ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ರಸ್ತೆ ಬದಿಗೆ ಪಲ್ಟಿಯಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ ಮೊದಲು ಬೆಟ್ಟದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
ಕನ್ನಡಪ್ರಭ ವಾರ್ತೆ ಹನೂರು
ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರ ಆಟೋವೊಂದು ಪಲ್ಟಿಯಾಗಿ 5 ಮಕ್ಕಳು ಸೇರಿ 7 ಜನರಿಗೆ ಗಾಯವಾದ ಘಟನೆ ಭಾನುವಾರ ಬೆಳಗ್ಗೆ 9 ಗಂಟೆಗೆ ತಾಲೂಕಿನ ಆನೆತಲೆ ದಿಂಬಿನ ಬಳಿ ನಡೆದಿದೆ.ಮಂಡ್ಯ ಜಿಲ್ಲೆಯ ಮರಕರದೊಡ್ಡಿ ಗ್ರಾಮದ ನಿವಾಸಿಗಳಾದ ಏಳುಮಲೆ ಸಾವಿತ್ರಿ ಮತ್ತು ಅವರ ಮಕ್ಕಳಾದ ಬಾಲಾಮುರುಗ, ಮಧು, ಹೇಮಂತ್, ಸಂಗೀತ ಸೇರಿದಂತೆ ಸಂಬಂಧಿಕರಾದ ಅಲುಮೇಲು ಆಟೋದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ರಸ್ತೆ ಬದಿಗೆ ಪಲ್ಟಿಯಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ ಮೊದಲು ಬೆಟ್ಟದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಹೊರತು ಹೆಚ್ಚಿನ ಚಿಕಿತ್ಸಾ ಸೌಲಭ್ಯ ಇಲ್ಲದ ಕಾರಣ ಎರಡು ತುರ್ತು ವಾಹನಗಳಲ್ಲಿ ಗಾಯಾಳುಗಳನ್ನು ಕೊಳ್ಳೇಗಾಲ ಉಪವಿಭಾಗ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಗಾಯಾಳುಗಳಲ್ಲಿ 5 ಮಕ್ಕಳು ಸೇರಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.ಪ್ರಕರಣ ಸಂಬಂಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.