ಬಣ್ಣದ ಲೋಕದ ತಾರೆಗಳಿಗೆ ನೀವು ಯಾರೆಂದೇ ಗೊತ್ತಿರುವುದಿಲ್ಲ. ಆದರೂ ನಾಯಕ ಅಥವಾ ನಟಿಯ ಬಗ್ಗೆ ಅಪಾರ ಅಭಿಮಾನವಿರಿಸಿಕೊಳ್ಳುತ್ತೀರಿ. ನಿಮ್ಮದೇ ದುಡ್ಡು, ನಿಮ್ಮದೇ ಶ್ರಮ, ನಿಮ್ಮದೇ ಸಮಯದೊಂದಿಗೆ ಜೀವನದಲ್ಲಿ ಬೆಳವಣಿಗೆ ಕಾಣುತ್ತೀರಿ. ಆದರೆ, ವಾಸ್ತವದಲ್ಲಿ ಜನರು, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಸ್ಥಳೀಯ ಶಾಸಕರು, ಸಚಿವರ ಮೇಲೂ ಅಭಿಮಾನ ಬೆಳೆಸಿಕೊಳ್ಳಬೇಕಲ್ಲವೇ..?

- ನೀವು ಯಾರೆಂದೇ ಗೊತ್ತಿರದ ನಟರ ಬಗ್ಗೆ ಅಭಿಮಾನವಿಟ್ಟು ಏನು ಪ್ರಯೋಜನ?

- ಅಭಿವೃದ್ಧಿಗೆ ಬೆಂಬಲವಾಗುವ ಸಚಿವರು, ಶಾಸಕರ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ

- 30 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ 10 ಸಾವಿರ ರು. ನಗದು ಪುರಸ್ಕಾರಕನ್ನಡಪ್ರಭ ವಾರ್ತೆ ಮಂಡ್ಯ

ಯುವಜನರು ಸಿನಿಮಾ ನಟರ ಬಗ್ಗೆ ಅಂಧಾಭಿಮಾನ ಇಟ್ಟುಕೊಳ್ಳುವುದು ಬೇಡ. ನೀವು ಯಾರೆಂದು ಗೊತ್ತಿರದ ನಟ ಅಥವಾ ನಟಿಯ ಬಗ್ಗೆ ಅಭಿಮಾನವಿಟ್ಟುಕೊಂಡರೆ ಪ್ರಯೋಜನವೇನು. ಅದರ ಬದಲು ನಿಮ್ಮಗಳ ಶ್ರೇಯೋಭಿವೃದ್ಧಿಗೆ ಬೆನ್ನೆಲುಬಾಗಿ ನಿಲ್ಲುವ ಸಚಿವರು-ಶಾಸಕರ ಮೇಲೆ ಅಭಿಮಾನ ಬೆಳೆಸಿಕೊಳ್ಳುವಂತೆ ಶಾಸಕ ಪಿ.ರವಿಕುಮಾರ್‌ ಸಲಹೆ ನೀಡಿದರು.

ನಗರದಲ್ಲಿರುವ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಬಣ್ಣದ ಲೋಕದ ತಾರೆಗಳಿಗೆ ನೀವು ಯಾರೆಂದೇ ಗೊತ್ತಿರುವುದಿಲ್ಲ. ಆದರೂ ನಾಯಕ ಅಥವಾ ನಟಿಯ ಬಗ್ಗೆ ಅಪಾರ ಅಭಿಮಾನವಿರಿಸಿಕೊಳ್ಳುತ್ತೀರಿ. ನಿಮ್ಮದೇ ದುಡ್ಡು, ನಿಮ್ಮದೇ ಶ್ರಮ, ನಿಮ್ಮದೇ ಸಮಯದೊಂದಿಗೆ ಜೀವನದಲ್ಲಿ ಬೆಳವಣಿಗೆ ಕಾಣುತ್ತೀರಿ. ಆದರೆ, ವಾಸ್ತವದಲ್ಲಿ ಜನರು, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಸ್ಥಳೀಯ ಶಾಸಕರು, ಸಚಿವರ ಮೇಲೂ ಅಭಿಮಾನ ಬೆಳೆಸಿಕೊಳ್ಳಬೇಕಲ್ಲವೇ ಎಂದು ಪ್ರಶ್ನಿಸಿದರು.

ಸ್ಥಳೀಯವಾಗಿ ನಿಮ್ಮ ಹಾಗೂ ಜನರ ಸಮಸ್ಯೆಗಳಿಗೆ ಸಿನಿಮಾ ನಟ-ನಟಿಯರು ಪರಿಹಾರ ದೊರಕಿಸುವುದಿಲ್ಲ. ಅದನ್ನು ಪರಿಹರಿಸುವವರು ನಾವೇ. ನಾನು ಶಾಸಕನಾದ ಬಳಿಕ ಮಹಿಳಾ ಕಾಲೇಜಿನ ಚಿತ್ರಣವೇ ಬದಲಾಗಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮಂಡ್ಯ ವಿವಿ ಹೆಬ್ಬಾಗಿಲು ಮಾದರಿಯಲ್ಲೇ ನಿಮ್ಮ ಕಾಲೇಜಿನ ಹೆಬ್ಬಾಗಿಲು ನಿರ್ಮಿಸಿಕೊಡುತ್ತೇನೆ. ಕಾಂಪೌಂಡ್ ಅಭಿವೃದ್ಧಿಯಾಗುತ್ತದೆ. ನನ್ನ ಬಳಿಗೆ ಸಾವಿರಾರು ಜನ ಮಕ್ಕಳ ಶಾಲಾ ಶುಲ್ಕ ಕಟ್ಟಲು ನೆರವು ಕೇಳಲು ಬರುತ್ತಾರೆ. ಆದರೆ, ಅವರ‍್ಯಾರೂ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸುತ್ತಿಲ್ಲ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುವಂತೆ ಪೋಷಕರಿಗೆ ಕಿವಿಮಾತು ಹೇಳಿದರು.

ಪ್ರತಿ ವರ್ಷದಂತೆ ಈ ವರ್ಷವೂ ೩ ಲಕ್ಷ ರು. ಹಣವನ್ನು ನೀಡುತ್ತಿದ್ದೇನೆ, ಮುಂದೆಯೂ ನೀಡುತ್ತೇನೆ, ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿನಿಯರು ಸದುಪಯೋಗಪಡಿಸಿಕೊಳ್ಳಿ, ಮಾರ್ಚ್ ತಿಂಗಳಲ್ಲಿ ಯುವ ಸಂಭ್ರಮ ಮಹಿಳಾ ಕಾಲೇಜಿನಲ್ಲಿ ಮಾಡಲು ಎಲ್ಲಾ ಸಿದ್ಧತೆ ನಡೆಯುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಪಿ.ರವಿಕುಮಾರ್‌ ಅವರು ವೈಯಕ್ತಿಕವಾಗಿ ೩೦ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ತಲಾ ೧೦ ಸಾವಿರ ನಗದು ಪುರಸ್ಕಾರ ನೀಡಿ ಪ್ರೊತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಕೆ.ಗುರುರಾಜ್‌ಪ್ರಭು, ಭಾಷಾ ತಜ್ಞ ಡಾ.ಭೀಮರಾಜು ಈರೇಗೌಡ, ಸಾಂಸ್ಕೃತಿಕ ಸಮಿತಿ ಸಂಚಾಲಕ ಪಿ.ಎನ್.ನಾಗರಾಜಮೂರ್ತಿ, ಖಜಾಂಚಿ ಡಾ.ಎಚ್.ಎಸ್.ಶಿವರಾಜು, ಮಾಜಿ ನಗರಸಭಾ ಸದಸ್ಯ ಶ್ರೀಧರ್, ಅಭಿವೃದ್ಧಿ ಸಮಿತಿ ಸದಸ್ಯ ಹೊಸಹಳ್ಳಿ ಶೇಖರ್, ವಿವಿಧ ವಿಭಾಗಗಳ ಸಮಿತಿ ಸಂಚಾಕಲರಾದ ಡಾ.ಶಿರೀನ್‌ತಾಜ್, ಎಸ್.ನವೀನ್, ಡಾ.ಕೆ.ಆರ್.ಲೋಕೇಶ್, ಬಿ.ಎನ್.ಪುಷ್ಪಲತಾ, ಅಶೋಕ್, ಡಾ.ಕೆ.ಎಸ್.ಶ್ರೀನಿವಾಸ್, ಎಸ್.ಪಿ.ಹೇಮಲತಾ, ಡಾ.ರವಿಕಾಂತ್‌ಲಮಾಣಿ, ವಸಂತಲಕ್ಷ್ಮೀ, ವಿದ್ಯಾರ್ಥಿನಿಯರ ಸಂಘ ಅಧ್ಯಕ್ಷೆ ಪವನಾ, ಸ್ನೇಹಾ, ಹಂಸ, ಅನು, ಸುಪ್ರಿಯಾ, ನಿಹಾರಿಕಾ, ಹರ್ಪಿತಾ, ವರ್ಷಿಣಿ, ಮೋವಿಕಾ, ಕನ್ನಿಕಾ ಹಾಜರಿದ್ದರು.