ನಕಲಿ ಹಕ್ಕುಪತ್ರ ಸೃಷ್ಟಿಸಿ ಆಶ್ರಯ ನಿವೇಶನಗಳ ಮಾರಾಟ

| Published : Dec 04 2023, 01:30 AM IST

ಸಾರಾಂಶ

ಹಾರೋಹಳ್ಳಿ: ಕೊಟ್ಟಗಾಳು ಗ್ರಾಮ ಪಂಚಾಯಿತಿಯ ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ,105 /7ಮತ್ತು 38/3ರಲ್ಲಿ ಸರ್ಕಾರ 1999ನೇ ಸಾಲಿನ ಆಶ್ರಯ ಯೋಜನೆಯಲ್ಲಿ ಹಂಚಿಕೆ ಮಾಡಿದ್ದ ಆಶ್ರಯ ನಿವೇಶನಗಳನ್ನು ನಕಲಿ ಹಕ್ಕುಪತ್ರ ಸೃಷ್ಟಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕುಶವಾಗಿ ಪರಿಶೀಲಿಸುವಂತೆ ಲೋಕಾಯುಕ್ತಕ್ಕೆ ರಾಜ್ಯ ಸರ್ಕಾರ ಆದೇಶ ನೀಡಿದೆ.

ಹಾರೋಹಳ್ಳಿ: ಕೊಟ್ಟಗಾಳು ಗ್ರಾಮ ಪಂಚಾಯಿತಿಯ ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ,105 /7ಮತ್ತು 38/3ರಲ್ಲಿ ಸರ್ಕಾರ 1999ನೇ ಸಾಲಿನ ಆಶ್ರಯ ಯೋಜನೆಯಲ್ಲಿ ಹಂಚಿಕೆ ಮಾಡಿದ್ದ ಆಶ್ರಯ ನಿವೇಶನಗಳನ್ನು ನಕಲಿ ಹಕ್ಕುಪತ್ರ ಸೃಷ್ಟಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕುಶವಾಗಿ ಪರಿಶೀಲಿಸುವಂತೆ ಲೋಕಾಯುಕ್ತಕ್ಕೆ ರಾಜ್ಯ ಸರ್ಕಾರ ಆದೇಶ ನೀಡಿದೆ.

ಏನಿದು ಪ್ರಕರಣ ;

ಹಾರೋಹಳ್ಳಿ ತಾಲೂಕಿನ ಕೊಟ್ಟಗಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲಹಳ್ಳಿ ಸರ್ವೆ ನಂ.105/7 ಮತ್ತು 38/3ರಲ್ಲಿ 1999ನೇ ಸಾಲಿನಲ್ಲಿ ಆಶ್ರಯ ಯೋಜನೆಯಡಿ ಹಂಚಿಕೆ ಮಾಡಿರುವ ಆಶ್ರಯ ನಿವೇಶನಗಳ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡಿ, ಕನಕಪುರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು.

ಈ ನೋಂದಣಿ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎಸ್.ಸುರೇಶ್ ಅವರು ಸಾಕ್ಷಿಯಾಗಿ ಸಹಕರಿಸಿದ್ದು ನೋಂದಣಿಯಾಗಿರುವ ದಾಖಲೆಗಳ ಆಧಾರದ ಮೇಲೆ ಕೊಟ್ಟಗಾಳು ಗ್ರಾಮ ಪಂಚಾಯಿತಿಯ ಅನರ್ಹ ಫಲಾನುಭವಿಗಳಿಗೆ ಅಕ್ರಮವಾಗಿ ಮತ್ತು ಅನಧಿಕೃತವಾಗಿ ಇ-ಖಾತೆಯನ್ನು ಮಾಡಿ, ಕರ್ತವ್ಯಲೋಪ ಎಸಗಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಎಸಿಬಿಗೆ ದೂರು ನೀಡಿದ್ದರು. ಅಲ್ಲದೆ ಈ ಹಿಂದೆ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ವರಿ ಅವರೂ ಸಹ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡಿದ್ದ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿದ್ದರು. ಅಲ್ಲದೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಕಾಧಿಕಾರಿಯೂ ಸಹ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಸಾಮ್ಯತೆ ಹೊಂದಿದ್ದು ಹೆಚ್ಚಿನ ತನಿಖೆ ನಡೆಸಬಹುದು ಎಂದು ಅಭಿಪ್ರಾಯ ತಿಳಿಸಿದ್ದರು.

ಈ ಎಲ್ಲಾ ಅಂಶಗಳನ್ನು ಅರಿತ ಸರ್ಕಾರ ನಿವೇಶನವಿಲ್ಲದ ಬಡವರಿಗೆ ನಿವೇಶನ ಹಂಚಿಕೆ ಮಾಡುವ ಉದ್ದೇಶದಿಂದ ಖರೀದಿಸಲಾಗಿದ್ದ ಜಮೀನಿನಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಸುಳ್ಳು ಹಕ್ಕು ಪತ್ರಗಳನ್ನು ಸೃಷ್ಟಿಸಿ ಖಾತೆಗಳನ್ನು ಮಾಡಿ ಸದರಿ ನಿವೇಶನಗಳನ್ನು ಹೆಚ್ಚಿನ ದರಕ್ಕೆ ಬೇರೆಯವರಿಗೆ ಮಾರಾಟ ಮಾಡಲು ಹಾಗೂ ಗ್ರಾಪಂನಲ್ಲಿ ಯಾವುದೇ ಪೂರಕ ದಾಖಲೆಗಳು ಇಲ್ಲದಿದ್ದಾಗ್ಯೂ ಖರೀದಿದಾರರ ಹೆಸರಿಗೆ ಕಾನೂನು ಬಾಹಿರವಾಗಿ ಖಾತೆಗಳನ್ನು ಮಾಡುವ ಮೂಲಕ ಆರೋಪಿತ ಅಧಿಕಾರಿ, ಸಿಬ್ಬಂದಿ, ಅಧಿಕಾರೇತರರು ಕರ್ತವ್ಯ ಲೋಪ ಎಸಗಿರುವುದು ಮೋಲ್ನೋಟಕ್ಕೆ ಕಂಡು ಬಂದಿದೆ.

ಗಂಭೀರ ಸ್ವರೂಪದ ಅಪರಾಧಿಕ ದುರ್ನಡತೆಯ ಈ ಪ್ರಕಣದ ವಿಸ್ತೃತ ತನಿಖೆಯ ಅಗತ್ಯವಿರುವುದರಿಂದ ಪ್ರಸ್ತಾಪಿತ ಅಧಿಕಾರಿ, ಸಿಬ್ಬಂದಿ, ಅಧಿಕಾರೇತರರ ವಿರುದ್ಧ ಪ್ರಾಥಮಿಕ ತನಿಖೆ - ವಿಚಾರಣೆ ಕೈಗೊಳ್ಳಲು ಸರ್ಕಾರ ಪೂರ್ವಾನುಮತಿ ನೀಡಿದೆ.

ಬಾಕ್ಸ್‌..........

ಯಾರೆಲ್ಲ ವಿಚಾರಣೆಗೆ ?

ಕೊಳ್ಳಗಾಳು ಗ್ರಾಪಂನ ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಲೋಕೇಶ್, ರಾಜೇಶ್ವರಿ, ಹಿಂದಿನ ಕಾರ್ಯದರ್ಶಿ (ಗ್ರೇಡ್ -1) ಮಹೇಶ್ವರ್ , ಮಾಜಿ ಅಧ್ಯಕ್ಷ ಜಿ.ಎಸ್ .ಸುರೇಶ್ ಹಾಗೂ ಕನಕಪುರ ತಾಲೂಕು ಪಂಚಾಯಿತಿ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಮ್ ಅವರನ್ನು ಲೋಕಾಯುಕ್ತರು ವಿಚಾರಣೆಗೆ ಒಳಪಡಿಸಲು ಸರ್ಕಾರ ಅನುಮತಿ ನೀಡಿದೆ.3ಕೆಆರ್ ಎಂಎನ್ 3.ಜೆಪಿಜಿ

ಕೊಟ್ಟಗಾಳು ಗ್ರಾಪಂ ಕಚೇರಿ.