ಸಾರಾಂಶ
ಬಳ್ಳಾರಿ: ರಂಗತೋರಣ ಸಾಂಸ್ಕೃತಿಕ ಸಂಘಟನೆ ಇಲ್ಲಿನ ವಾಜಪೇಯಿ ಬಡಾವಣೆಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ನೀನಾಸಂ- ಧಾತ್ರಿ ನಾಟಕೋತ್ಸವಕ್ಕೆ ಚಾಲನೆ ದೊರೆಯಿತು.
ಮಹಾನಗರ ಪಾಲಿಕೆ ಸದಸ್ಯ ಎಸ್. ಮಲ್ಲನಗೌಡ ಅವರು ನಾಟಕೋತ್ಸವ ಉದ್ಘಾಟಿಸಿ ಮಾತನಾಡಿ, ನಾಟಕ ಎಂಬುದು ವಿಲಾಸಕ್ಕಲ್ಲ. ವಿಕಾಸಕ್ಕೆ ಎಂಬ ಆಶಯದಿಂದ ರಂಗತೋರಣ ಸಂಘಟನೆ ಅನೇಕ ವರ್ಷಗಳಿಂದ ರಂಗ ಚಟುವಟಿಕೆಗಳನ್ನು ಆಯೋಜಿಸುತ್ತಾ ಬರುತ್ತಿದ್ದು, ಯುವ ಸಮುದಾಯಕ್ಕೆ ರಂಗಾಸಕ್ತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.ಸಾಮಾಜಿಕ ಜಾಲತಾಣಗಳು, ಟಿವಿ ಮಾಧ್ಯಮಗಳ ಭರಾಟೆಯಲ್ಲಿ ನಾಟಕಗಳು ನೋಡುವವರಿಲ್ಲ ಎಂಬ ಮಾತು ಒಪ್ಪಲು ಸಾಧ್ಯವಿಲ್ಲ. ಉತ್ತಮ ಅಭಿನಯದ ರಂಗಪ್ರಯೋಗಗಳನ್ನು ಜನರು ಇಷ್ಟಪಡುತ್ತಾರೆ. ನೀನಾಸಂ ಹಾಗೂ ರಂಗಾಯಣ ತಂಡಗಳು ಪ್ರದರ್ಶಿಸುವ ನಾಟಕಗಳಿಗೆ ಎಲ್ಲ ಕಾಲದಲ್ಲೂ ಪ್ರೇಕ್ಷಕರು ಇದ್ದೇ ಇರುತ್ತಾರೆ. ನಾಟಕ ಅಭಿರುಚಿ ಇರುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ, ಪ್ರೇಕ್ಷಕರನ್ನು ಹಿಡಿದುಕೊಳ್ಳುವ ನಾಟಕಗಳು ಮಾತ್ರ ಜನಮನ್ನಣೆ ಗಳಿಸುತ್ತವೆ ಎಂದರು.
ಹಿರಿಯ ಎಂಜಿನಿಯರ್ ಕೆ.ಬಿ. ಸಂಜೀವ್ ಪ್ರಸಾದ್ ಹಾಗೂ ವಾಜಪೇಯಿ ಬಡಾವಣಿಯ ಮುಖಂಡ ಭೀಮೇಶ ಸ್ವಾಮಿ ಮಾತನಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ರಂಗತೋರಣ ಪ್ರಭುದೇವ ಕಪ್ಪಗಲ್ಲು ಅವರು, ರಂಗತೋರಣ ಸಂಸ್ಥೆ 2004ರಲ್ಲಿ ವಿದ್ಯಾರ್ಥಿ ನಾಟಕೋತ್ಸವ ನಡೆಸುವ ಮೂಲಕ ಆರಂಭಗೊಂಡು 2010ರಲ್ಲಿ ನೋಂದಣಿಗೊಂಡು ಅನೇಕ ನಾಟಕೋತ್ಸವಗಳನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿವರ್ಷ ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನ ಆಯೋಜಿಸುತ್ತಿದೆ. ಕೊರೋನಾ ನಂತರ ಮತ್ತೆ ನೀನಾಸಂ ತಿರುಗಾಟ ಆರಂಭಿಸಿದ್ದು, ಈ ವರ್ಷದ ತಿರುಗಾಟದ ಎರಡು ಸದಭಿರುಚಿಯ ನಾಟಕ ಪ್ರದರ್ಶನಗಳನ್ನು ಆಯೋಜಿಸಿದೆ. ಪ್ರೇಕ್ಷಕರು ಈ ಮೂರು ದಿನಗಳು ನಾಟಕ ವೀಕ್ಷಿಸಿ ನಾಟಕ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ರಂಗತೋರಣದ ಅಡವಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಧಾತ್ರಿ ರಂಗಸಂಸ್ಥೆಯ “ಸೋರುತಿಹುದು ಸಂಬಂಧಗಳು”ನಾಟಕ ಪ್ರದರ್ಶನ ನಡೆಯಿತು.ಇಂದಿನ ದಿನಗಳಲ್ಲಿ ಆಸ್ತಿ ಮಾಡಿದರೂ ಜೀವನದ ಕೊನೆಯ ದಿನಗಳಲ್ಲಿ ಮಕ್ಕಳಿಂದ ಸೂಕ್ತ ಆಶ್ರಯ ಸಿಗದೆ ತಮಗಾದ ನೋವನ್ನು ವ್ಯಕ್ತಪಡಿಸುವ ವೃದ್ಧ ಜೀವಗಳ ಬದುಕಿನ ವೃತ್ತಾಂತದ "ಸೋರುತಿಹುದು ಸಂಬಂಧಗಳು " ನಾಟಕ ಪ್ರೇಕ್ಷಕರ ಮನ ಕಲುಕಿತು. 24 ಬಿಆರ್‌ವೈ 2
ನಾಟಕೋತ್ಸವಕ್ಕೆ ಪಾಲಿಕೆ ಸದಸ್ಯ ಎಸ್. ಮಲ್ಲನಗೌಡ ಚಾಲನೆ ನೀಡಿದರು.