ಮಧ್ಯವರ್ತಿಗಳ ದೂರ ಇಡಿ, ಜನರ ಕೆಲಸ ಮಾಡಿ: ತಂಗಡಗಿ ಚಾಟಿ

| Published : Oct 08 2024, 01:09 AM IST

ಮಧ್ಯವರ್ತಿಗಳ ದೂರ ಇಡಿ, ಜನರ ಕೆಲಸ ಮಾಡಿ: ತಂಗಡಗಿ ಚಾಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆಯಲ್ಲಿ ಜನಸಾಮಾನ್ಯರ ಪ್ರತಿಯೊಂದು ಕೆಲಸವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ವಿನಾಕಾರಣ ಇಲ್ಲದ ಕಡತ, ಕಾಗದಗಳನ್ನು ಕೇಳಿ ಅಮಾಯಕರನ್ನು ಅಲೆದಾಡಿಸಬೇಡಿ.

ಕಾರಟಗಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಚಿವ

ಕನ್ನಡಪ್ರಭ ವಾರ್ತೆ ಕಾರಟಗಿ

ಪುರಸಭೆಯಲ್ಲಿ ಜನಸಾಮಾನ್ಯರ ಪ್ರತಿಯೊಂದು ಕೆಲಸವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ವಿನಾಕಾರಣ ಇಲ್ಲದ ಕಡತ, ಕಾಗದಗಳನ್ನು ಕೇಳಿ ಅಮಾಯಕರನ್ನು ಅಲೆದಾಡಿಸಬೇಡಿ, ಹೆಚ್ಚಾಗಿರುವ ಮಧ್ಯವರ್ತಿಗಳನ್ನು ಮೊದಲು ಕಚೇರಿಯಿಂದ ದೂರವಿಡಿ. ಮಾರ್ಗಸೂಚಿಯಲ್ಲಿ ಜನ ಸೇವೆ ಮಾಡುವುದನ್ನು ಕಲಿಯಿರಿ, ಇಲ್ಲವಾದರೆ ಅಮಾನತು ಶಿಕ್ಷೆ ತಪ್ಪಿದ್ದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಚಾಟಿ ಬೀಸಿದರು.

ಇಲ್ಲಿನ ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪರಿ ಇದು.

ಕಚೇರಿಯೊಳಗೆ ಮದ್ಯವರ್ತಿಗಳನ್ನು ಬರದಂತೆ ನೋಡಿ, ಫಾರಂ-೩, ಮ್ಯುಟೇಶನ್ ಮತ್ತು ಕಟ್ಟಡ ಪರವಾನಿಗೆಯನ್ನು ಕಾಲಮಿತಿಯೊಳಗೆ ನೀಡಬೇಕು. ಪ್ರತಿಯೊಬ್ಬ ಅಧಿಕಾರಿ ಬ್ರೋಕರ್‌ಗಳನ್ನು ಇಟ್ಟುಕೊಂಡು ಅವರ ಮೂಲಕ ಜನರಿಂದ ಹಣ ವಸೂಲಿ ಮಾಡುತ್ತಿರುವ ದೂರುಗಳು ಬಂದಿದೆ. ಇದೇ ಕೊನೆ. ದೂರುಗಳು ಮುಂದಿನ ಸಭೆಯೊಳಗೆ ಅಂತ್ಯವಾಗಬೇಕು. ಇಲ್ಲದಿದ್ದರೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಮದ್ಯವರ್ತಿಗಳು ತಂದು ಕೊಟ್ಟರೆ ಮಾತ್ರ ಯಾವುದೇ ಕಾಲ ಮಿತಿ ಇಲ್ಲದೇ ಸಲೀಸಾಗಿ ಕೆಲಸ ಮಾಡಿಕೊಡುತ್ತಾರೆ. ಬೇಕಾದರೆ ಅವರಿಗೆ ಆಸ್ತಿ ಪುಸ್ತಕ, ಡಿಮ್ಯಾಂಡ್ ಬುಕ್‌ನ್ನು ಕೂಡ ಅಧಿಕಾರಿಗಳು ಕೊಡಲು ಸಿದ್ಧರಿದ್ದಾರೆ. ನನಗೂ ಪುರಸಭೆ ಭ್ರಷ್ಟಾಚಾರ ಕೇಳಿ-ಕೇಳಿ ಸಾಕಾಗಿದೆ. ಇದು ನಿಮಗೆ ಕೊನೆ ಎಚ್ಚರಿಕೆ ಫಾರಂನಂ-೩ಯನ್ನು ೭ ದಿನಗಳು, ಕಟ್ಟಡ ಫರ್ಮಿಶನ್‌ನ್ನು ೩೦ ದಿನಗಳು ಮತ್ತು ಮ್ಯುಟೇಶನನ್ನು ೪೫ ದಿನಗಳ ಕಾಲಮಿತಿಯೊಳಗೆ ನೀಡಬೇಕು ಎಂದು ಸಚಿವರು ಸೂಚಿಸಿದರು.

ಕಪ್ಪು ಪಟ್ಟಿಗೆ ಸೇರಿಸಿ:ನಗರೋತ್ಥಾನ ಯೋಜನೆಯಡಿ ನಡೆದ ರಸ್ತೆ ಕಾಮಗಾರಿಗಳು ಸರಿಯಾಗಿಲ್ಲ, ಎಷ್ಟು ಹೇಳಿದರು ಪೂರ್ತಿ ಕೆಲಸ ಮಾಡಿಲ್ಲ ಎಂದು ಸದಸ್ಯರು ದೂರಿದರು. ಸಚಿವ ಶಿವರಾಜ ತಂಗಡಗಿ ಮುಖ್ಯಾಧಿಕಾರಿಯಿಂದ ಸಮಸ್ಯೆ ಕೇಳಿ, ನಗರೊತ್ಥಾನದ ಜಿಲ್ಲಾ ಮಟ್ಟದ ಅಧಿಕಾರಿಗೆ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡು ೧೫ ದಿನಗಳೊಳಗೆ ಕಾಮಗಾರಿ ಪರಿಶೀಲಿಸಿ, ವರದಿ ಕೊಡಬೇಕು. ಇಲ್ಲದಿದ್ದರೆ ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸೂಚನೆ ನೀಡಿದರು.

ಭೇಟಿಗೆ ಸೂಚನೆ:

ಪುರಸಭೆ ಮುಖ್ಯಾಧಿಕಾರಿ ಸೇರಿ ಪರಿಸರ, ಆರೋಗ್ಯ ಅಧಿಕಾರಿಗಳು ಆಯಾ ವಾರ್ಡ್ ಸದಸ್ಯರೊಂದಿಗೆ ನಿತ್ಯ ಒಂದು ವಾರ್ಡ್‌ಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ತಿಳಿದುಕೊಂಡು ಪರಿಹರಿಸಬೇಕು. ಸದಸ್ಯರ ಸಲಹೆ, ಸೂಚನೆ ಅನುಸರಿಸಿ ಕೆಲಸ ಮಾಡಬೇಕು. ಪ್ರತಿ ವಾರ್ಡ್ ಭೇಟಿಯ ವಿವರಗಳನ್ನು ಡೈರಿಯಲ್ಲಿ ದಾಖಲಿಸಿ ೧೫ ದಿನಕ್ಕೊಮ್ಮೆ ನನಗೆ ತೋರಿಸಬೇಕು ಸಚಿವರು ಸೂಚಿಸಿದರು. ಘನತ್ಯಾಜ್ಯ ಘಟಕದ ಅವಶ್ಯಕವಿದೆ. ಅದಕ್ಕಾಗಿ ಭೂಮಿಯನ್ನು ಹುಡುಕಿ ನಿಗದಿ ಮಾಡುವ ಜವಾಬ್ದಾರಿ ಪುರಸಭೆಗೆ ನೀಡಿದರು.

ಸಭೆಯಲ್ಲಿ ಅಧ್ಯಕ್ಷೆ ರೇಖಾ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಸೇರಿದಂತೆ ಸದಸ್ಯರು ಇದ್ದರು.ಅನುಮೋದನೆಗೊಂಡ ವಿಷಯ:

ಸಭೆಯ ಕಾರ್ಯಸೂಚಿ ಅನ್ವಯ ನಿಗದಿಪಡಿಸಿದ್ದ ಕನಕದಾಸ ವೃತ್ತದಲ್ಲಿ (ನವಲಿ ವೃತ) ಸಂತ ಶ್ರೇಷ್ಠ ಕನಕದಾಸರ ಪ್ರತಿಮೆ ಅಳವಡಿಕೆಗೆ ಎಲ್ಲ ಸಿದ್ಧತೆ ಕೈಗೊಳ್ಳುವುದು. ಬಸ್‌ನಿಲ್ದಾಣದ ಹತ್ತಿರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ನಾಮಕರಣ, ಪಟ್ಟಣಕ್ಕೆ ಸಂಪೂರ್ಣ ನೀರಿನ ಜಾಲವನ್ನು ಅಳವಡಿಸಲು ಕೆಯುಡಬ್ಲ್ಯೂಎಸ್‌ಗೆ ₹೨೦ಲಕ್ಷ ಡಿಪಿಆರ್ ವಂತಿಗೆ, ೨೦ನೇ ವಾರ್ಡ್‌ನ ಶಿಥಿಲಗೊಂಡ ಟ್ಯಾಂಕ್ ನೆಲಸಮಗೊಳಿಸುವುದು, ಕಂದಾಯ ಶಾಖೆಯ ಅಭಿಲೇಖಾಲಯ ನವೀಕರಣ, ಸ್ಥಾಯಿ ಸಮಿತಿ ರಚನೆ, ನಗರೋತ್ಥಾನ ಯೋಜನೆಯಡಿ ವಾರ್ಡ್‌ ೩ ಮತ್ತು ೧೧ರಲ್ಲಿನ ವಾಣಿಜ್ಯ ಕಾಂಪ್ಲೆಕ್ಸ್‌ಗಳ ದರ ಪರಿಷ್ಕರಣೆ ಮಾಡಲು ಸಭೆ ಅನುಮೋದನೆ ನೀಡಿತು.