ಬಸ್ ನಿಲ್ದಾಣದ ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡಲಿ-ಅಸೂಟಿ

| Published : Jul 04 2025, 11:47 PM IST

ಬಸ್ ನಿಲ್ದಾಣದ ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡಲಿ-ಅಸೂಟಿ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಹೊಸ ಬಸ್ ನಿಲ್ದಾಣದ ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಉತ್ತಮ ವಾತವರಣ ಕಲ್ಪಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.

ಗದಗ: ಹೊಸ ಬಸ್ ನಿಲ್ದಾಣದ ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಉತ್ತಮ ವಾತವರಣ ಕಲ್ಪಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.

ನಗರದ ಹೊಸ ಬಸ್ ನಿಲ್ದಾಣದಲ್ಲಿ ಜುಲೈ 2ರಿಂದ 4ರ ವರೆಗೆ ಪ್ರದರ್ಶಿಸುವ ಕರ್ನಾಟಕ ಸರ್ಕಾರದ 2ವರ್ಷಗಳ ಸಾಧನೆ ಬಿಂಬಿಸುವ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ನಂತರ ಬಸ್ ನಿಲ್ದಾಣವನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.

ನಿಲ್ದಾಣದಲ್ಲಿರುವ ಶೌಚಾಲಯಗಳನ್ನು ಗಮನಿಸಿದ ಅವರು ಶಕ್ತಿ ಯೋಜನೆಯಿಂದ ದಿನಕ್ಕೆ ಸಾವಿರಾರು ಮಹಿಳೆಯರು ಉಚಿತ ಪ್ರಯಾಣ ಮಾಡುವಂತಾಗಿದೆ. ಹಾಗಾಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳು ಅದಕ್ಕೆ ಅಳವಡಿಸಿರುವ ನಳಗಳು ಸುಸಿತ್ಥಿಯಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರು ಕೂಡುವ ಆಸನ ವ್ಯವಸ್ಥೆ ಹಾಳಾಗಿದ್ದು, ಸಾರ್ವಜನಿಕರಿಗೆ ಕೂಡಲು ಸೂಕ್ತ ಆಸನ ವ್ಯವಸ್ಥೆಯನ್ನು ಕಲ್ಪಿಸಬೇಕು, ಬಸ್ ನಿಲ್ದಾಣದ ಒಳಗಡೆ ಇರುವ ಅಂಗಡಿಗಳ ತ್ಯಾಜ್ಯ ವನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ಕ್ರಮ ವಹಿಸಬೇಕು ಇಲ್ಲದಿದ್ದಲ್ಲಿ ಅಂಗಡಿಯವರಿಗೆ ನೋಟಿಸ್ ನೀಡಬೇಕು ಅಂದಾಗ ಮಾತ್ರ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಆಗುತ್ತದೆ ಎಂದು ಹೇಳಿದರು.

ಈ ವೇಳೆ ಬಸ್ ನಿಲ್ದಾಣದಲ್ಲಿ ಕುಳಿತ ಮಹಿಳೆಯರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಕುರಿತು ಅಭಿಪ್ರಾಯ ಕೇಳಿದರು ಇದಕ್ಕೆ ಪ್ರತಿಕ್ರಿಯೆಸಿದ ಮಹಿಳೆಯರು ಶಕ್ತಿ ಯೋಜನೆಯಿಂದ ಉಚಿತವಾಗಿ ಸ್ವಾವಲಂಬನೆಯೊಂದಿಗೆ ಬಸ್‌ನಲ್ಲಿ ಓಡಾಡಲು ಅನುಕೂಲವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕಬರ್ ಸಾಬ್ ಬಬರ್ಜಿ, ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅಶೋಕ ಮಂದಾಲಿ, ನೀಲಮ್ಮ ಬೋಳಣ್ಣನವರ, ಬಸವರಾಜ ಕಡೇಮನಿ, ಶಂಭು ಕಾಳೆ, ಸಂಗಮೇಶ ಕೆರಕಲಮಟ್ಟಿ, ಸಾವಿತ್ರಿ ಹೂಗಾರ, ದೇವರಡ್ಡಿ ತಿರ್ಲಾಪುರ, ಗಣೇಶ ಮಟ್ಟಾಲಿ, ಸಂಗಮೇಶ ಹಾದಿಮನಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಮಹಿಳಾ ಮತ್ತು ಮಕ್ಕಳ ನಿರೂಪಣಾಧಿಕಾರಿ ರಾಧಾ ಮಣ್ಣೂರು, ಹುಲಿಗೆಮ್ಮ ಜೋಗೆರ ಹಾಜರಿದ್ದರು.

ಸ್ವಚ್ಛತೆಗೆ ಪ್ರಥಮಾದ್ಯತೆ ಇರಲಿ: ಶಕ್ತಿ ಯೋಜನೆಯಿಂದಾಗಿ ಪ್ರತಿ ದಿನ ಸಾವಿರಾರು ಮಹಿಳೆಯರು ಸ್ವಾವಲಂಬನೆಯಿಂದ ಓಡಾಟ ನಡೆಸುತ್ತಿದ್ದಾರೆ. ಹಾಗಾಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳು ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಗಮನ ಹರಿಸಬೇಕು ಹಾಗೂ ಬಸ್ ನಿಲ್ದಾಣದಲ್ಲಿರುವ ಆಸನ ವ್ಯವಸ್ಥೆಯನ್ನು ಸರಿಯಾಗಿ ಮಾಡಬೇಕು ಹಾಗೂ ಪ್ಲಾಸ್ಟಿಕ್ ಮುಕ್ತ ಬಸ್ ನಿಲ್ದಾಣ ಮಾಡಬೇಕು ಎಂದು ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕೃಷ್ಣಗೌಡ ಎಚ್. ಪಾಟೀಲ ಹೇಳಿದರು.