿ, ಶಿವಮೊಗ್ಗ, ಹಾಸನ, ಧಾರವಾಡ, ಕೊಪ್ಪಳ, ತುಮಕೂರು ಜಿಲ್ಲೆಯ ಹಾಗೂ ಪಕ್ಕದ ತಾಲೂಕಿನ ಮತ್ತು ಸ್ಥಳೀಯ 234 ರೈತರು ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆ ಪೈಕಿ ಕೇವಲ 38 ರೈತರು ಮಾತ್ರ ಹೋರಿಗಳನ್ನು ಕೊಳ್ಳಲು ಸಾಧ್ಯವಾಯಿತು.ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹುಲಿಗೆನೆಕೊಪ್ಪ ಗ್ರಾಮದ ರೈತ ಲೋಕಪ್ಪ ಎಂಬುವವರು ಒಂಟಿ ಹೋರಿಯೊಂದನ್ನು 4.25 ಲಕ್ಷ ರುಪಾಯಿಗಳಿಗೆ ಖರೀದಿಸಿದರು. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೀಗೇಹಳ್ಳಿ ರೈತ ಈರಣ್ಣ ಎಂಬುವವರು ಜೋಡಿ ಹೋರಿಗಳನ್ನು 3.12 ಲಕ್ಷಕ್ಕೆ ಖರೀದಿಸಿದರು.ಹರಾಜಿನಿಂದ 45.61 ಲಕ್ಷ ರೂಪಾಯಿಗಳು ಸಂಗ್ರಹವಾಗಿದ್ದು ಇನ್ನು 15.28 ಲಕ್ಷ ಹಣ ಬಾಕಿ ರೈತರಿಂದ ಬರಬೇಕಿದೆ. ಒಟ್ಟಾರೆ ಹರಾಜಿನಿಂದ 60.89 ಲಕ್ಷ ರೂಪಾಯಿಗಳು ಸಂಗ್ರಹವಾಗಿದೆ ಎಂದು ಕುಣಿಕೇನಹಳ್ಳಿ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದ ನಿರ್ದೇಶಕ ಡಾ.ಜಗದೀಶ್ ತಿಳಿಸಿದ್ದಾರೆ.