"ಅವ್ವಾ.. ಬಕ್ಕಪ್ಪ... ಕಲ್ಲೇಶ... ದುಗ್ಗಮ್ಮ ದೇವಿ... " ಬರೋಬ್ಬರಿ 95 ವರ್ಷಗಳ ಕಾಲ ವಿಶ್ರಾಂತ ರಹಿತವಾಗಿ ದುಡಿದ ಹಿರಿಯ ಜೀವ ಶಾಮನೂರು ಶಿವಶಂಕರಪ್ಪ ತಮ್ಮ ಕೊನೆಯ ದಿನಗಳ ಒಂದೂವರೆ ತಿಂಗಳಲ್ಲಿ ತಮ್ಮ ಹೆತ್ತವರು, ಆರಾಧ್ಯ ದೈವ, ದೇವಿಯ ಸ್ಮರಣೆ ಮಾಡುತ್ತಿದ್ದರು.

- ಕುಟುಂಬ, ದೇವರ ಸ್ಮರಿಸುತ್ತಿದ್ದ ಎಸ್‌ಎಸ್‌: ಅಣಬೇರು ರಾಜಣ್ಣ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

"ಅವ್ವಾ.. ಬಕ್ಕಪ್ಪ... ಕಲ್ಲೇಶ... ದುಗ್ಗಮ್ಮ ದೇವಿ... "

ಬರೋಬ್ಬರಿ 95 ವರ್ಷಗಳ ಕಾಲ ವಿಶ್ರಾಂತ ರಹಿತವಾಗಿ ದುಡಿದ ಹಿರಿಯ ಜೀವ ಶಾಮನೂರು ಶಿವಶಂಕರಪ್ಪ ತಮ್ಮ ಕೊನೆಯ ದಿನಗಳ ಒಂದೂವರೆ ತಿಂಗಳಲ್ಲಿ ತಮ್ಮ ಹೆತ್ತವರು, ಆರಾಧ್ಯ ದೈವ, ದೇವಿಯ ಸ್ಮರಣೆ ಮಾಡುತ್ತಿದ್ದರು.

ನಗರದ ಶ್ರೀ ಕಲ್ಲೇಶ್ವರ ಮಿಲ್ ಹಿಂಭಾಗದಲ್ಲಿ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ನುಡಿನಮನ ಕಾರ್ಯಕ್ರಮ ಕುರಿತ ಸುದ್ದಿಗೋಷ್ಠಿಯಲ್ಲಿ ಎಸ್‌ಎಸ್‌ ಆಪ್ತ ಬಳಗದಲ್ಲಿ ಒಬ್ಬರಾದ, ಅಪೂರ್ವ ಹೋಟೆಲ್ ಸಮೂಹಗಳ ಸಂಸ್ಥಾಪಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಪತ್ರಕರ್ತರು, ಮಾಧ್ಯಮದ ಬಳಿ ಈ ವಿಷಯವನ್ನು ಹಂಚಿಕೊಂಡರು.

ಡಿ.14ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಲೆಂದು ಬೆಂಗಳೂರಿಗೆ ಹೊರಟಿದ್ದೆವು. ಇನ್ನೇನು ಆಸ್ಪತ್ರೆ ಸಮೀಪವೇ ಇದ್ದಾಗ ನಮ್ಮ ನಾಯಕ ಶಿವಶಂಕರಪ್ಪ ಅಗಲಿದ ಸುದ್ದಿ ಕೇಳಿ ದಿಕ್ಕೇ ತೋಚದಂತಾಯಿತು. ಆ ಕ್ಷಣದಿಂದಲೇ ನಮ್ಮ ನೆಮ್ಮದಿ ಇಲ್ಲದಂತಾಗಿತ್ತು. 6 ಸಲ ಶಾಸಕ, ಒಮ್ಮೆ ಸಚಿವ, ಒಂದು ಸಲ ಸಂಸದರಾಗಿ ಜನಮನದ ನಾಯಕರಾಗಿದ್ದ ಎಸ್‌ಎಸ್‌ ನಿಧನದಿಂದ ಮನಸ್ಸಿಗೆ ತುಂಬಾ ನೋವು, ಬೇಸರವಾಗಿತ್ತು ಎಂದರು.

ಶಿಕ್ಷಣ, ವ್ಯಾಪಾರ, ಕೃಷಿ, ಕೈಗಾರಿಕೆ, ಸಮಾಜ ಸೇವೆ, ಧಾರ್ಮಿಕ, ಸಾಮಾಜಿಕ ಹೀಗೆ ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲ ಕ್ಷೇತ್ರಕ್ಕೂ ಶಾಮನೂರು ಕೊಡುಗೆ ಅಪಾರ. ಕೇವಲ ವೀರಶೈವ ಲಿಂಗಾಯತ ಮಠಾಧೀಶರಲ್ಲದೇ, ಎಲ್ಲ ಜಾತಿ, ಧರ್ಮದ ಗುರುಗಳು, ಧಾರ್ಮಿಕ ನೇತಾರರ ಬಗ್ಗೆ ಗೌರವ ಹೊಂದಿದ್ದರು. ಒಬ್ಬ ವ್ಯಕ್ತಿಯಾಗಿ ಸಾರ್ವಜನಿಕರಿಗೆ ಹೇಗೆಲ್ಲಾ ಸ್ಪಂದಿಸಬಹುದು, ಆಸರೆ ಆಗಬಹುದೆಂಬುದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದರು.

ಸುಮಾರು ₹7ರಿಂದ ₹8 ಕೋಟಿ ಠೇವಣಿ ಇಟ್ಟು, ಎಸ್‌.ಎಸ್‌. ಜನ ಕಲ್ಯಾಣ ಟ್ರಸ್ಟ್ ಮೂಲಕ ವಿದ್ಯಾರ್ಥಿ ವೇತನ, ಚಿಕಿತ್ಸೆಗೆ ನೆರವು ನೀಡುತ್ತಿದ್ದಾರೆ. ಮಿತ ಆಹಾರ, ಮಿತಭಾಷೆಯ ಶಾಮನೂರು ಶಿವಶಂಕರಪ್ಪ ಯಾರಿಗೂ, ಎಂದಿಗೂ ಗದರಿದವರಲ್ಲ. ಅವರ ಸಿಟ್ಟು ಸಹ ಕ್ಷಣಿಕ ಆಗಿರುತ್ತಿತ್ತು. ರಾತ್ರಿ 8 ಗಂಟೆಯಾದರೆ ಶಾಮನೂರು ಶಿವಶಂಕರಪ್ಪನವರ ಬಳಿ ಬರುತ್ತಿದ್ದೆವು ಅಣಬೇರು ರಾಜಣ್ಣ ಎಸ್‌ಎಸ್‌ ಜತೆಗಿನ ಆತ್ಮೀಯ ಒಡನಾಟ ತೆರೆದಿಟ್ಟರು.

- - -