ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ಭಾಷೆಯನ್ನು ಮುಂದಿನ ಹತ್ತು ವರ್ಷಗಳಲ್ಲಿ ಬಲಗೊಳಿಸಲು ಕನ್ನಡ ಭಾಷಾ ಸಮನ್ವಯ ಸಂಸ್ಕೃತಿ ಹೆಸರಿನ ನೂರು ಪುಸ್ತಕಗಳನ್ನು ತರಲಾಗುತ್ತಿದೆ. ಅದರ ೪೧ ಪುಸ್ತಕಗಳು ಮುಂದಿನ ಹದಿನೈದು ದಿನದಲ್ಲಿ ಬಿಡುಗಡೆಯಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ್ ಬಿಳಿಮಲೆ ತಿಳಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಂಘದಿಂದ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭನದಲ್ಲಿ ಆಯೋಜಿಸಿದ್ದ ಕನ್ನಡ ಸಂಶೋಧನಾ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದ್ವೇಷ ಭಾಷಣ, ಜನರನ್ನು ಒಡೆಯುವ ರಾಜಕೀಯ ಹೆಚ್ಚಾಗುತ್ತಿದೆ. ಈ ಹೊತ್ತಿನಲ್ಲಿ ಕರ್ನಾಟಕ ಚಾರಿತ್ರಿಕವಾಗಿ ಹೇಗೆ ಒಂದಾಗಿತ್ತು. ಕನ್ನಡ ಸಂಸ್ಕೃತಿಯ ಮೂಲ ಗುಣ ಯಾವುದು ಎಂಬ ಬಗ್ಗೆ ಆಳವಾಗಿ, ತಳಸ್ಪರ್ಶಿಯವಾಗಿ ಅಧ್ಯಯನ ಮಾಡುವುದೂ ಸಂಶೋಧನೆಯ ಅಗತ್ಯ ಕೆಲಸವಾಗಿದೆ ಎಂದರು.ಹಿಂದೆಲ್ಲಾ ಕರ್ನಾಟಕವನ್ನು ದಕ್ಷಿಣ ಭಾರತ ಎಂದೇ ಕರೆಯಲಾಗುತ್ತಿತ್ತು. ಹಾಗೆ ನೋಡಿದರೆ ಬೀದರ್‌ನಿಂದ ಚಾಮರಾಜನಗರದವರೆಗಿನ ಭೌಗೋಳಿಕ ವಿಸ್ತೀರ್ಣ ೬೮೦ ಕಿ.ಮೀ., ಚಾಮರಾಜನಗರದಿಂದ ಕನ್ಯಾಕುಮಾರಿಯವರೆಗೆ ೬೦೦ ಕಿ.ಮೀ. ಇದೆ. ಅಂದರೆ ಇನ್ನೊಂದು ಕರ್ನಾಟಕ ಹಿಡಿಯುವಷ್ಟು ಜಾಗವಿದೆ. ಹಾಗಾಗಿ ಕರ್ನಾಟಕ ಪೂರ್ಣ ದಕ್ಷಿಣ ಭಾರತವಲ್ಲ ಎಂದ ಬಿಳಿಮಲೆ ಅವರು, ನರ್ಮದಾ ನದಿಯನ್ನು ದಾಟಿ ಬರುವವರಿಗೆ ಮೊದಲು ಸಿಗುವುದೇ ಕರ್ನಾಟಕ. ಕರ್ನಾಟಕದ ಸಂಸ್ಕೃತಿ ತಮಿಳುನಾಡು, ಕೇರಳಕ್ಕೆ ಹೋಲಿಸಿದರೆ ಬಹಳ ಭಿನ್ನವಾಗಿದೆ. ಅದು ಹೇಗೆ ಭಿನ್ನವಾಗಿದೆ ಎಂದು ಹೇಳುವುದು ಸಂಶೋಧನೆಯ ದೊಡ್ಡ ಕೆಲಸವಾಗಬೇಕು ಎಂದರು.
ಬೌದ್ಧಧರ್ಮ ದಕ್ಷಿಣ ಭಾರತಕ್ಕೆ ಕರ್ನಾಟಕದ ಸನ್ನತಿ ಅತಿದೊಡ್ಡ ಬೌದ್ಧಕೇಂದ್ರವಾಗಿ ಬೆಳೆಯುವ ಮೂಲಕ ಪ್ರವೇಶವನ್ನು ಪಡೆಯಿತು. ಕೊಪ್ಪಳ, ಗವಿಮಠ, ಮಸ್ಕಿ, ಬ್ರಹ್ಮಗಿರಿ, ಕದ್ರಿ ಇವೆಲ್ಲವೂ ಬೌದ್ಧಧರ್ಮದ ಕೇಂದ್ರಗಳಾಗಿದ್ದವು. ಗಣೇಶನನ್ನು ವಿಘ್ನನಿವಾರಕನೆಂಬ ಕಾರಣಕ್ಕೆ ಮೊದಲ ಪೂಜೆ ಸಲ್ಲಿಸುವ ಸಂಸ್ಕೃತಿ ನಮ್ಮಲ್ಲಿ ಆರಂಭವಾಯಿತು. ಗಣೇಶ ಚಾಲ್ತಿಗೆ ಬರುವ ಮುನ್ನ ಜನರು ಮಲೆ ಮಹದೇಶ್ವರ, ಮಂಟೇಸ್ವಾಮಿ, ತಿಪ್ಪೇಸ್ವಾಮಿ, ಜುಂಜಪ್ಪ, ಬೀರಪ್ಪ, ಮೈಲಾರಲಿಂಗರಂತಹ ದೇವರ ಆರಾಧನೆಯೊಂದಿಗೆ ಕಾರ್ಯ ಪ್ರಾರಂಭಿಸುತ್ತಿದ್ದರು. ಅದೊಂದು ಬೆಳಕಿನ ಆರಾಧನೆಯಾಗಿತ್ತು. ಈ ಬೆಳಕಿನ ಆರಾಧನೆಗೂ ಬುದ್ಧನ ಜ್ಞಾನೋದಯಕ್ಕೂ ಸಂಬಂಧವಿರುವುದನ್ನು ಕಾಣಬಹುದು ಎಂದರು.
ಶಬರಿಮಲೆ ಒಂದು ಕಾಲದಲ್ಲಿ ಬೌದ್ಧ ಕೇಂದ್ರವಾಗಿತ್ತು. ಮಕರ ಸಂಕ್ರಾಂತಿ ದಿನ ಬೌದ್ಧ ಧರ್ಮ ಕರ್ನಾಟಕ ಬಿಟ್ಟು ಹೋಗದೆ ಬೇರೆ ಬೇರೆ ರೀತಿಯಲ್ಲಿ ರೂಪಾಂತರಗೊಂಡು ಕರ್ನಾಟಕದಲ್ಲಿ ಉಳಿದಿದೆ. ತುಳುನಾಡಿನ ಭೂತ ಕಾವ್ಯದಲ್ಲಿ ಉಳಿದಿದೆ. ಜನಪದ ಕಾವ್ಯದ ಆರಂಭಿಕ ಕತೆಗಳಲ್ಲಿ ಉಳಿದಿದೆ. ಹೀಗೆ ಕರ್ನಾಟಕದ ಸಂಸ್ಕೃತಿ ಭಿನ್ನವಾಗಿರುವುದನ್ನು ಕಾಣಬಹುದು ಎಂದು ನುಡಿದರು.
ಅದೇ ರೀತಿ ಬಿಹಾರದಲ್ಲಿ ಬಹುದೊಡ್ಡ ಕ್ಷಾಮ ಎದುರಾದ ಸಮಯದಲ್ಲಿ ಅಲ್ಲಿಂದ ಬಂದಂತಹ ಚಂದ್ರಗುಪ್ತ ಮೌರ್ಯರು, ಸಂಪ್ರತಿ ಚಂದ್ರಗುಪ್ತರು ನಡೆದುಕೊಂಡು ಬಂದು ನೆಲೆನಿಂತದ್ದು ಕರ್ನಾಟಕದ ಶ್ರವಣಬೆಳಗೊಳದಲ್ಲಿ. ಆನಂತರದಲ್ಲಿ ಪಂಪ, ರನ್ನ,ಮ ಜನ್ನ, ರತ್ನಾಕರವರ್ಣಿ, ಶ್ರೀವಿಜಯ, ಕೇಶಿರಾಜರಂತಹ ಕವಿಗಳಿಂದ ಶಾಸ್ತ್ರೀಯ ಸಾಹಿತ್ಯ ಹೊರಹೊಮ್ಮಿತು. ಕನ್ನಡ ಸಾಹಿತ್ಯ ಲೋಕಕ್ಕೆ ಜೈನರ ಕೊಡುಗೆ ಅಮೂಲ್ಯವಾಗಿದೆ ಎಂದು ವಿವರಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾದ ಬಳಿಕ ರಾಜ್ಯದ ೧೯೭೦೦ ಕನ್ನಡ ಶಾಲೆಗಳಿಗೆ ಹಕ್ಕುಪತ್ರಗಳೇ ಇರಲಿಲ್ಲ. ಈಗ ಅದರ ಸಂಖ್ಯೆ ೪೦೦ಕ್ಕಿಂತ ಕಡಿಮೆ ಇದೆ. ಈಗ ನಮಗೆ ಕನ್ನಡ ಬೇಡವಾಗಿರಬಹುದು. ಮುಂದೆ ಕನ್ನಡದತ್ತ ಮತ್ತೆ ಒಲವು ಮೂಡಿದಾಗ ಶಾಲೆಗಳನ್ನು ಉಳಿಸುವ ದೃಷ್ಟಿಯಿಂದ ಅವುಗಳಿಗೆ ಹಕ್ಕುಪತ್ರ ದೊರಕಿಸಿಕೊಟ್ಟು ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಅದೇ ರೀತಿ ನೀಟ್‌ಗೆ ಯುಜಿಸಿಯಿಂದ ಐದು ಮಂದಿ ಹಿಂದಿಯವರು ಬರುತ್ತಿದ್ದು, ಅವರಿಗೆ ಇಂಗ್ಲೀಷ್‌ನಲ್ಲಿ ವರದಿಯನ್ನು ನೀಡಬೇಕಿತ್ತು. ಅದಕ್ಕಾಗಿ ಯುಜಿಸಿಗೆ ಪತ್ರ ಬರೆದು ನಿಮ್ಮೊಂದಿಗೆ ಕನ್ನಡ ಬಲ್ಲವರನ್ನು ಕರೆತನ್ನಿ. ನಾವು ಕನ್ನಡದಲ್ಲಿ ನೀಡುವ ವರದಿಯನ್ನು ಅನುವಾದ ಮಾಡಿಕೊಳ್ಳಲಿ ಎಂದು ಪತ್ರ ಬರೆದೆ. ಈಗ ಯುಜಿಸಿಗೆ ಇಂಗ್ಲೀಷ್‌ನಲ್ಲಿ ವರದಿ ನೀಡುವುದು ತಪ್ಪಿದೆ ಎಂದರು.
ಮೈಸೂರಿನ ವಿದ್ವಾಂಸ ಡಾ.ರಾಮೇಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಟಿ ತಿಮ್ಮೇಶ್, ಡಾ.ಎಂ.ಕೆಂಪಮ್ಮ, ಪ್ರೊ. ಜಿ. ಪ್ರಶಾಂತ್ ನಾಯಕ್, ಡಾ ಎಸ್.ಶಿವರಾಮು, ಪ್ರೊ ಮೋಹನ್ ಚಂದ್ರಗುತ್ತಿ, ಡಾ ಎನ್.ಎಸ್. ದೇವಿಕಾ, ಪ್ರೊ.ತ್ರಿವೇಣಿ, ಡಾ.ಎಂ.ಎಸ್.ಅನಿತಾ, ಡಾ.ಎನ್.ಆರ್.ಲಲಿತಾಂಬ, ಪ್ರೊ.ಎಂ.ಜಿ. ಮಂಜುನಾಥ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ ಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಇನ್ನಿತರರಿದ್ದರು