ಕನ್ನಡಪ್ರಭ ವಾರ್ತೆ ಮೈಸೂರು

ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಮತ್ತು ಪ್ರಯೋಜನಗಳನ್ನು ವಿದ್ಯಾರ್ಥಿನಿಯರು ಸರಿಯಾಗಿ ತಿಳಿದುಕೊಂಡು ತಮ್ಮ ಜೀವನದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.

ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯು ಸೋಮವಾರ ಆಯೋಜಿಸಿದ್ದ ಯುವನಿಧಿ ಹಾಗೂ ಶಕ್ತಿ ಯೋಜನೆಗಳ ಕುರಿತು ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸುವ ವಿಶೇಷ ಸಂವಾದ ಮತ್ತು ಜಾಗೃತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿನಿಯರು ಕಾಲೇಜಿಗೆ ತಲುಪಲು ಎದುರಿಸುತ್ತಿರುವ ಸಾರಿಗೆ ಸಮಸ್ಯೆಯನ್ನು ಗಮನಿಸಿದ ಶಾಸಕರು, ಕಾಲೇಜಿನ ವೇಳಾಪಟ್ಟಿಗೆ ಅನುಗುಣವಾಗಿ ಕೆಎಸ್‌ಆರ್‌ ಟಿಸಿ ಬಸ್‌ ಗಳ ಸಂಚಾರ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಲೇಜಿನ ಬಿಸಿಎ ಕೋರ್ಸ್‌ ಗೆ ತರಗತಿಗಳು ಮತ್ತು ಉಪನ್ಯಾಸಕರ ಕೊರತೆ ಕುರಿತು ಪೋಷಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಈ ವಿಷಯವನ್ನು ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಶಿಕ್ಷಣ ಸಚಿವರ ಗಮನಕ್ಕೆ ತಂದು ಶೀಘ್ರವೇ ಉಪನ್ಯಾಸಕರ ನೇಮಿಸಲು ತಿಳಿಸಲಾಗುವುದು ಎಂದು ಅವರು ಹೇಳಿದರು.


ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಡಿಪ್ಲೊಮಾ ಹಾಗೂ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗದಿದ್ದಲಿ ಯುವನಿಧಿ ಯೋಜನೆಯಡಿ ನೊಂದಣಿ ಮಾಡಿಕೊಂಡು, ಸಹಾಯಧನವನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಬಳಸಿಕೊಳ್ಳಬಹುದು ಎಂದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮೊಬೈಲ್ ಹಾಗೂ ವ್ಯರ್ಥ ಹರಟೆಯಲ್ಲಿ ಕಾಲ ಕಳೆಯದೆ, ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕು. ಈ ಅಮೂಲ್ಯವಾದ ಸಮಯವನ್ನು ಕಳೆದುಕೊಂಡರೆ ಭವಿಷ್ಯದಲ್ಲಿ ಹಿನ್ನಡೆಯಾಗುತ್ತದೆ. ದೇಶದಲ್ಲಿ ಸಾಧನೆ ಮಾಡಿದ ಹೆಚ್ಚಿನವರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರಾಗಿದ್ದಾರೆ. ಕಷ್ಟಗಳನ್ನು ಅನುಭವಿಸಿದವರು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ ಎಂದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮುರಳೀಧರ್ ಮಾತನಾಡಿ, ಇಂದಿನ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ಬರಿ ಪದವಿ ಅಥವಾ ಸ್ನಾತಕೋತ್ತರ ಪದವಿ ಸಾಲದು. ಉದ್ಯೋಗ ಕ್ಷೇತ್ರದಲ್ಲಿ ಕೇವಲ ಶೈಕ್ಷಣಿಕ ಅರ್ಹತೆಗಿಂತ ವಿಶೇಷ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಹಾಗೂ ಹೆಚ್ಚಿನ ವೇತನ ಸಿಗುತ್ತಿದೆ. ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಸಂಪೂರ್ಣ ಉಚಿತವಾಗಿ ವಿವಿಧ ಉದ್ಯೋಗ ಆಧಾರಿತ ತರಬೇತಿ ನೀಡಲಾಗುತ್ತದೆ ಎಂದರು.

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆ ಮುಖಾಂತರ ವಿವಿಧ ತರಬೇತಿಗಳನ್ನು ಒದಗಿಸಲಾಗುತ್ತದೆ. ಖಾಸಗಿ ಸಂಸ್ಥೆಗಳಲ್ಲಿ 40000 ದಿಂದ 1 ಲಕ್ಷದವರೆಗೆ ವೆಚ್ಚವಾಗುವ ಕೋರ್ಸ್‌ ಗಳನ್ನು ಇಲ್ಲಿ ಉಚಿತವಾಗಿ ಕಲಿಯಬಹುದು ಎಂದರು.

ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಪ್ರಾಂಶುಪಾಲೆ ಡಾ.ವಿ. ರೇಣುಕಾ ಬಾಯಿ, ಮೈಸೂರು ವಿಭಾಗದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಪುಷ್ಪವಲ್ಲಿ, ಉಪಾಧ್ಯಕ್ಷ ಆರ್. ಗಿರೀಶ್, ವಿವಿಧ ಕ್ಷೇತ್ರದ ಅಧ್ಯಕ್ಷರಾದ ಎಂ.ಎಂ. ಮಹಾದೇವ, ಸುಶೀಲಾ ಮರಿಗೌಡ, ಜೆ. ವಿನಯ್ ಕುಮಾರ್ ಮೊದಲಾದವರು ಇದ್ದರು.ಬರೀ ಪದವಿ ಶಿಕ್ಷಣ ಮಾತ್ರವಲ್ಲದೆ, ಇಂಗ್ಲಿಷ್ ಸಂವಹನ ಕೌಶಲ್ಯ ಹಾಗೂ ಕಂಪ್ಯೂಟರ್ ಕೋರ್ಸ್‌ ಗಳನ್ನು ಕಲಿಯುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಬಹುದು. ಸರ್ಕಾರವು ಮಹಿಳೆಯರ ಉಚಿತ ಬಸ್ ಪ್ರಯಾಣ (ಶಕ್ತಿ ಯೋಜನೆ) ಹಾಗೂ ಗೃಹಲಕ್ಷ್ಮಿ ಯೋಜನೆಗಳ ಮೂಲಕ ಸಶಕ್ತಿಕರಣಕ್ಕೆ ಒತ್ತು ನೀಡಿದೆ. ವಿದ್ಯಾರ್ಥಿನಿಯರು ತಮ್ಮ ಕಠಿಣ ಶ್ರಮದ ಮೂಲಕ ಉತ್ತಮ ಫಲಿತಾಂಶ ಪಡೆದು ಪೋಷಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತರಬೇಕು.

- ಎಂ.ಕೆ.ಸೋಮಶೇಖರ್, ಮಾಜಿ ಶಾಸಕರು