ಆಟೋರಿಕ್ಷಾ ಡಿಕ್ಕಿಯಾಗಿ ಕರುವೊಂದು ಗಂಭೀರ ಗಾಯಗೊಂಡಿದೆ. ಕುಶಾಲನಗರ ಪಟ್ಟಣದಲ್ಲಿ ಘಟನೆ ನಡೆದಿದೆ

ಕುಶಾಲನಗರ: ಆಟೋರಿಕ್ಷಾ ಡಿಕ್ಕಿಯಾಗಿ ಕರುವೊಂದು ಗಂಭೀರ ಗಾಯಗೊಂಡಿದೆ. ಸೋಮವಾರ ತಡರಾತ್ರಿ ವೇಳೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ. ಆಟೋ ಚಾಲಕ ಕೂಡ ಅಲ್ಪಸಲ್ಪ ಗಾಯಗೊಂಡಿದ್ದಾರೆ.

ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ರಾತ್ರಿ ಸುಮಾರು 1.30ಕ್ಕೆ ಹಸು ಮತ್ತು ಕರು ರಸ್ತೆಯಲ್ಲಿ ನಿಂತಿದ್ದು, ಈ ಸಂದರ್ಭ ಬಂದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಕರುವಿಗೆ ನಂತರ ಸಮೀಪದಲ್ಲಿದ್ದ ಅಂಗಡಿ ಫಲಕಕ್ಕೆ ಡಿಕ್ಕಿಯಾಗಿದೆ.

ಇದೇ ಸಂದರ್ಭ ರಸ್ತೆಯಲ್ಲಿ ತೆರಳುತ್ತಿದ್ದ ಕುಶಾಲನಗರದ ಚಾಲಕ ಡಾಲು ಮತ್ತು ಸ್ನೇಹಿತರು ಕರುವನ್ನು ಬದಿಗೆ ಸರಿಸಿದರು. ಬೆಳಗ್ಗೆ ಕುಶಾಲನಗರ ಪುರಸಭೆ ಪೌರ ಕಾರ್ಮಿಕರಾದ ಎನ್. ಗಣೇಶ್, ಸುರೇಶ್ ಬಾಬು ರಾಜು ಕೃಷ್ಣ ಮತ್ತು ಸ್ಥಳೀಯ ಉದ್ಯಮಿ ದಾವುದ್ ಮತ್ತಿತರರು ಕರುವನ್ನು ಕುಶಾಲನಗರ ಪಶು ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದು, ಚಿಕಿತ್ಸೆ ಕೊಡಿಸಿದರು.

ನಂತರ ದನ, ಕರುವಿನ ಮಾಲೀಕರನ್ನು ಪತ್ತೆ ಹಚ್ಚಿ ಹಸ್ತಾಂತರಿಸಲಾಯಿತು. ಘಟನೆ ಸಂಬಂಧ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.