ಸಾರಾಂಶ
ಮಾಂಗಲ್ಯ ಭಾಗ್ಯ ಯೋಜನೆಯಡಿ ಪ್ರಾಧಿಕಾರದ ವತಿಯಿಂದ ನವ ಜೋಡಿಗಳಿಗೆ ತಾಳಿ, ಎರಡು ಚಿನ್ನದ ಗುಂಡು, ಪಂಚೆ-ಶಲ್ಯ, ಬೆಳ್ಳಿ ಕಾಲುಂಗುರವನ್ನು ಉಚಿತವಾಗಿ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬುಧವಾರ 66 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಘಾಟಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ 66 ನೂತನ ಜೋಡಿಗಳು ಸತಿ-ಪತಿಗಳಾದರು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನಿಧ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಉಪಸ್ಥಿತರಿದ್ದು, ವಧು-ವರರಿಗೆ ಆಶೀರ್ವದಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೆ.ಎಚ್.ಮುನಿಯಪ್ಪ, ಶುಭ ಲಗ್ನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಿರುವುದು ವಿಶೇಷವಾಗಿದೆ. ಸಾಲ ಮಾಡಿ ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡಿ ಆಗುವ ಮದುವೆಗಳಿಂದ, ಮುಂದೆ ಸಾಲ ತೀರಿಸಲಾಗದಪರಿಸ್ಥಿತಿ ನಿರ್ಮಾಣ ಆಗಬಹುದು. ಸರಳ ವಿವಾಹ ಆಗುವುದರಿಂದ ನೆಮ್ಮದಿಯ ಜೀವನ ನಡೆಸಬಹುದು. ದೇವರ ಸನ್ನಿದಾನದಲ್ಲಿ ನೆರವೇರಿರುವ ಈ ಸಾಮೂಹಿಕ ವಿವಾಹ ಶ್ರೇಷ್ಠವಾಗಿದೆ. ತಮಗೆ ಉತ್ತಮ ಜೀವನ, ಆರೋಗ್ಯ ಭಾಗ್ಯ,ಆಯಸ್ಸು ಕೊಟ್ಟು ದೇವರು ಕಾಪಾಡಲಿ ಎಂದು ತಿಳಿಸಿದರು.
ಮಾಂಗಲ್ಯ ಭಾಗ್ಯ ಯೋಜನೆಯಡಿ ಪ್ರಾಧಿಕಾರದ ವತಿಯಿಂದ ನವ ಜೋಡಿಗಳಿಗೆ ತಾಳಿ, ಎರಡು ಚಿನ್ನದ ಗುಂಡು, ಪಂಚೆ-ಶಲ್ಯ, ಬೆಳ್ಳಿ ಕಾಲುಂಗುರವನ್ನು ಉಚಿತವಾಗಿ ನೀಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಎ.ಬಿ
ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಸೀಲ್ದಾರ್ ವಿಭಾ ರಾಥೋಡ್, ಇಒಮುನಿರಾಜು, ಪ್ರಾಧಿಕಾರದ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.