ಸಾರಾಂಶ
ಸಂತ ನೋಬರ್ಟ್ ಶಾಲೆಗೆ ಪ್ರಶಸ್ತಿಯ ಗರಿ
ನರಸಿಂಹರಾಜಪುರ: ಸಂತ ನೋಬರ್ಟ್ ವಿಕಲಚೇತನರ ವಿಶೇಷ ಶಾಲೆಗೆ ರಾಜ್ಯ ಸರ್ಕಾರದ 2023-24 ನೇ ಸಾಲಿನ ಅತ್ಯುತ್ತಮ ವಿಶೇಷ ಶಾಲೆ ಪ್ರಶಸ್ತಿ ಸಿಕ್ಕಿದೆ.
ಭಾನುವಾರ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ವಿಕಲ ಚೇತನರ ದಿನಾಚರಣೆ ಅಂಗವಾಗಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ , ವಿಕಲಚೇತನ ಇಲಾಖೆ ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ನರಸಿಂಹರಾಜಪುರ ಸಂತ ನೋಬರ್ಟ್ ವಿಕಲಚೇತನರ ವಿಶೇಷ ಶಾಲೆ ನಿರ್ದೇಶಕ ರೆ.ಫಾ. ಜೋವಿಯೇಲ್ ವಡಕ್ಕೆಲ್ ಅವರಿಗೆ ಅತ್ಯುತ್ತಮ ವಿಶೇಷ ಶಾಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.1995 ರಲ್ಲಿ ಪ್ರಾರಂಭ: ಸಂತ ನೋರ್ಬಟೈನ್ ಫಾದರ್ಸ್ 1995 ರಲ್ಲಿ ಸೋಷಿಯಲ್ ವೆಲ್‌ಫೇರ್ ಸೊಸೈಟಿ ಪ್ರಾರಂಭಿಸಿದರು. ಈ ಸೊಸೈಟಿಯನ್ನು ಕರ್ನಾಟಕ ಸರ್ಕಾರದಲ್ಲಿ ನೋಂದಣಿ ಮಾಡಲಾಗಿದೆ. ಈ ಸಂಸ್ಥೆ ಪ್ರಮುಖ ಉದ್ದೇಶ ತಾಲೂಕಿನ ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ವಿಶೇಷ ನ್ಯೂನ್ಯತೆ ಯುಳ್ಳ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದಾಗಿದೆ. ಪ್ರಸ್ತುತ ಸಂತ ನೋಬರ್ಟ್ ವಿಕಲ ಚೇತನ ( ಬುದ್ದಿ ಮಾಂದ್ಯ) ಶಾಲೆಯಲ್ಲಿ 50 ಮಕ್ಕಳು ವಿಶೇಷ ಶಿಕ್ಷಣ ಪಡೆಯುತ್ತಿದ್ದಾರೆ. 2010 ರಿಂದ ಫಿಸಿಯೋಥೆರಪಿ ಸೆಂಟರನ್ನು ಪ್ರಾರಂಭಿಸಲಾಗಿದೆ.