ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್, ವಿಶಾಖಪಟ್ಟಣಂ ಹಾಗೂ ಗೋದಾವರಿ ಗುಡ್ಡಗಾಡು ಪ್ರಾಂತ್ಯಗಳ ಮಾದರಿಯಲ್ಲಿ ಸಂವಿಧಾನದ 5ನೇ ಪರಿಚ್ಛೇದದ ಅಡಿಯಲ್ಲಿ ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡುವುದೊಂದೇ ಆದಿಮಸಂಜಾತ ಕೊಡವರು ಎದುರಿಸುತ್ತಿರುವ ಭೌಗೋಳಿಕ-ರಾಜಕೀಯ ದುರಂತಕ್ಕೆ ಪರಿಹಾರ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದರು.

ಮಡಿಕೇರಿ : ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್, ವಿಶಾಖಪಟ್ಟಣಂ ಹಾಗೂ ಗೋದಾವರಿ ಗುಡ್ಡಗಾಡು ಪ್ರಾಂತ್ಯಗಳ ಮಾದರಿಯಲ್ಲಿ ಸಂವಿಧಾನದ 5ನೇ ಪರಿಚ್ಛೇದದ ಅಡಿಯಲ್ಲಿ ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡುವುದೊಂದೇ ಆದಿಮಸಂಜಾತ ಕೊಡವರು ಎದುರಿಸುತ್ತಿರುವ ಭೌಗೋಳಿಕ-ರಾಜಕೀಯ ದುರಂತಕ್ಕೆ ಪರಿಹಾರ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದರು. ಈ ಬಗ್ಗೆ ಸಿಎನ್‌ಸಿ ವತಿಯಿಂದ ಮಾನವ ಸರಪಳಿ ಕಾರ್ಯಕ್ರಮವನ್ನು 19ರಂದು ಚೆಟ್ಟಳ್ಳಿಯಲ್ಲಿ ಆಯೋಜಿಸಲಾಗುವುದು ಎಂದು ನಾಚಪ್ಪ ಹೇಳಿದರು.ಮಾದಾಪುರದಲ್ಲಿ ಶನಿವಾರ ಆಯೋಜಿಸಿದ್ದ ಸಿಎನ್‌ಸಿಯ 2ನೇ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದಿಮಸಂಜಾತ ಕೊಡವರನ್ನು ಸಂವಿಧಾನದ ಅಡಿಯಲ್ಲಿ ವಿಶಿಷ್ಟ ಪ್ರಕೃತಿ ಆರಾಧಕ ಧಾರ್ಮಿಕ ಸಮುದಾಯವೆಂದು ಗುರುತಿಸಿ, ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಹಾಗೂ ಸ್ವಯಂ-ಆಡಳಿತದ ಭದ್ರತೆ ನೀಡಿದರೆ ಮಾತ್ರ ಕೊಡವರ ಜಮೀನು, ಜಲ, ಸಂಸ್ಕೃತಿ, ಪರಂಪರೆ, ಪರಿಸರ ಮತ್ತು ಜೀವವೈವಿಧ್ಯವನ್ನು ರಕ್ಷಿಸಲು ಸಾಧ್ಯ ಎಂದರು.

ಸಿಎನ್‌ಸಿ ವತಿಯಿಂದ ಕೊಡವ ಪ್ರಾಂತದಾದ್ಯಂತ ಶಾಂತಿಯುತ ಮಾನವ ಸರಪಳಿ ಮೂಲಕ ಕೊಡವ ಜನಾಂಗೀಯ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸಂವಿಧಾನದ 371ನೇ ವಿಧಿ ಹಾಗೂ 5ನೇ ಮತ್ತು 6ನೇ ಪರಿಚ್ಛೇದಗಳ ಅಡಿಯಲ್ಲಿ ಸ್ವಯಂ ಆಡಳಿತ, ಮೂಲನಿವಾಸಿ ಸಮುದಾಯವಾಗಿ ಸಾಂವಿಧಾನಿಕ ರಕ್ಷಣೆ ಮತ್ತು ವಿಶೇಷ ಮನ್ನಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಿಎನ್‌ಸಿ ಮುಂದಿಟ್ಟಿದೆ.ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ್ದವರು ಗುರು-ಕಾರೋಣರು, ಸೂರ್ಯ-ಚಂದ್ರರು, ಭೂಮಿತಾಯಿ, ವನದೇವತೆ, ಜಲದೇವತೆ ಕಾವೇರಿ ಹಾಗೂ ಭಾರತದ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಸಿಎನ್‌ಸಿಯ ಹೋರಾಟಕ್ಕೆ ಬೆಂಬಲಿಸುವ ಸಂಕಲ್ಪ ಮಾಡಿದರು. ರಾಷ್ಟ್ರಗೀತೆ ‘ಜನ ಗಣ ಮನ’ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಉದ್ದಿನಾಡಂಡ ಮುತ್ತಕ್ಕಿ, ಪಾಸುರ ರಜನಿ ರಾಜ, ಮೇದರ ಪ್ರತೀಕ ಕಂಠಿ, ಕನ್ನಿಕಂಡ ಜಾನಕಿ, ಬಾಳೆಯಡ ಪೊನ್ನಮ್ಮ, ಮಂಡಿರ ಪೂವಮ್ಮ ಸೇರಿದಂತೆ ಹಲವು ಪ್ರಮುಖರು ಹಾಗೂ ಸಿಎನ್‌ಸಿ ಬೆಂಬಲಿಗರು ಪಾಲ್ಗೊಂಡಿದ್ದರು.

ಕೊಡವ ಗುರುತಿನ ಪ್ರತ್ಯೇಕ ದಾಖಲಾತಿಗೆ ಒತ್ತಾಯ

1871–72ರಿಂದ 1941ರ ಜನಗಣತಿಯವರೆಗೆ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವೆಂದು ಗುರುತಿಸಲಾಗುತ್ತಿತ್ತು. 1941ರ ನಂತರ ಈ ಅಸ್ಮಿತೆಯನ್ನು ಅಳಿಸಿ ದೊಡ್ಡ ಸಮುದಾಯಗಳೊಂದಿಗೆ ವಿಲೀನಗೊಳಿಸಲಾಗಿದ್ದು, ಇದರಿಂದ ಕೊಡವರು ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುವಂತಾಯಿತು ಎಂದು ನಾಚಪ್ಪ ಹೇಳಿದರು. 1956ರವರೆಗೆ ‘ಪಾರ್ಟ್ ಸಿ’ ಕೊಡಗು ರಾಜ್ಯವಾಗಿ ಅಸ್ತಿತ್ವದಲ್ಲಿತ್ತು. ರಾಜ್ಯ ಪುನರ್ವಿಂಗಡಣಾ ಕಾಯ್ದೆಯಡಿ ಕೊಡಗನ್ನು ಕರ್ನಾಟಕಕ್ಕೆ ಸೇರಿಸಿರುವುದು ಕೊಡವರ ಪಾಲಿನ ಐತಿಹಾಸಿಕ ಅನ್ಯಾಯವಾಗಿದ್ದು, 1941ರ ಜನಗಣತಿಯಲ್ಲಿ ಕೊಡವ ಗುರುತಿನ ನಾಶ ಹಾಗೂ 1956ರ ವಿಲೀನವು ಕೊಡವರ ಅಸ್ಮಿತೆಗೆ ಗಂಭೀರ ಹೊಡೆತ ನೀಡಿದೆ ಎಂದು ಅವರು ಆರೋಪಿಸಿದರು.