ಸಾರಾಂಶ
ಹುಬ್ಬಳ್ಳಿ: ಹಣಕಾಸು ಶಿಸ್ತು, ನೀತಿ ನಿರೂಪಣೆ ರೂಪಿಸುವ ಜತೆಗೆ ಆರ್ಥಿಕ ಬುದ್ಧಿಮತ್ತೆಗೆ ಮಾರ್ಗದರ್ಶನ ನೀಡುವಲ್ಲಿ ಲೆಕ್ಕ ಪರಿಶೋಧಕರು ಪಾತ್ರ ಗಣನೀಯವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿಯ ಕೇಶ್ವಾಪುರದ ಐಸಿಎಐ ಭವನದ ನವೀಕೃತ ಸಭಾಭವನ ಹಾಗೂ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ(ಐಸಿಎಐ) ಹುಬ್ಬಳ್ಳಿ ಶಾಖೆಯ ೩೮ನೇ ವಾರ್ಷಿಕ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ಲೆಕ್ಕ ಪರಿಶೋಧನೆ ಎಂಬುದು ಆಡಿಟ್, ಬ್ಯಾಲೆನ್ಸ್‌ಶೀಟ್‌ಗೆ ಸೀಮಿತವಾಗಿಲ್ಲ. ಭಾರತ ೫ ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಹೆಜ್ಜೆ ಇಡುವಲ್ಲಿ ಲೆಕ್ಕ ಪರಿಶೋಧಕರ ಕೊಡುಗೆ ದೊಡ್ಡದಿದೆ ಎಂದರು.
ಐಸಿಎಐ ಮಾಜಿ ಅಧ್ಯಕ್ಷ ಕೆ.ರಘು ಮಾತನಾಡಿ, ಯಾವುದೇ ಗಡಿ, ಚೌಕಟ್ಟು ಇಲ್ಲದ ಜಗತ್ತಿನಲ್ಲಿ ನಾವಿದ್ದೇವೆ. ಜಾಗತಿಕ ಮಟ್ಟದಲ್ಲಿ ಯಾವ ಕ್ಷೇತ್ರದಲ್ಲಿಯಾದರೂ ನಾವು ಕೊಡುಗೆ ಸಲ್ಲಿಸಬಹುದಾಗಿದೆ. ಡಿಜಿಟಲೀಕರಣ ಹಾಗೂ ಕೃತಕ ಬುದ್ಧಿಮತ್ತೆ ದೊಡ್ಡ ಪ್ರಮಾಣದಲ್ಲಿ ಲೆಕ್ಕ ಪರಿಶೋಧಕರ ನೆರವಿಗೆ ಬರುತ್ತಿದೆ. ಹೀಗಾಗಿ, ಲೆಕ್ಕ ಪರಿಶೋಧಕರು ಆಧುನಿಕತೆ ತಕ್ಕಂತೆ ನಮ್ಮ ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದರು.ಐಸಿಎಐ ಮಾಜಿ ಅಧ್ಯಕ್ಷ ಅನಿಕೇತ ತಲಾಟಿ ಮಾತನಾಡಿ, ವಾರ್ಷಿಕವಾಗಿ ₹೨೪ ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಆದಾಯ ತೆರಿಗೆ ಸಂಗ್ರಹವಿದೆ. ಇದರಲ್ಲಿ ಲೆಕ್ಕ ಪರಿಶೋಧಕರು ಬಹಳ ದೊಡ್ಡ ಪಾತ್ರ ನಿಭಾಯಿಸುತ್ತಿದ್ದಾರೆ. ಲೆಕ್ಕ ಪರಿಶೋಧನೆ ವೃತ್ತಿ ಹೊರಗುತ್ತಿಗೆಯಲ್ಲೂ ಸಾಕಷ್ಟು ವೃದ್ಧಿಯಾಗಿದ್ದು, ಸಿಎ ಪದವೀಧರರಿಗೆ ಜಾಗತಿಕವಾಗಿ ವಿಫುಲ ಅವಕಾಶ ದೊರೆಯುತ್ತಿವೆ ಎಂದರು.
ಲೆಕ್ಕ ಪರಿಶೋಧಕರು ಯಾರಾದರೂ ಮೃತಪಟ್ಟರೆ, ಅಪಘಾತ, ಇನ್ನಿತರ ಘಟನೆಗಳಲ್ಲಿ ಗಾಯಗೊಂಡಲ್ಲಿ ಅವರ ವೈದ್ಯಕೀಯ ಚಿಕಿತ್ಸೆಗೆ ಅರ್ಥಿಕ ನೆರವು ಕಲ್ಪಿಸಲು ಸಿಎಬಿಎಫ್ ಎಂಬ ನಿಧಿ ಸ್ಥಾಪಿಸಲಾಗಿದೆ. ಅದಕ್ಕೆ ಸಹೋದ್ಯೋಗಿಗಳು ಆದಷ್ಟು ನೆರವು ನೀಡಬೇಕು ಎಂದು ಮನವಿ ಮಾಡಿದರು.ಐಸಿಎಐ ಕೇಂದ್ರೀಯ ಪರಿಷತ್ ಸದಸ್ಯ ಮಧುಕರ ಹಿರೇಗಂಗೆ ಮಾತನಾಡಿದರು. ಕೇಂದ್ರೀಯ ಪರಿಷತ್ ಸದಸ್ಯ ಪುರುಷೋತ್ತಮಲಾಲ ಖಂಡೇಲವಾಲ್, ಹುಬ್ಬಳ್ಳಿ ಶಾಖೆ ಅಧ್ಯಕ್ಷ ಅಕ್ಷಯಕುಮಾರ ಸಿಂಘಿ, ಸಮ್ಮೇಳನ ಸಮಿತಿ ಚೇರಮನ್ ಎಸ್.ಬಿ. ಶೆಟ್ಟಿ, ಮಂಜುನಾಥ ಮೇಟಿ, ಪ್ರಮೋದ ಹೆಗಡೆ, ರಿಷಭ್ ಉಪಾಧ್ಯಾಯ, ಸುಭಾಷ ಪಾಟೀಲ ಸೇರಿದಂತೆ ಇತರರು ಇದ್ದರು.