ಹಳೆ ವಾಹನ ಗುಜರಿಗೆ ಹಾಕಿದರೆ,ಹೊಸದಕ್ಕೆ ಶೇ.3ವರೆಗೆ ಡಿಸ್ಕೌಂಟ್‌

| Published : Aug 28 2024, 12:59 AM IST

ಸಾರಾಂಶ

ಹಬ್ಬದ ದಿನಗಳ ಆರಂಭಕ್ಕೂ ಮುನ್ನ ವಾಹನ ತಯಾರಿಕಾ ಕಂಪನಿಗಳು, ಗ್ರಾಹಕರಿಗೆ ಹೊಸದೊಂದು ಆಫರ್‌ ಮುಂದಿಟ್ಟಿವೆ. ಹಳೆ ವಾಹನವನ್ನು ಗುಜರಿಗೆ ಹಾಕಿದವರಿಗೆ ಹೊಸ ವಾಹನದ ಖರೀದಿ ವೇಳೆ ಶೇ.1.5ರಿಂದ ಶೇ.3ರವರೆಗೂ ರಿಯಾಯಿತಿ ನೀಡುವುದಾಗಿ ಅವು ಘೋಷಿಸಿವೆ.

ನವದೆಹಲಿ: ಹಬ್ಬದ ದಿನಗಳ ಆರಂಭಕ್ಕೂ ಮುನ್ನ ವಾಹನ ತಯಾರಿಕಾ ಕಂಪನಿಗಳು, ಗ್ರಾಹಕರಿಗೆ ಹೊಸದೊಂದು ಆಫರ್‌ ಮುಂದಿಟ್ಟಿವೆ. ಹಳೆ ವಾಹನವನ್ನು ಗುಜರಿಗೆ ಹಾಕಿದವರಿಗೆ ಹೊಸ ವಾಹನದ ಖರೀದಿ ವೇಳೆ ಶೇ.1.5ರಿಂದ ಶೇ.3ರವರೆಗೂ ರಿಯಾಯಿತಿ ನೀಡುವುದಾಗಿ ಅವು ಘೋಷಿಸಿವೆ. ಈ ರಿಯಾಯಿತಿ ಕಂಪನಿಗಳು ಈಗಾಗಲೇ ನೀಡುತ್ತಿರುವ ಇತರೆ ವಿವಿಧ ರಿಯಾಯಿತಿಗೆ ಹೊರತಾಗಿರಲಿದೆ.

ಹೆಚ್ಚು ಮಾಲಿನ್ಯ ಹೊರಸೂಸುವ ವಾಹನಗಳನ್ನು ರಸ್ತೆಯಿಂದ ಹೊರಗಿಡುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ಹಳೆಯ ವಾಹನಗಳನ್ನು ನಿಗದಿತ ಗುಜರಿ ಕೇಂದ್ರಗಳಿಗೆ ಹಾಕಿ ಅದಕ್ಕೆ ಪ್ರಮಾಣಪತ್ರ ನೀಡುವ ನೀತಿ ಜಾರಿಗೆ ತಂದಿದೆ. ಹೀಗೆ ಕಳೆದ 6 ತಿಂಗಳಲ್ಲಿ ತಮ್ಮ ವಾಹನವನ್ನು ಗುಜರಿಗೆ ಹಾಕಿದ ಯಾವುದೇ ವ್ಯಕ್ತಿಗಳು ಈ ಹೊಸ ರಿಯಾಯಿತಿ ಆಫರ್‌ ಪಡೆದುಕೊಳ್ಳಬಹುದು ಎಂದು ವಾಹನ ತಯಾರಿಕಾ ಕಂಪನಿಗಳ ಜೊತೆ ಸಭೆ ನಡೆಸಿದ ಬಳಿಕ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಪ್ರಕಟಿಸಿದ್ದಾರೆ.

ಪ್ರಯಾಣಿಕ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ, ಟಾಟಾ, ಮಹೀಂದ್ರಾ, ಹ್ಯುಂಡೈ, ಕಿಯಾ, ಟೊಯೋಟಾ, ಹೊಂಡಾ, ಎಂಜಿ ಹೆಕ್ಟರ್‌, ರೆನಾಲ್ಟ್‌, ನಿಸ್ಸಾನ್‌, ಸ್ಕೋಡಾ ಕಂಪನಿಗಳು ಶೇ.15ರಷ್ಟು ಅಥವಾ 20000 ರು. ಪೈಕಿ ಯಾವುದು ಕಡಿಮೆಯೋ ಅದನ್ನು ನೀಡುವುದಾಗಿ ಪ್ರಕಟಿಸಿವೆ. ಇನ್ನು ಮರ್ಸಿಡಿಸಿ ಬೆಂಜ್‌ 25000 ರು. ಡಿಸ್ಕೌಂಟ್‌ ಆಫರ್‌ ಮುಂದಿಟ್ಟಿದೆ.

ಇನ್ನು ಸರಕು ಸಾಗಣೆ ವಾಹನ ತಯಾರಿಕಾ ಕಂಪನಿಗಳಾದ ಟಾಟಾ, ವೋಲ್ವೋ, ಮಹೀಂದ್ರಾ, ಅಶೋಕ್‌ ಲೇಲ್ಯಾಂಡ್, ಫೋರ್ಸ್‌ ಮೋಟಾರ್ಸ್‌, ಇಸುಜು ಕಂಪನಿಗಳು 3.5 ಟನ್‌ಗಿಂತ ಹೆಚ್ಚಿನ ತೂಕದ ವಾಹನಗಳಿಗೆ ಶೇ.3ರಷ್ಟು ರಿಯಾಯ್ತಿ ಪ್ರಕಟಿಸಿವೆ.