ತಾಯಿತನದ ಮಾನವೀಯ ಗುಣಗಳನ್ನು ಲೇಖಕರು ಹೊಂದಿರಬೇಕು: ಸಿದ್ದರಾಮ ಹೊನ್ಕಲ್

| Published : Nov 10 2024, 01:41 AM IST

ಸಾರಾಂಶ

ರಾಯಚೂರು ನಗರದ ಕನ್ನಡ ಭವನದಲ್ಲಿ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಚ್ಚೇವು ಕನ್ನಡದ ದೀಪ, ಉಪನ್ಯಾಸ, ಕವಿಗೋಷ್ಠಿ, ಸನ್ಮಾನ ನೃತ್ಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ರಾಯಚೂರು

ಲೇಖಕರು, ಕವಿಗಳು ಹಾಗೂ ಸಾಹಿತಿಗಳು ಸಾಂಸ್ಕೃತಿಕ, ಸಾಮಾಜಿಕ ಕಳಕಳಿಯ ಕಾಳಜಿ ಜೊತೆಗೆ ತಾಯಿತನದ ಮಾನವೀಯ ಗುಣಗಳನ್ನು ಹೊಂದಿರಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಕನ್ನಡ ಭವನದಲ್ಲಿ ಕಸಾಪ ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಸಹಯೋಗದಲ್ಲಿ ಸುವರ್ಣ ಸಂಭ್ರಮ ಹಾಗೂ 69ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಚ್ಚೇವು ಕನ್ನಡದ ದೀಪ, ಉಪನ್ಯಾಸ, ಕವಿಗೋಷ್ಠಿ, ಸನ್ಮಾನ, ನೃತ್ಯ, ಸಂಗೀತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸುಂದರ ವಾದ ಬದುಕನ್ನು ಕಟ್ಟಿಕೊಳ್ಳಲು, ಕತ್ತಲಿನ ಜಗವನ್ನು ಹಣತೆ ಹಚ್ಚಿ ದೀಪದ ಬೆಳಕಿನಡೆಗೆ ನಡೆಸಲು ಜ್ಞಾನದ ದೀಪವನ್ನು ಹೆಚ್ಚುವ ಕಾರ್ಯವನ್ನು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಕವಿಗಳಾದವರು ತಮ್ಮ ಜನ ಹಾಗೂ ಸಮಾಜದ ಮುಖಿ ಬರಹಗಳ ಮುಖಾಂತರ ಸಮಾಜದಲ್ಲಿ ಬದಲಾವಣೆಯ ಚಿಲುವೆ ಹೊರಸೂಸುವಂತೆ ಮಾಡಬೇಕು ಎಂದರು.

ಸಾಂಸ್ಕೃತಿಕ ಪರಂಪರೆಯ ನೆಲೆಯಾಗಿರುವ ರಾಯಚೂರು ಜಿಲ್ಲೆಯು ಎಲ್ಲ ಪ್ರಕಾರದ ಸಾಹಿತ್ಯಕ್ಕೆ ಹೆಸರು ವಾಸಿಯಾಗಿದೆ. ಹಿಂದಿನ ಕಾಲದಿಂದಲೂ ಈ ಭಾಗದ ಸಾಹಿತಿಗಳು,ಲೇಖಕರು,ಕವಿಗಳು ಇಲ್ಲಿನ ಸಂಸ್ಕೃತಿ, ಪರಂಪರೆಯನ್ನು ನಾಡಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಅದಕ್ಕಾಗಿಯೇ ರಾಯಚೂರಿನಲ್ಲಿ ಕನ್ನಡ ಸಾಹಿತ್ಯವು ಗಟ್ಟಿ ನೆಲೆಯನ್ನು ಕಂಡುಕೊಂಡಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಸಾಹಿತಿ ವೆಂಕಟರಾವ್ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾ ಕೋಶಾಧ್ಯಕ್ಷ ಜಿ.ಸುರೇಶ ವಹಿಸಿದ್ದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಆಂಜನೇಯ ಜಾಲಿಬೆಂಚಿ ವಹಿಸಿದ್ದರು. ಗಾನಯೋಗಿ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಮತ್ತು ಸಿಗ್ನೇಚರ್ ಡಾನ್ಸ್ ಸ್ಟುಡಿಯೋ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಹೊಸೂರ, ತಾಲೂಕಾಧ್ಯಕ್ಷ ವೆಂಕಟೇಶ, ಸಾಹಿತಿಗಳಾದ ವೀರಹನುಮಾನ, ಬಾಬು ಭಂಡಾರಿಲ್, ಭಗತ್‌ರಾಜ್ ನಿಜಾಮಕಾರ, ಎಚ್.ಎಚ್ ಮ್ಯಾದಾರ, ಆಯ್ಯಪ್ಪಯ್ಯ ಹುಡಾ, ರೇಖಾ ಬಡಿಗೇರ್ ಸೇರಿದಂತೆ ಸಾಹಿತ್ಯಾಸಕರು,ಸಾರ್ವಜನಿಕರು ಇದ್ದರು.

-----

ಬಾಕ್ಸ್ :

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎ.ಎನ್.ಸದಾಶಿವಪ್ಪ, ಮಲ್ಲಮ್ಮ ಸೂಲಗಿತ್ತಿ, ಕರ್ನಾಟಕ ಸಂಭ್ರಮ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಯ್ಯಮ್ಮ ಎಡವಲಿ, ಕನ್ನಡಕ್ಕಾಗಿ ಸೇವೆ ಮಾಡಿದ ಅಶೋಕ್ ಕುಮಾರ್ ಸಿ.ಕೆ ಜೈನ, ಶಕ್ಷಾವಲಿ ಮಾನ್ವಿ, ನರಸುಬಾಯಿ ಸಿರವಾರ, ಶರಣಯ್ಯ ಸ್ವಾಮಿ ಹೊಸಮಠ ದೇವದುರ್ಗ, ಶರಭಯ್ಯ ಸ್ವಾಮಿ ಹಿರೇಮಠ ಸಿಂಧನೂರ, ಶಿವಣ್ಣ ಹೂಲ್ಲೂರ್ ಮಸ್ಕಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.