ಸಾರಾಂಶ
-ಬೇಡಿಕೆಗಳ ಈಡೇರಿಕೆಗೆ ಆಗ್ರಹ ।-ಫೆಡರೇಷನ್ ಆಫ್ ಕರ್ನಾಟಕ ತಾಲೂಕು ಘಟಕ ಪ್ರತಿಭಟನೆ ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಭಾರತೀಯ ನ್ಯಾಯ ಸಂಹಿತೆ-2023 ಸಂಸತ್ತಿನಲ್ಲಿ ಅಂಗೀಕರಿಸುವ ಮೂಲಕ ಹೊಸ ಕಾನೂನಿನಲ್ಲಿ ರಸ್ತೆ ಸಾರಿಗೆ ಚಾಲಕರನ್ನು ಅಮಾನುಷವಾಗಿ ಶಿಕ್ಷಿಸುವ ಕ್ರಮಕ್ಕೆ ಮುಂದಾಗಿರುವ, ಚಾಲಕ ವಿರೋಧಿ ಮತ್ತು ಜನ ವಿರೋಧಿ ನೀತಿಗಳ ವಿರುದ್ಧ ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ತಾಲೂಕು ಘಟಕ ನೇತೃತ್ವದಲ್ಲಿ ಸೋಮವಾರ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಅಧ್ಯಕ್ಷ ಪಿ.ಎ.ವೆಂಕಟೇಶ್, ವಾಹನ ಮಾಲೀಕರಿಂದ ತೆರಿಗೆ ಸಂಗ್ರಹ ಮಾಡಿದ್ದರೂ, ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಮಾತ್ರ ವರ್ಷಗಳು ಕಳೆದರೂ ನಡೆಯುತ್ತಿಲ್ಲ. ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುವ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್, ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸುವ ಕೆಲಸಗಳು ನಡೆಯುತ್ತಿಲ್ಲ. ಆಟೋ ನಿಲ್ದಾಣಗಳನ್ನು ಆಧುನೀಕರಣ ಮಾಡಲು ಮತ್ತು ಆಟೋ ನಿಲ್ದಾಣಗಳನ್ನು ಅಧಿಕೃತಗೊಳಿಸುವ ಕೆಲಸಗಳು ನಡೆಯುತ್ತಿಲ್ಲ. ಆದರೆ ಹೊಸ ಕಾನೂನಿನ ಮೂಲಕ ದುಬಾರಿ ದಂಡ ಹಾಗೂ ದುಬಾರಿ ಶುಲ್ಕ ವಿಧಿಸುವ ಮೋಟರ್ ವಾಹನಗಳ ತಿದ್ದುಪಡಿಗಳನ್ನು ಮಾತ್ರ ಜಾರಿಗೆ ತರುವ ಸರ್ಕಾರದ ನಿಯಮ ಅವೈಜ್ಞಾನಿಕವಾಗಿದೆ ಎಂದು ಕಿಡಿಕಾರಿದರು.
ಕರ್ನಾಟಕ ಮೋಟರ್ ಟ್ರಾನ್ಸ್‌ಪೋರ್ಟ್ ಮತ್ತು ಇತರೆ ನೌಕರರ ಸಾಮಾಜಿಕ ಸುರಕ್ಷತೆ ಮತ್ತು ಕಲ್ಯಾಣ ಕಾಯ್ದೆ-2024 ಇದರಲ್ಲಿ ಚಾಲಕರ ನೋಂದಣಿ ಹಾಗೂ ಯೋಜನೆಗಳನ್ನು ಶೀಘ್ರವಾಗಿ ಜಾರಿ ಮಾಡಬೇಕು. ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಗಳ ಮೇಲೆ ಹಾಕುವ ತೆರಿಗೆಗಳನ್ನು ಕಡಿಮೆ ಮಾಡಬೇಕು. 15 ವರ್ಷಗಳ ಹಳೆಯ ವಾಹನಗಳ ನಿಷೇಧ ವಾಪಸಾತಿಯಲ್ಲಿ ಸಾರಿಗೆ ವಾಹನಗಳ ಇನ್ಸೂರೆನ್ಸ್ ಪಾಲಿಸಿಗಳ ಮೇಲೆ ವಿಧಿಸಿರುವ ಸೆನ್ಸ್ ತೆಗೆದುಹಾಕಬೇಕು. ತಾಪಂ ಮತ್ತು ನಗರಸಭೆಯಲ್ಲಿನ ಆಶ್ರಯ ಯೋಜನೆ ಮೂಲಕ ಸರ್ವರಿಗೂ ಸೂರು ಎಂಬ ಸರ್ಕಾರದ ಆಶಯದಂತೆ ‘ಸಾರಥಿಸೂರು’ ಯೋಜನೆಯನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಹೊಸ ವಾಹನಗಳ ಮೇಲಿನ ಸರ್ಕಾರದ ಮಾರಾಟ ತೆರಿಗೆ ಶೇ.28ರಿಂದ ಶೇ.5ಕ್ಕೆ ಇಳಿಸಬೇಕು. ಸಾರಿಗೆ ಚಾಲಕರಿಗೆ ಮರಣ ಶಾಸನವಾಗಿರುವ ಭಾರತೀಯ ನ್ಯಾಯ ಸಂಹಿತೆ 2023 (ಬಿ.ಎನ್.ಎಸ್)ರಲ್ಲಿ ಇರುವ ಅಪಘಾತಗಳನ್ನು ಕ್ರಿಮಿನಲ್ ಕೇಸ್ ಮಾಡುವ ಅಂಶಗಳು ರದ್ದಾಗಬೇಕು, ಹತ್ತು ವರ್ಷ ಜೈಲು ಶಿಕ್ಷೆ ಮತ್ತು 7 ಲಕ್ಷ ದಂಡ ವಿಧಿಸುವ ಚಾಲಕ ವಿರೋಧಿಯಾದ ಅಂಶಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಆರ್.ಚಂದ್ರತೇಜಸ್ವಿ, ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ರಾಜ್ಯ ಘಟಕದ ಅಧ್ಯಕ್ಷ ಬಿ.ವಿ.ರಾಘವೇಂದ್ರ, ತಾಲೂಕು ಕಾರ್ಯದರ್ಶಿ ಇನಾಯಿತ್ ಪಾಷಾ, ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ಜಿಲ್ಲಾ ಅಧ್ಯಕ್ಷ ಸಿ.ಎಂ.ಶ್ರೀನಿವಾಸ್, ತಾಲೂಕು ಘಟಕದ ಅಧ್ಯಕ್ಷ ಸಾಧಿಕ್ ಪಾಷ, ಕಾರ್ಯದರ್ಶಿ ಎಜಾಜ್ ಪಾಷ, ಖಜಾಂಚಿ ಗುಲ್ಜಾರ್ ಪಾಷಾ, ತಾಲೂಕು ಲಾರಿ ಡ್ರೈವರ್ಸ್ ಅಸೋಸಿಷನ್ ಕಾರ್ಯದರ್ಶಿ ಸೈಯದ್ ಅಲಿಮುಲ್ಲಾ, ಉಪಾಧ್ಯಕ್ಷ ಬಾಷಾ ಇತರರಿದ್ದರು.