ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಜಲಮಂಡಳಿಯ ಕೊಳವೆಬಾವಿಗಳ ಸಮರ್ಪಕ ನಿರ್ವಹಣೆಗಾಗಿ ರೋಬೋಟಿಕ್ ತಂತ್ರಜ್ಞಾನ ಅಳವಡಿಸಿಕೊಳ್ಳುವಂತೆ ಜಲಮಂಡಳಿ ಅಧ್ಯಕ್ಷ ಡಾ। ವಿ.ರಾಮ್‌ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು ಕೊಳವೆಬಾವಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಜಲಮಂಡಳಿಯ 11 ಸಾವಿರಕ್ಕೂ ಹೆಚ್ಚಿನ ಕೊಳವೆ ಬಾವಿಗಳಿವೆ.
ಅವುಗಳಲ್ಲಿ ಹಲವು ಕೊಳವೆಬಾವಿಗಳು ತಾಂತ್ರಿಕ ಕಾರಣಗಳಿಂದ ಬಳಸದಂತಾಗಿದೆ. ಕೊಳವೆಬಾವಿಗಳ ಪಂಪ್‌ಸೆಟ್ಟನ್ನು ಹೆಚ್ಚಿನ ಸಮಯ ಬಳಸುವುದು, ನೀರಿಲ್ಲದಿದ್ದರೂ ಮೋಟಾರನ್ನು ಓಡಿಸುವುದರಿಂದ ತಾಂತ್ರಿಕ ಸಮಸ್ಯೆಯಾಗುತ್ತಿದೆ.
ಅದನ್ನು ನಿವಾರಿಸಲು ಆಧುನಿಕ ರೋಬೋಟಿಕ್ ತಂತ್ರಜ್ಞಾನ ಬಳಸಬೇಕು. ಅದರಿಂದ ಪಂಪ್‌ಸೆಟ್‌ಗಳ ಮಾಹಿತಿ, ನೀರಿನ ಹರಿವಿನ ಮಾಹಿತಿ, ದುರಸ್ತಿ ಮಾಹಿತಿ ಸೇರಿದಂತೆ ಆಟೋಮ್ಯಾಟಿಕ್ ಆಗಿ ಮೋಟಾರು ಆನ್ ಮತ್ತು ಆಫ್ ಮಾಡಲು ಸಾಧ್ಯವಾಗಲಿದೆ. ಇದರಿಂದ ಕೊಳವೆಬಾವಿಗಳ ಮೋಟಾರುಗಳು ಹಾಳಾಗುವುದನ್ನು ತಪ್ಪಿಸಬಹುದು ಎಂದರು.
ಈ ವೇಳೆ ರೀವೈಂಡಿಂಗ್ ಸೇರಿದಂತೆ ಸಣ್ಣ ತಾಂತ್ರಿಕ ಸಮಸ್ಯೆಯಿಂದ ಸ್ತಬ್ಧವಾಗಿರುವ ಕೊಳವೆಬಾವಿಗಳನ್ನು ದುರಸ್ತಿ ಮಾಡಿ ಸುಸ್ಥಿತಿಗೆ ತರಲು ಕೆಲಸ ಮಾಡಬೇಕಿದೆ.
ಅದಕ್ಕೆ ಇರುವ ಆಡಳಿತಾತ್ಮಕ ಸಮಸ್ಯೆ ಪರಿಹರಿಸುವಂತೆ ಗುತ್ತಿಗೆದಾರರು ಜಲಮಂಡಳಿ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ರಾಮ್‌ಪ್ರಸಾತ್ ಮನೋಹರ್, ಬೋರ್‌ವೆಲ್‌ಗಳ ದುರಸ್ತಿಗೆ ಬೇಕಿರುವ ಎಲ್ಲ ಅಗತ್ಯ ಕ್ರಮಗಳನ್ನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಲಮಂಡಳಿ ಮಂಡಳಿಯ ಪ್ರಧಾನ ಎಂಜಿನಿಯರ್ ಸುರೇಶ್, ಮುಖ್ಯ ಎಂಜಿನಿಯರ್ ಜಯಪ್ರಕಾಶ, ಬೆಂಗಳೂರು ಕೊಳವೆಬಾವಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಯಣ್ಣ ಇದ್ದರು.ಬಾಕ್ಸ್..
ಕೊಳವೆಬಾವಿಗಳ ಸಮೀಕ್ಷೆ: ಅಂತರ್ಜಲ ಮಟ್ಟ ಕುಸಿಯುವುದರಿಂದ ಕೊಳವೆಬಾವಿಗಳಲ್ಲಿ ನೀರಿಲ್ಲದಂತಾಗುತ್ತಿದೆ. ಹೀಗಾಗಿ ಕೊಳವೆಬಾವಿಗಳಲ್ಲಿನ ನೀರಿನ ಲಭ್ಯತೆ, ರಿಪೇರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅದಕ್ಕೆ ತಕ್ಕಂತೆ ನೀರು ಹೊರತೆಗೆಯುವ ಅಗತ್ಯವಿದೆ. ನಗರದಲ್ಲಿ ಇರುವ ಜಲಮಂಡಳಿಯ ಕೊಳವೆಬಾವಿಗಳ ಸಮೀಕ್ಷೆ ಮಾಡಬೇಕಿದೆ.
ಅದಕ್ಕಾಗಿ ಜಲಮಂಡಳಿಯ ಪರವಾನಗಿ ಹೊಂದಿರುವ ಬೆಂಗಳೂರು ಕೊಳವೆ ಬಾವಿ ಗುತ್ತಿಗೆದಾರ ಸಂಘದ ಸದಸ್ಯರು ಅಧಿಕಾರಿಗಳೊಂದಿಗೆ ಜಂಟಿಯಾಗಿ ತಮ್ಮ ವ್ಯಾಪ್ತಿಯಲ್ಲಿನ ಕೊಳವೆಬಾವಿಗಳ ಮಾಹಿತಿಯನ್ನು ಕ್ರೋಢೀಕರಿಸಿ ನೀಡಬೇಕು ಎಂದು ಡಾ। ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.