ಕರ್ನಾಟಕದಲ್ಲಿ ನಾಡು ನುಡಿ ಹೋರಾಟಗಳಲ್ಲಿ ಆಟೋ ಚಾಲಕರು ಸದಾ ಸಕ್ರಿಯವಾಗಿದ್ದಾರೆ. ಅವರ ಜಾಗೃತಿಯಿಂದಲೆ ಪರಭಾಷಿಕರು ಸಹ ಕನ್ನಡ ಕಲಿತು ಕನ್ನಡದಲ್ಲೆ ವ್ಯವಹರಿಸುವ ವಾತಾವರಣ ನಿರ್ಮಾಣವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು, ನಾಡು-ನುಡಿಗೆ ಕೊಡುಗೆ ನೀಡುವಲ್ಲಿ ಆಟೋ ಚಾಲಕರ ಪಾತ್ರ ಹಿರಿದಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶಿವರಾಮೇಗೌಡ ಬಣ್ಣಿಸಿದರು.

ನಗರದ ವಿವೇಕಾನಂದ ಜೋಡಿ ರಸ್ತೆಯ ಬಾಲಭವನ ಆಟೋ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕರ್ನಾಟಕದಲ್ಲಿ ನಾಡು ನುಡಿ ಹೋರಾಟಗಳಲ್ಲಿ ಆಟೋ ಚಾಲಕರು ಸದಾ ಸಕ್ರಿಯವಾಗಿದ್ದಾರೆ. ಅವರ ಜಾಗೃತಿಯಿಂದಲೆ ಪರಭಾಷಿಕರು ಸಹ ಕನ್ನಡ ಕಲಿತು ಕನ್ನಡದಲ್ಲೆ ವ್ಯವಹರಿಸುವ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರುನಾಡ ಸೇವಕರು ಸಂಘಟನೆ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಮಾತನಾಡಿದರು. ಕರವೇ ಜಿಲ್ಲಾಧ್ಯಕ್ಷ ಎಚ್.ಡಿ. ಜಯರಾಂ. ಆಟೋ ಘಟಕದ ವೆಂಕಟೇಶ್ ‌ಸೋಮಶೇಖರ, ಮುದ್ದೇಗೌಡ, ವಿಜಯಕುಮಾರ್, ಶಿವಲಿಂಗು, ರಾಮಲಿಂಗಯ್ಯ, ಪುನೀತಾ, ಪ್ರವೀಣ್, ಪ್ರಕಾಶ್ ಉಪಸ್ಥಿತರಿದ್ದರು.

ಇದೇ ವೇಳೆ ನ್ಯಾಷನಲ್ ಚಿಲ್ಡ್ರನ್ ಶಾಲೆ ಹಾಗೂ ಸಾತನೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.

ವಾಹನ ಚಾಲಕರೇ ನಿಜವಾದ ಕನ್ನಡ ನಾಡ ಸಂರಕ್ಷಕರು: ಪುಟ್ಟೇಗೌಡ

ಕಿಕ್ಕೇರಿ:

ನಾಡಿನಲ್ಲಿ ಕನ್ನಡ ಭಾಷೆ ಸಮೃದ್ಧಿಯಾಗಿ ಗಟ್ಟಿಯಾಗಿದ್ದರೂ ಅದನ್ನು ಜೊಳ್ಳು ಮಾಡಲು ನಮ್ಮಲ್ಲಿನ ಅನ್ಯಭಾಷೆ ವ್ಯಾಮೋಹವೇ ಕಾರಣ ಎಂದು ಸಮಾಜ ಸೇವಕ ಪುಟ್ಟೇಗೌಡ ಹೇಳಿದರು.

ಪಟ್ಟಣದ ವಿನಾಯಕ ಒಮ್ನಿ ಮಾಲೀಕರ ಹಾಗೂ ಚಾಲಕರ ಸಂಘ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾಷೆಗೆ ಮುಪ್ಪಿಲ್ಲ. ಬಳಸುವ ನಮಗೆ ಮುಪ್ಪು, ಸಾವು ಎಲ್ಲವೂ ಇದೆ. ನಟ ಶಂಕರನಾಗ್ ಅಭಿಮಾನಿಗಳಾಗಿ ಅಂದು ಕನ್ನಡ ಪ್ರೇಮ ತೋರಿದ ಶಂಕರನಾಗ್‌ ಆಶಯವನ್ನು ಉಳಿಸಿಕೊಂಡು ಹೋಗುತ್ತಿರುವ ಚಾಲಕರೇ ಕನ್ನಡದ ನಿಜವಾದ ಅಭಿಮಾನಿಗಳು ಎಂದು ಪ್ರಶಂಸಿದರು.

ಮಕ್ಕಳಿಗೆ ಮೊದಲು ಕನ್ನಡ ಸ್ಪಷ್ಟವಾಗಿ ಮಾತನಾಡುವ, ಬರೆಯುವುದನ್ನು ಕಲಿಸಬೇಕು. ನಾವು ಉಸಿರಾಡುವ ನೆಲ, ಕುಡಿಯುವ ನೀರು, ಭೂತಾಯಿ ಕನ್ನಡಮ್ಮ. ಮಗು ಅಮ್ಮಎಂದು ನುಡಿಯುವ ಭಾಷೆ ಕನ್ನಡವಾಗಿದೆ. ಮನೆ ಪರಿಸರವನ್ನು ಕನ್ನಡಮಯವಾಗಿಸಿ ಜ್ಞಾನಕ್ಕೆ ವ್ಯಾವಹಾರಿಕವಾಗಿ ಇತರೆ ಭಾಷೆ ಕಲಿಯಿರಿ. ಇದು ಹೊಟ್ಟೆಗಾಗಿ ಮಾತ್ರ ಮೀಸಲು ಎಂಬುದನ್ನು ಅರಿತರೆ ಕನ್ನಡ ನಾಡು, ನುಡಿ, ಸಂಸ್ಕೃತಿಎಲ್ಲವೂ ಉಳಿಯಲಿದೆ ಎಂದು ಎಚ್ಚರಿಸಿದರು.

ಕನ್ನಡಾಂಭೆ ಧ್ವಜ ಹಾರಿಸಿ, ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಿಹಿ ತಿನಿಸು ವಿತರಿಸಿ ಕನ್ನಡ ಭಾಷಿಕರ ಪ್ರೀತಿ ಮೆರೆಯಲಾಯಿತು. ಅನೆಗೊಳ ರಘು, ಅಂಚೆಬೀರನಹಳ್ಳಿ ಅನಂತ್, ದಡದಹಳ್ಳಿ ಮೋಹನ, ಗೂಡೆಹೊಸಹಳ್ಳಿ ರವಿ, ಗೌಡೇನಹಳ್ಳಿ ಬಸವರಾಜು, ಗಂಗೇನಹಳ್ಳಿ ಅನಂತ, ತುಳಸಿ ಶೇಖರ, ಸೊಳ್ಳೇಪುರ ಹನುಮಂತ, ಫತಾರಾಂ, ಜೇಟುಸಿಂಗ್, ಕೆ.ಪಿ.ಮಂಜುನಾಥ್‌ ಇದ್ದರು.