ತಾಲೂಕಿನ ಯಲವಟ್ಟಿ ಗ್ರಾಮದಿಂದ ಮಲೇಬೆನ್ನೂರು ಪಟ್ಟಣಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿರುವ, ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಿ ಮಹಾದ್ವಾರ ಸಮೀಪದ ಜೂಸ್–ಎಗ್ ರೈಸ್ ಅಂಗಡಿಯಿಂದ ಗ್ರಾಮಸ್ಥರು, ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ. ಈ ಅಂಗಡಿಯನ್ನು ತಕ್ಷಣವೇ ಬೇರೆಡೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಹರಿಹರದಲ್ಲಿ ಆಗ್ರಹಿಸಿದ್ದಾರೆ.
- ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ: ಗ್ರಾಮಸ್ಥರ ಆರೋಪ
- - -ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ಯಲವಟ್ಟಿ ಗ್ರಾಮದಿಂದ ಮಲೇಬೆನ್ನೂರು ಪಟ್ಟಣಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿರುವ, ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಿ ಮಹಾದ್ವಾರ ಸಮೀಪದ ಜೂಸ್–ಎಗ್ ರೈಸ್ ಅಂಗಡಿಯಿಂದ ಗ್ರಾಮಸ್ಥರು, ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ. ಈ ಅಂಗಡಿಯನ್ನು ತಕ್ಷಣವೇ ಬೇರೆಡೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಗ್ರಾಮದ ಮಹಾದ್ವಾರ ಬಳಿಯೇ ಇರುವ ಎಗ್ ರೈಸ್ ಅಂಗಡಿಯಲ್ಲಿ ಮಧ್ಯಾಹ್ನ ಹಾಗೂ ಸಂಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿರುತ್ತಾರೆ. ಮದ್ಯ ಸೇವಿಸಿ, ಎಗ್ ರೈಸ್, ಆಮ್ಲೆಟ್, ಬಾಯ್ಲ್ಡ್‌ಎಗ್ ಮೊದಲಾದ ಪದಾರ್ಥಗಳನ್ನು ಸೇವಿಸುವುದರಿಂದ ಭಕ್ತರು, ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ರಸ್ತೆಯಲ್ಲಿ ಸಂಚರಿಸುವ ಮಹಿಳೆಯರು, ಸಾರ್ವಜನಿಕರು ಹಾಗೂ ಸಮೀಪದ ಮನೆಗಳ ನಿವಾಸಿಗಳೂ ಅಸಹನೀಯ ಪರಿಸ್ಥಿತಿ ಎದುರಿಸುವಂತಾಗಿದೆ ಎಂದಿದ್ದಾರೆ.
ಕಳೆದೆರಡು ವರ್ಷಗಳಿಂದ ಈ ಅಂಗಡಿ ವಿರುದ್ಧ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಮಲೇಬೆನ್ನೂರು ಪೊಲೀಸ್ ಠಾಣೆಗೆ ಹಲವು ಬಾರಿ ದೂರು ಸಲ್ಲಿಸಿದ್ದಾರೆ. ಆದರೆ, ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಿಲ್ಲ. ಮದ್ಯಪಾನ ಮಾಡಿದವರು ಅಂಗಡಿಯಿಂದ ಹೊರಬಂದ ನಂತರ ಖಾಲಿ ಬಾಟಲಿ, ಪೌಚ್‌ಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಪರಿಣಾಮ ದೇಗುಲ ಸುತ್ತಲ ಪರಿಸರ ಮಲಿನಗೊಳ್ಳುತ್ತಿದೆ. ಈ ಕುರಿತು ಯಲವಟ್ಟಿ ಗ್ರಾಮ ಪಂಚಾಯಿತಿ ಹಾಗೂ ಮಲೇಬೆನ್ನೂರು ಪೊಲೀಸ್ ಠಾಣೆಗೆ ಅನೇಕ ಬಾರಿ ದೂರು ನೀಡಿದರೂ ಸ್ಪಂದನೆ ದೊರಕಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.- - -
(ಕೋಟ್ಸ್) ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರ ಸ್ಪಂದಿಸಿ ಯಲವಟ್ಟಿಯಲ್ಲಿ ಜೂಸ್- ಎಗ್‌ರೈಸ್ ಅಂಗಡಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ, ಗ್ರಾಮ ಮಹಿಳೆಯರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಮನವಿ ಸಲ್ಲಿಸುತ್ತಾರೆ. - ಮಮತಾ ಹನುಮಂತಪ್ಪ ಮುದುಕಪ್ಪನವರ, ನಿವಾಸಿ.ಯಲವಟ್ಟಿ ಗ್ರಾಮದ ಜ್ಯೂಸ್–ಎಗ್ ರೈಸ್ ಅಂಗಡಿ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಆದರೂ ಅಂಗಡಿಯವರು ತಮ್ಮ ತಪ್ಪುಗಳನ್ನು ಸರಿಪಡಿಸಿಲ್ಲ. ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಅಂಗಡಿಯನ್ನು ಬೇರೆಡೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
- ಮಹೇಶ್, ಪಿಡಿಒ, ಯಲವಟ್ಟಿ.- - -
-20HRR.01:ಯಲವಟ್ಟಿ ಮಹಾದ್ವಾರದ ಬಳಿಯ ಜ್ಯೂಸ್–ಎಗ್ ರೈಸ್ ಅಂಗಡಿಯಲ್ಲಿ ಮದ್ಯಪಾನ ದೃಶ್ಯ.