ಇಂದಿನ ಯುವಜನತೆಯಲ್ಲಿ ಜಾನಪದದ ಮಹತ್ವ ಹಾಗೂ ಅದರ ವಿವಿಧ ಪ್ರಕಾರಗಳ ಬಗ್ಗೆ ಸಮರ್ಪಕ ಅರಿವು ಕಡಿಮೆಯಾಗುತ್ತಿದ್ದು ಯುವಪೀಳಿಗೆಗೆ ಜಾನಪದ ಪರಂಪರೆಯನ್ನು ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನೈರುತ್ಯ ರೈಲ್ವೆ ಸಲಹಾ ಮಂಡಳಿ ಸದಸ್ಯ ಕೊಂಡಜ್ಜಿ ವಿಶ್ವನಾಥ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಇಂದಿನ ಯುವಜನತೆಯಲ್ಲಿ ಜಾನಪದದ ಮಹತ್ವ ಹಾಗೂ ಅದರ ವಿವಿಧ ಪ್ರಕಾರಗಳ ಬಗ್ಗೆ ಸಮರ್ಪಕ ಅರಿವು ಕಡಿಮೆಯಾಗುತ್ತಿದ್ದು ಯುವಪೀಳಿಗೆಗೆ ಜಾನಪದ ಪರಂಪರೆಯನ್ನು ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನೈರುತ್ಯ ರೈಲ್ವೆ ಸಲಹಾ ಮಂಡಳಿ ಸದಸ್ಯ ಕೊಂಡಜ್ಜಿ ವಿಶ್ವನಾಥ್ ತಿಳಿಸಿದರು.ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಅಂತರಂಗ ಸಂಸ್ಕೃತಿ ಚಿಂತನ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಅರಳಿ ಮರದಡಿಯಲ್ಲಿ ಮೊಳಗಲಿ ಜಾನಪದ ಕಾರ್ಯಕ್ರಮದ ಜಾನಪದದ ಸೊಗಡನ್ನು ಅನಾವರಣಗೊಳಿಸಿ ಮಾತನಾಡಿದರು.
ಜಾನಪದವು ಕೇವಲ ಮನರಂಜನೆಯ ಸಾಧನವಲ್ಲ, ಅದು ಹಳ್ಳಿಗರ ಬದುಕಿನ ಅನುಭವ, ಭಾವನೆ, ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳ ಪ್ರತಿಬಿಂಬವಾಗಿದೆ. ಗ್ರಾಮೀಣ ಕಲಾವಿದರ ಬದುಕನ್ನು ಭದ್ರಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಮಾಸಾಶನ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು.ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ ಪ್ರಾಸ್ತಾವಿಕ ನುಡಿಗಳನ್ನಾಡಿ ಕರ್ನಾಟಕ ಜಾನಪದ ಅಕಾಡೆಮಿ ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲಾ ಭಾಗಗಳನ್ನು ತಲುಪಿದೆ. ಅಲ್ಲಿನ ಜಾನಪದ ವೈಶಿಷ್ಟತೆ ಆಧರಿತ ಕಾರ್ಯಕ್ರಮ ರೂಪಿಸಿದೆ. ಎಲ್ಲ ಜಾನಪದ ಕಲಾವಿದರನ್ನು ಒಗ್ಗೂಡಿಸುವ ಮತ್ತು ಕಲೆಗಳನ್ನು ಪ್ರದರ್ಶನ ಮಾಡಿಸುವ ಪ್ರಯತ್ನ ಮಾಡಿದೆ. ಇದು ವಿಶ್ವವಿದ್ಯಾಲಯ, ಕಾಲೇಜುಗಳು ಮಾತ್ರವಲ್ಲದೆ ಗ್ರಾಮೀಣ ಪ್ರದೇಶಕ್ಕೂ ತಲುಪಿದೆ ಎಂದರು. ಹಿರಿಯ ಜಾನಪದ ವಿದ್ವಾಂಸರು ಆದ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿಯವರ ಬುಡಕಟ್ಟು ಸಂಸ್ಕೃತಿ ಬಿಂಬಿಸುವ ಕಿಲಾರಿ ಕಲರವ ಎಂಬ ವಿನೂತನ ಕಾರ್ಯಕ್ರಮ ಅಧ್ಭುತವಾಗಿದೆ. ಅವರು ಎಲ್ಲ ಸದಸ್ಯರನ್ನು ಸಂಘಟಿಸಿ ನಡೆಸಿದ ಕಾರ್ಯಕ್ರಮ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ ನೂರಾರು ಹಿರಿಯ ಕಲಾವಿದರಿಗೆ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಂದರ್ಶನ ನಡೆಸಿ ಮಾಶಾಸನ ಮಂಜೂರಾತಿಗೆ ಆಯ್ಕೆ ಮಾಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ನಡೆಸುವ ಮೂಲಕ ಹಿರಿಯ ಕಲಾವಿದರಿಗೆ ಗೌರವ ನೀಡುವ ಕೆಲಸ ಮಾಡಿದ್ದಾರೆ ಎಂದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಸಮ ಸಂಸ್ಕೃತಿ, ನೆಲ ಸಂಸ್ಕೃತಿ ಹಾಗೂ ಜಲ ಸಂಸ್ಕೃತಿಯೇ ನಮ್ಮ ಜಾನಪದದ ಮೂಲ ಆಶಯವಾಗಿದೆ. ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿರುವ ಜಾನಪದ ಸಂಸ್ಕೃತಿಯನ್ನು ಇಡೀ ಕರ್ನಾಟಕಕ್ಕೆ ಪರಿಚಯಿಸುವ ಕನಸನ್ನು ನಾನು ಕಂಡಿದ್ದೇನೆ. ಆ ಕನಸನ್ನು ನನಸಾಗಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು.ಇದೇ ಸಂಧರ್ಭದಲ್ಲಿ ತಾಲೂಕಿನ ಹಲವು ಕಲಾವಿದರನ್ನು ಸನ್ಮಾನಿಸಲಾಯಿತು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಲ್ಲಿಕಾರ್ಜುನ ಕೆಂಕೆರೆ, ದಿಶಾ ಸುಜನ್, ವನಿತಾ ಹಿರೇಮಠ, ಅಶ್ವಿನಿ ಹಾಗೂ ಶಶಿಕುಮಾರ್ ಅವರು ಸುಶ್ರಾವ್ಯ ಜಾನಪದ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನಸೂರೆಗೊಂಡರು. ಕೊಂಡಜ್ಜಿ ಗ್ರಾಮದ ಆದರ್ಶ ಮತ್ತು ಸಂಗಡಿಗರು ಪ್ರಸ್ತುತಪಡಿಸಿದ ಚಿಟ್ಟಿಮೇಳ, ಸಣ್ಣಮ್ಮ ಮತ್ತು ಮಾಯಮ್ಮ ತಂಡದ ಸೋಬಾನೆ ಪದ, ಹಾಗೂ ಪುರುಷೋತ್ತಮ ಮತ್ತು ತಂಡ ಪ್ರದರ್ಶಿಸಿದ ಸೋಮನ ಕುಣಿತ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಕರಿಯಣ್ಣ ಹೊನ್ನಗಾನಹಳ್ಳಿ ಕ.ಸಾ.ಪ ಮಾಜಿ ಅಧ್ಯಕ್ಷ ಸಾ.ಶಿ.ದೇವರಾಜು, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಮಲ್ಲಿಕಾರ್ಜುನ್ ಕರಮಲಹಳ್ಳಿ, ಮಂಜೇಶ್ ಚೆನ್ನಾಪುರ, ಕಲ್ಪತರು ಲಯನ್ ಚಾರಿಟಬಲ್ ಅಧ್ಯಕ್ಷ ಡಾ. ಚೌದ್ರಿನಾಗೇಶ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಸ್ವಾಗತಿಸಿದರು. ಅಶ್ವಿನಿ ನಿರೂಪಿಸಿ ವಂದಿಸಿದರು.