ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅಪೇ ಆಟೋಗಳ ಹಾವಳಿ ತಪ್ಪಿಸುವುದು, ಹೊಸದಾಗಿ ಆಟೋ ಪರವಾನಗಿ ನೀಡುವುದನ್ನು ನಿಲ್ಲಿಸುವಂತೆ ಕರ್ನಾಟಕ ರಾಜೀವ್‌ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆ ಅಧ್ಯಕ್ಷ ಟಿ.ಕೃಷ್ಣ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಒತ್ತಾಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪೇ ಆಟೋಗಳಿಂದ ನಿತ್ಯ ಸಾಮಾನ್ಯ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ. ಈ ಮೊದಲು ಅಪ್ಪೇ ಆಟೋಗಳು ನಗರ ಮತ್ತು ಪಟ್ಟಣಗಳ ಪ್ರವೇಶಕ್ಕೆ ಅನುಮತಿ ಇರಲಿಲ್ಲ. ಈಗ ಅವುಗಳಿಗೆ ಅನುಮತಿ ಇಲ್ಲದಿದ್ದರೂ ಸಹ ನಗರ ಪ್ರದೇಶಗಳಲ್ಲಿ ಚಲಿಸುತ್ತಾ ತೊಂದರೆ ನೀಡುತ್ತಿದ್ದಾರೆ. ಇದರಿಂದಾಗಿ ನಿತ್ಯವೂ ಆಟೋ ಚಾಲಕರ ನಡುವೆ ಘರ್ಷಣೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಸಾರಿಗೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆವಿಗೂ ಅದು ಕಾರ್‍ಯಗತವಾಗಿಲ್ಲ. ಮಂಡ್ಯ ನಗರದಲ್ಲಿ 4 ಸಾವಿರಕ್ಕೂ ಹೆಚ್ಚು ಪರವಾನಗಿ ಹೊಂದಿರುವ ಆಟೋಗಳಿವೆ. ಹೊಸದಾಗಿ ಪರವಾನಗಿ ನೀಡುತ್ತಿರುವುದರಿಂದ ಹಾಲಿ ಇರುವ ಆಟೋ ಚಾಲಕರಿಗೆ ಅನಾನುಕೂಲವಾಗುತ್ತಿದೆ ಎಂದು ದೂರಿದರು.ಇರುವ ಆಟೋಗಳಿಗೆ ಬಾಡಿಗೆ ಇಲ್ಲ. ಕಡಿಮೆ ಸಂಪಾದನೆ ಮಾಡಿ ಜೀವನ ಮಾಡುವುದೇ ದುಸ್ತರವಾಗಿದೆ. ಇದರಿಂದಾಗಿ ಹೊಸದಾಗಿ ಆಟೋಗಳಿಗೆ ಪರವಾನಗಿ ನೀಡಬಾರದು ಎಂದು ಆಗ್ರಹಿಸಿದರು.
ಮಂಡ್ಯ ನಗರ ಮತ್ತು ತಾಲೂಕು ಕೇಂದ್ರಗಳ ವ್ಯಾಪ್ತಿಯಲ್ಲಿ ಅಪ್ಪೇ ಆಟೋಗಳನ್ನು ತೆರವುಗೊಳಿಸಿ ನಿರ್ಬಂಸುವುದು, ಮಂಡ್ಯ ನಗರ ಹಾಗೂ ತಾಲೂಕು ಕೇಂದ್ರಗಳ ವ್ಯಾಪ್ತಿಯಲ್ಲಿ ಹೊಸದಾಗಿ ನೀಡುವ ಪರವಾನಗಿ ನಿಲ್ಲಿಸುವುದು, ಮಂಡ್ಯ ಹೊರ ವಲಯಗಳಿಂದ ಬರುವ ದಾಖಲಾತಿ ಇಲ್ಲದ ಆಟೋಗಳನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳುವುದು, ನಿವೇಶನ ರಹಿತ ಆಟೋ ಚಾಲಕರಿಗೆ ಸರ್ಕಾರದಿಂದ ನಿವೇಶನ ನೀಡುವುದು, ಟ್ಯಾಕ್ಸಿ, ಕಾರುಗಳಿಗೆ ಜಿಪಿಎಸ್ ಅಳವಡಿಸುವುದನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರಲ್ಲದೇ, ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಸಾರಿಗೆ ಅಧಿಕಾರಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ಸಂಘದ ಗೌರವಾಧ್ಯಕ್ಷ ಕೆ.ಆರ್.ರವೀಂದ್ರ ಮಾತನಾಡಿ, ಮಂಡ್ಯ ನಗರ ವ್ಯಾಪ್ತಿಯಲ್ಲಿ ಆಟೋ ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ಬಹಳಷ್ಟು ಸಮಸ್ಯೆಗಳಿವೆ. ರಸ್ತೆಗಳ ಅಗಲೀಕರಣ ಮಾಡಿಲ್ಲ. ಕೆಲವೆಡೆ ರಸ್ತೆಗಳನ್ನೇ ಒತ್ತುವರಿ ಮಾಡಿಕೊಳ್ಳಲಾಗಿದೆ. ರಸ್ತೆ ಅಭಿವೃದ್ಧಿ ಇರಲಿ, ರಸ್ತೆಗಳಲ್ಲಿರುವ ಹಳ್ಳಗಳನ್ನು ಮುಚ್ಚುವ ಕೆಲಸವನ್ನೂ ಮಾಡಿಲ್ಲ ಎಂದು ದೂರಿದರು.
ಮಂಡ್ಯ ನಗರ ವ್ಯಾಪ್ತಿಯಲ್ಲಿರುವ ಬೆಂಗಳೂರು ಮೈಸೂರು ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಅವೈಜ್ಞಾನಿವಾಗಿ ಮಾಡಲಾಗುತ್ತಿದೆ. ಇದರಿಂದ ಹಣ ಪೋಲಾಗುತ್ತದೆಯೇ ಹೊರತು ನಿರೀಕ್ಷಿತ ಅಭಿವೃದ್ಧಿ ಅಸಾಧ್ಯ ಎಂದರು.ರಸ್ತೆ ಮಧ್ಯದಿಂದ 21 ಮೀಟರ್ ರಸ್ತೆ ಅಗಲೀಕರಣ ಆಗಬೇಕು. ಜಯಚಾಮರಾಜ ವೃತ್ತ 151 ಅಡಿ ವಿಸ್ತಾರ ಇರಬೇಕು. ಎಲ್ಲವೂ ಒತ್ತುವರಿಯಾಗಿದೆ. ಸಾರಿಗೆ ಬಸ್ ನಿಲ್ದಾಣದ ಪಕ್ಕದಲ್ಲಿ ತಹಸೀಲ್ದಾರ್ ಪೆಟ್ರೋಲ್ ಕಂಪನಿಗೆ ನಿಯಮಬಾಹಿರವಾಗಿ ಜಾಗ ನೀಡಿದ್ದಾರೆ. ಮಹಾವೀರ ವೃತ್ತದಲ್ಲಿ ಮಿಲ್ಕ್ ಪಾರ್ಲರ್‌ನವರು ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇನ್ನು ಕೆಲವೆಡೆ ಒತ್ತುವರಿಯಾಗಿದೆ. ಈ ಬಗ್ಗೆ ಶೀಘ್ರ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲು ಮಾಡುವುದಾಗಿ ತಿಳಿಸಿದರು.
ಹೆದ್ದಾರಿ ಪಕ್ಕದ ಪಾದಚಾರಿ ಮಾರ್ಗದಲ್ಲೆ ಕೇಂದ್ರ ಸರ್ಕಾರದ ಅನುದಾನದಲ್ಲಿ ಅವೈಜ್ಞಾನಿಕ ಶೌಚಾಲಯ ನಿರ್ಮಿಸಲಾಗುತ್ತಿದೆ. ಒಂದು ಕಡೆ ರಸ್ತೆ, ಪಾದಚಾರಿ ಮಾರ್ಗ ಇರಬೇಕೆಂಬ ನಿಯಮ ಮಾಡುತ್ತಾರೆ. ಇನ್ನೊಂದು ಕಡೆ ಶೌಚಾಲಯದಂತಹ ಕಟ್ಟಡ ನಿರ್ಮಿಸುತ್ತಾರೆ. ಇದು ಕಾನೂನು ಉಲ್ಲಂಘನೆಯಲ್ಲವೆ ಎಂದು ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಎಂ.ರಾಜು, ರವಿಕುಮಾರ್, ಕುಮಾರ, ಬೋರಲಿಂಗ, ಶಶಿ, ಜಯಶಂಕರ ಸೇರಿದಂತೆ ಹಲವರು ಇದ್ದರು.