ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಪ್ರತಿಷ್ಠಿತ ಯುವರಾಜ ಕಾಲೇಜಿನ ಸ್ವಾಯತ್ತತೆ ರದ್ದು ಬೇಜವಾಬ್ದಾರಿ ಕ್ರಮ ಎಂದು ವಿಧಾನಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಕಿಡಿಕಾರಿದರು.

ಯುವರಾಜ ಕಾಲೇಜು ಪ್ರಾಧ್ಯಾಪಕರು ತಮ್ಮ ಜವಾಬ್ದಾರಿ ನಿರ್ವಹಿಸಲು ವಿಫಲರಾಗಿದ್ದಾರೆ. ಕಾಲೇಜಿನ ಗೌರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾದ ಮೈಸೂರು ವಿವಿ ಕುಲಪತಿ ಸ್ವಾಯತ್ತತೆ ರದ್ದು ಮಾಡಿರುವುದು ದುರಂತ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

2028 ರಲ್ಲಿ ಯುವರಾಜ ಕಾಲೇಜು ಶತಮಾನೋತ್ಸವ ಆಚರಿಸಿಕೊಳ್ಳಲಿದೆ. 2 ದಶಕಗಳಿಂದ ಸ್ವಾಯತ್ತ ಕಾಲೇಜಾಗಿ ಗುಣಮಟ್ಟ ಶಿಕ್ಷಣ ನೀಡುವ ಸಂಸ್ಥೆಯಾಗಿದೆ. ಅತ್ಯಾಧುನಿಕ ಸೌಕರ್ಯದೊಂದಿಗೆ ವಿದ್ಯಾರ್ಥಿಸ್ನೇಹಿ ವಾತಾವರಣ ಇದೆ. 4 ಬಾರಿ ನ್ಯಾಕ್ ಮಾನ್ಯತೆ ಪಡೆದುಕೊಂಡಿದೆ. 26 ಕೋಟಿ ರೂ. ಅನುದಾನ ಹೊಂದಿದೆ ಎಂದು ಅವರು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು 2025- 26ನೇ ಸಾಲಿನಿಂದಲೇ ಸ್ವಾಯತ್ತತೆ ಬೇಡವೆಂದು ಪತ್ರ ಬರೆದು ಕೋರಿದರು. ಈ ಬಗ್ಗೆ ಗೌರ್ನಿಂಗ್ ಸಭೆಯಲ್ಲಿ ಚರ್ಚಿಸದ ಕುಲಪತಿ ಫೆ.5 ರಂದು ವಿಶೇಷ ಸಿಂಡಿಕೇಟ್ ಸಭೆ ಕರೆದು ತೀರ್ಮಾನಿಸಿ ಫೆ.16 ರಂದು ಯುವರಾಜ ಕಾಲೇಜು ಮೈಸೂರು ವಿವಿಯ ಘಟಕ ಕಾಲೇಜೆಂದು ಆದೇಶ ಹೊರಡಿಸಿದ್ದಾರೆ ಎಂದು ಅವರು ಹೇಳಿದರು.


36 ಕಾಯಂ ಪ್ರಾಧ್ಯಾಪಕರಲ್ಲಿ 33 ಪ್ರಾಧ್ಯಾಪಕರು ಸ್ವಾಯತ್ತತೆ ರದ್ದು ಮಾಡುವ ಪತ್ರಕ್ಕೆ ಸಹಿ ಮಾಡಿದ್ದಾರೆ. ಮೂವರು ಮಹಿಳಾ ಪ್ರಾಧ್ಯಾಪಕರು ಸಹಿ ಮಾಡಿಲ್ಲ. ಕಾಯಂ ಅಧ್ಯಾಪಕರ ಕೊರತೆಯ ಕಾರಣದಿಂದ ಸ್ವಾಯತ್ತತೆ ರದ್ದು ಮಾಡಿರುವುದು ದುರಂತ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸ್ವಾಯತ್ತತೆ ರದ್ದಾಗಿರುವುದಕ್ಕೆ ಕ್ರಮ ತೆಗೆದುಕೊಳ್ಳಲು ಯುವರಾಜ ಕಾಲೇಜು ಆಡಳಿತ ಮಂಡಳಿ, ಪ್ರಾಧ್ಯಾಪಕರ ವಿರುದ್ಧ ಉನ್ನತ ಶಿಕ್ಷಣ ಸಚಿವರು ತನಿಖೆ ಮಾಡಿಸಬೇಕು. ಸ್ವಾಯತ್ತತೆ ಸ್ಥಾನಮಾನ ಮುಂದುವರಿಸುವಂತೆ ಆದೇಶ ಮಾಡಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಮಂಡ್ಯ ವಿವಿಗೆ ಮೈಸೂರು ವಿವಿಯಿಂದ ನಿಯೋಜಿತರಾಗಿದ್ದ 11 ಪ್ರಾಧ್ಯಾಪಕರು 2 ವರ್ಷಗಳಿಂದ ಕಾರ್ಯಭಾರ ಇರುವುದಿಲ್ಲ. ಮೂಲ ವಿಶ್ವವಿದ್ಯಾನಿಲಯಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯರಿಗೆ 4 ಬಾರಿ ಪತ್ರ ಬರೆದರೂ ಉಪಯೋಗವಾಗಿಲ್ಲ. ಉನ್ನತ ಶಿಕ್ಷಣ ಸಚಿವರು ಕೂಡಲೇ ಅವರನ್ನು ಮೈಸೂರು ವಿವಿಯಲ್ಲಿ ಕರ್ತವ್ಯ ನಿರ್ವಹಿಸಲು ಆದೇಶಿಸಬೇಕು ಎಂದು ಅವರು ಒತ್ತಾಯಿಸಿದರು.

ಮೈಸೂರು ವಿವಿ ಪುನಶ್ಚೇತನಕ್ಕೆ ಆಗ್ರಹ

ಮೈಸೂರು ವಿವಿ ಅದೋಗತಿಯತ್ತ ಸಾಗುತ್ತಿದ್ದು, ಕೂಡಲೇ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ವಿವಿಯನ್ನು ಪುನಶ್ಚೇತನಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಚಾಮರಾಜನಗರ, ಮಂಡ್ಯ ಮತ್ತು ಹಾಸನದಲ್ಲಿ ಅವೈಜ್ಞಾನಿಕವಾಗಿ ವಿಶ್ವವಿದ್ಯಾನಿಲಯ ಆರಂಭಿಸಿ ಯಾವುದೇ ಅನುದಾನ ನೀಡದೇ ವಿದ್ಯಾರ್ಥಿಗಳ ಶುಲ್ಕದಿಂದ ಕಾಲೇಜು ನಡೆಸುವ ನೀತಿಯಿಂದ ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಗುತ್ತಿದೆ. ಮೈಸೂರು ವಿವಿಯೂ ದುಸ್ಥಿತಿಗೆ ತಲುಪಿದೆ ಎಂದು ಅವರು ಆರೋಪಿಸಿದರು.

ರಾಜ್ಯ ಸರ್ಕಾರವೇ ನೇರವಾಗಿ ಮೈಸೂರು ವಿವಿ ನಿವೃತ್ತ ನೌಕರರಿಗೆ ಪಿಂಚಣಿ ಕೊಡಬೇಕು. 2 ಸಾವಿರ ನಿವೃತ್ತರಿಗೆ ಪ್ರತಿ ತಿಂಗಳು ಮೈಸೂರು ವಿವಿ 9 ಕೋಟಿ ರೂ. ಕೊಡಬೇಕು. ವಿವಿಯಲ್ಲಿ ಹಣ ಇಲ್ಲದೇ ನಿವೃತ್ತ ನೌಕರರಿಗೆ ಸಕಾಲದಲ್ಲಿ ವೇತನ ದೊರೆಯುತ್ತಿಲ್ಲ. ಈ ಬಜೆಟ್‌ ನಲ್ಲಿ ಮೈಸೂರು ವಿವಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

----

ಕೋಟ್...

ಯುವರಾಜ ಕಾಲೇಜಿನಲ್ಲಿ 9 ಪಿಜಿ ಕೋರ್ಸ್ ಮುಚ್ಚಲಾಗಿದೆ. ಗಂಗೋತ್ರಿಯಲ್ಲಿ 6, ಸಂಜೆ ಕಾಲೇಜಿನಲ್ಲೂ ಪಿಜಿ ಕೋರ್ಸ್ ಮುಚ್ಚಿವೆ. ಇದು ಶತಮಾನ ಪೂರೈಸಿರುವ ಮೈಸೂರು ವಿವಿಗೆ ಅಪಕೀರ್ತಿ ಮತ್ತು ವಿವಿಯ ಅಸ್ತಿತ್ವವವೇ ಅಲುಗಾಡುತ್ತಿರುವುದಕ್ಕೆ ನಿದರ್ಶನವಾಗಿದೆ.

- ಮರಿತಿಬ್ಬೇಗೌಡ, ಮಾಜಿ ಉಪ ಸಭಾಪತಿ