ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಆಸ್ತಿ ಮೇಲೆ ಸಾಲ ಪಡೆಯುವುದು ಸೇರಿದಂತೆ ಇನ್ನಿತರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಹಣಿಯಲ್ಲಿ ದಾಖಲಿಸುವ ಮ್ಯುಟೇಷನ್ ಕ್ರಮವನ್ನು ಸ್ವಯಂಚಾಲಿತ (ಆಟೋಮ್ಯಾಟಿಕ್) ವ್ಯವಸ್ಥೆ ಬುಧವಾರದಿಂದ ಜಾರಿಗೊಳಿಸಲಾಗುತ್ತಿದ್ದು, ಅದರಿಂದ ಜನರು ಸಣ್ಣ ಕೆಲಸಗಳಿಗೂ ಗ್ರಾಮ ಲೆಕ್ಕಿಗ ಸೇರಿ ಇನ್ನಿತರ ಸರ್ಕಾರಿ ಕಚೇರಿಗೆ ಅಲೆಯುವ ವ್ಯವಸ್ಥೆಗೆ ಕಡಿವಾಣ ಬೀಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ಗಳಲ್ಲಿ ಸಾಲ ಪಡೆದರೆ, ಸಾಲ ತೀರುವಳಿಯಾದರೆ, ವಿಭಾಗ ಮಾಡಿಕೊಂಡರೆ, ಆಸ್ತಿಯನ್ನು ಅಡಮಾನ ಇಟ್ಟರೆ, ಎಸಿ ನ್ಯಾಯಾಲಯದ ಆದೇಶಗಳಾಗಿದ್ದರೆ ಹೀಗೆ ಸಣ್ಣಪುಟ್ಟ ಬದಲಾವಣೆಗಳು ಆದಾಗ ಅದರ ವಿವರವನ್ನು ಪಹಣಿಯಲ್ಲಿ ದಾಖಲಿಸಬೇಕು. ಹೀಗೆ ದಾಖಲಿಸುವ ಸಂದರ್ಭದಲ್ಲಿ ಕಂದಾಯಾಧಿಕಾರಿಗಳು ಬೆರಳಚ್ಚು ನೀಡುವ ಮೂಲಕ ದೃಢೀಕರಿಸಬೇಕು. ಇದರಿಂದ ಅಧಿಕಾರಿಗಳ ಸಮಯ ವ್ಯರ್ಥವಾಗುವುದರ ಜತೆಗೆ, ಜನರು ಸರ್ಕಾರಿ ಕಚೇರಿಗೆ ಅಲೆಯಬೇಕಾಗಿದೆ. ಅದನ್ನು ತಪ್ಪಿಸಲು ಸಣ್ಣಪುಟ್ಟ ಕೆಲಸಗಳನ್ನು ಕಂದಾಯಾಧಿಕಾರಿಗಳ ಧೃಢೀಕರಣ ಇಲ್ಲದೆಯೇ, ಬ್ಯಾಂಕ್‌ಗಳು, ನ್ಯಾಯಾಲಯಗಳು ಹೀಗೆ ವಿವಿಧ ಮೂಲಗಳು ನೀಡುವ ಮಾಹಿತಿಯನ್ನು ನೇರವಾಗಿ ಪಡೆದು ಅದನ್ನು ಪಹಣಿಯಲ್ಲಿ ದಾಖಲಿಸಲಾಗುತ್ತದೆ. ಅದರಿಂದ ಪಹಣಿದಾರರು ಸರ್ಕಾರಿ ಕಚೇರಿಗೆ ಬರದೆ ನೇರವಾಗಿ ಪಹಣಿಯಲ್ಲಿ ಬದಲಾವಣೆ ತರುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದರು.ನೂತನ ಕ್ರಮದಿಂದ ಶೇ.72ರಷ್ಟು ಮ್ಯುಟೇಷನ್ ಕೆಲಸವು ಸ್ವಯಂಚಾಲಿತವಾಗಲಿದೆ. ಈಗಾಗಲೇ 14,21,116 ಪಹಣಿಗಳಲ್ಲಿ ಈ ರೀತಿ ಸ್ವಯಂಚಾಲಿತ ದಾಖಲೀಕರಣ ಮಾಡಲಾಗಿದೆ. ಉಳಿದ ಶೇ.28ರಷ್ಟು ಮ್ಯುಟೇಷನ್ ಕಾರ್ಯವನ್ನು ಕಂದಾಯಾಧಿಕಾರಿಗಳ ಧೃಢೀಕರಣದಿಂದಲೇ ಮಾಡಬೇಕಾದಂತಹವಾಗಿವೆ. ಹಕ್ಕು ಬದಲಾವಣೆ, ಇಂಡೀಕರಣ, ಸಿವಿಲ್ ನ್ಯಾಯಾಲಯಗಳಲ್ಲಿ ವ್ಯಾಜ್ಯ ಇರುವಂತಹ ಪ್ರಕರಣಗಳಲ್ಲಿ 15 ದಿನಗಳ ಕಾಲ ಆಕ್ಷೇಪಣೆಗೆ ಕಾಲಾವಕಾಶ ಒದಗಿಸಿ ಆ ಬಳಿಕ ಪಹಣಿಯಲ್ಲಿ ದಾಖಲೀಕರಣ ಮಾಡಬೇಕಾಗಿರುತ್ತದೆ. ಹೀಗಾಗಿ ಶೇ. 28ರಷ್ಟು ಮ್ಯುಟೇಷನ್ ಪ್ರಕರಣಗಳು ಈವರೆಗಿನ ವ್ಯವಸ್ಥೆಯಂತೆಯೇ ನಡೆಯಲಿದೆ ಎಂದು ಹೇಳಿದರು.
ನನ್ನ ಭೂಮಿ-ನನ್ನ ಗುರುತು:ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಈಗಾಗಲೇ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಅದರಂತೆ 19 ಲಕ್ಷ ಪಹಣಿದಾರರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡುವಂತೆ ಕೋರಲಾಗಿದೆ. ಏ.1ರಿಂದ ಅಧಿಕೃತವಾಗಿ ‘ನನ್ನ ಆಸ್ತಿ’ ಹೆಸರಿನಲ್ಲಿ ‘ನನ್ನ ಭೂಮಿ-ನನ್ನ ಗುರುತು’ ಎಂಬ ಉದ್ದೇಶದೊಂದಿಗೆ ಆಧಾರ್ ಜೋಡಣೆ ಕಾರ್ಯ ಆರಂಭಿಸಲಾಗುತ್ತಿದೆ. ರಾಜ್ಯಾದ್ಯಂತ ಗ್ರಾಮ ಲೆಕ್ಕಿಗರು ಪಹಣಿದಾರರ ಮನೆಗೆ ತೆರಳಿ ಆಧಾರ್ ಜೋಡಣೆ ಹಾಗೂ ಅದರ ಲಾಭವನ್ನು ಮನವರಿಕೆ ಮಾಡಲಿದ್ದಾರೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.ಪ್ರಾಯೋಗಿಕವಾಗಿ ನಡೆಸಲಾದ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯದ ಸಂದರ್ಭದಲ್ಲಿ 19 ಪಹಣಿದಾರರಲ್ಲಿ 6 ಲಕ್ಷ ಪಹಣಿದಾರರು ಮೃತಪಟ್ಟಿರುವುದು ತಿಳಿದುಬಂದಿದೆ. ಹೀಗೆ ಮೃತಪಟ್ಟವರ ಹೆಸರಿನಲ್ಲಿನ ಪಹಣಿಗಳನ್ನು ಗುರುತಿಸಿ, ಬದಲಾವಣೆ ಮಾಡಲು ಆಧಾರ್ ಜೋಡಣೆ ಸಹಕಾರಿಯಾಗಲಿದೆ. ಒಮ್ಮೆ ಎಲ್ಲ ಪಹಣಿದಾರರನ್ನು ಸಂಪರ್ಕಿಸಿದ ನಂತರ ಹೀಗೆ ಮೃತಪಟ್ಟ ಪಹಣಿದಾರರ ಹೆಸರನ್ನು ಪಹಣಿಯಿಂದ ತೆಗೆಯುವುದಕ್ಕಾಗಿ ಗ್ರಾಮ ಮಟ್ಟದಲ್ಲಿ ಕಂದಾಯ ಅದಾಲತ್ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.ಮುಂದಿನ ದಿನಗಳಲ್ಲಿ ಆಸ್ತಿ ನೋಂದಣಿ ಸಮಯದಲ್ಲಿ ಆಧಾರ್ ಸಲ್ಲಿಸುವಂತೆ ಆಸ್ತಿ ಮಾಲೀಕರು ಹಾಗೂ ಖರೀದಿದಾರರಿಗೆ ಕೇಳಲಾಗುತ್ತದೆ. ಒಂದು ವೇಳೆ ಆಧಾರ್ ನೀಡದಿದ್ದರೆ ಆಸ್ತಿ ನೋಂದಣಿಗೂ ಮುನ್ನ ಹೆಚ್ಚಿನ ಪರಿಶೀಲನೆ ನಡೆಸಲಾಗುವುದು. ಆಮೂಲಕ ಅಕ್ರಮ ನೋಂದಣಿಯನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಭಾನುವಾರವೂ ನೋಂದಣಿ:ಬೆಂಗಳೂರು ಸೇರಿದಂತೆ ರಾಜ್ಯದ ಇತರ ಮಹಾನಗರ ಪಾಲಿಕೆ ವ್ಯಾಪ್ತಿಯ ಯಾವುದಾದರು ಒಂದು ನೋಂದಣಾಧಿಕಾರಿಗಳ ಕಚೇರಿ ಭಾನುವಾರವೂ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ. ಕೆಲಸದ ಒತ್ತಡದಲ್ಲಿ ಆಸ್ತಿಗೆ ಸಂಬಂಧಿಸಿದ ಕಾರ್ಯ ಮಾಡಿಕೊಳ್ಳಲಾಗದವರು ಭಾನುವಾರ ತಮ್ಮ ಕೆಲಸ ಮಾಡಿಕೊಳ್ಳಲು ಸಹಕಾರಿಯಾಗುವಂತೆ ಈ ಕೆಲಸ ಮಾಡಲಾಗಿದೆ.ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 6ರಿಂದ 7 ನೋಂದಣಾಧಿಕಾರಿಗಳ ಕಚೇರಿಗಳಿದ್ದು, ರೋಸ್ಟರ್ ಆಧಾರದ ಮೇಲೆ ಒಂದೊಂದು ವಾರ ಒಂದೊಂದು ನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಹೀಗೆ ಭಾನುವಾರವೂ ಕೆಲಸ ಮಾಡುವ ನೋಂದಣಾಧಿಕಾರಿಗಳ ಕಚೇರಿ ಸಿಬ್ಬಂದಿ, ಅಧಿಕಾರಿಗಳಿಗೆ ಮಂಗಳವಾರ ಪರ್ಯಾಯ ರಜೆ ನೀಡಲಾಗುತ್ತದೆ. ಈ ಕ್ರಮ ಯಶಸ್ವಿಯಾದರೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಈ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಏನು ಲಾಭ?ಬ್ಯಾಂಕುಗಳಲ್ಲಿ ಸಾಲ ಪಡೆದರೆ, ತೀರಿಸಿದರೆ, ಆಸ್ತಿ ವಿಭಾಗ ಮಾಡಿದರೆ, ಅಡ ಇಟ್ಟರೆ ಅಂತಹ ಸಂದರ್ಭಗಳಲ್ಲಿ ಅದರ ವಿವರವನ್ನು ಪಹಣಿಯಲ್ಲಿ ದಾಖಲಿಸಬೇಕು. ಆ ದಾಖಲು ಕಾರ್ಯಕ್ಕೆ ಕಂದಾಯಾಧಿಕಾರಿ ಬೆರಳಚ್ಚು ಬೇಕು. ಇನ್ನು ಮುಂದೆ ವಿವಿಧ ಮೂಲಗಳಿಂದ ಮಾಹಿತಿ ಪಡೆದು ಸ್ವಯಂಚಾಲಿತವಾಗಿ ಆ ಮಾಹಿತಿ ಸೇರ್ಪಡೆ ಮಾಡಲಾಗುತ್ತದೆ. ಜನರು ಸರ್ಕಾರಿ ಕಚೇರಿಗೆ ಅಲೆದಾಡಬೇಕಿಲ್ಲ.