ಸಾರಾಂಶ
ಪುತ್ತೂರಿನಲ್ಲಿ ನ್ಯಾಯ ಆಗ್ರಹಿಸಿ ಪ್ರತಿಭಟನೆ । ಆಟೋ ಚಾಲಕನ ವಿರುದ್ಧವೂ ಪ್ರಕರಣ ದಾಖಲು
ಕನ್ನಡಪ್ರಭ ವಾರ್ತೆ ಪುತ್ತೂರು/ಮಂಗಳೂರುಆಟೋ ಚಾಲಕನನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬಳಿಕದ ಬೆಳವಣಿಗೆಯಲ್ಲಿ ಶನಿವಾರ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಹಾಗೂ ಕಾನ್‌ಸ್ಟೇಬಲ್ ಓರ್ವರನ್ನು ಇಲಾಖಾ ಸೇವೆಯಿಂದ ಅಮಾನತು ಮಾಡಲಾಗಿದೆ.ಶುಕ್ರವಾರ ಸಂಜೆ ಆಟೋ ಚಾಲಕ ಕುರಿಯದ ಬಶೀರ್ ಎಂಬವರು ಸಮವಸ್ತ್ರ ಧರಿಸದೇ ಆಟೋ ಚಲಾಯಿಸಿಕೊಂಡು ಬರುತ್ತಿರುವಾಗ, ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೊಲೀಸ್ ಠಾಣಾ ಎಎಸ್‌ಐ ಚಿದಾನಂದ ರೈ ಮತ್ತು ಪಿಸಿ ಶ್ರೀಶೈಲ ಎಂ.ಕೆ. ಅವರು ಕೈ ಸನ್ನೆ ಮೂಲಕ ಅಟೋ ನಿಲ್ಲಿಸಲು ಸೂಚಿಸಿದ್ದರು. ಚಾಲಕ ಬಶೀರ್ ರಿಕ್ಷಾವನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಬಂದು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡಿದ್ದು, ಪೊಲೀಸರು ಹಿಂಬಾಲಿಸಿ ವಾಹನವನ್ನು ತಡೆದು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಕುರಿತು ತನಿಖೆ ನಡೆಸಿದ ಮೇಲಾಧಿಕಾರಿಗಳು ಆರೋಪಿತ ಎಎಸ್‌ಐ ಚಿದಾನಂದ ರೈ ಮತ್ತು ಪಿಸಿ ಶ್ರೀಶೈಲ ಎಂ.ಕೆ. ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆ ಇದನ್ನು ಖಚಿತಪಡಿಸಿದೆ.ದರ್ಬೆಯ ಫಿಲೋಮಿನಾ ಕಾಲೇಜು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ನಿತ್ಯವೂ ವಾಹನಗಳನ್ನು ಅಡ್ಡಗಟ್ಟಿ ದಂಡ ವಿಧಿಸುತ್ತಾರೆ. ಶುಕ್ರವಾರ ಆಟೋರಿಕ್ಷಾ ನಿಲ್ಲಿಸದೇ ಇದ್ದಾಗ ಇವರಿಬ್ಬರು ಹಿಂಬಾಲಿಸಿ ಅಡ್ಡಗಟ್ಟಿದ್ದಾರೆ. ವಿಡಿಯೋ ಮಾಡಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ. ಘಟನೆಗೆ ಸಂಬಂಧಿಸಿ ಸಮವಸ್ತ್ರ ಧರಿಸದೇ ಇರುವುದು ಮತ್ತು ಪೊಲೀಸರ ಸೂಚನೆ ಪಾಲಿಸದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬಶೀರ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ರಿಕ್ಷಾ ಚಾಲಕರಿಂದ ಪ್ರತಿಭಟನೆ:ಘಟನೆಯ ಬಳಿಕ ಅಟೋ ಚಾಲಕ ಬಶೀರ್ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬೆಳಗ್ಗಿನಿಂದ ಆಸ್ಪತ್ರೆ ಬಳಿ ಸೇರಿದ ರಿಕ್ಷಾ ಚಾಲಕರು ಗೇಟಿನ ಬಳಿ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಆಕ್ರಮಣಕಾರಿಯಾಗಿ ವರ್ತಿಸಿದ ಸಂಚಾರ ಪೊಲೀಸರನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ರಿಕ್ಷಾ ಸಂಘಟನೆಗಳ ಮುಖಂಡರು, ಕೆ.ಆರ್.ಎಸ್. ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಿ ಚದುರಿಸಿದರು.