ಸಾರಾಂಶ
ಪ್ರತಿ ವರ್ಷ ಡಾ. ಗುರುಲಿಂಗ ಕಾಪಸೆ ಜನಿಸಿದ ಏ. 2ರಂದು ಧಾರವಾಡದಲ್ಲಿ ಕಾಪಸೆ ಸಾಹಿತ್ಯ ಪ್ರಶಸ್ತಿ, ವಿದ್ಯಾರ್ಥಿ ಬಹುಮಾನ ನೀಡಲಾಗುವುದು. ಸಾಹಿತ್ಯ ಪ್ರಶಸ್ತಿ (₹ 25000), ವಿದ್ಯಾರ್ಥಿ ಬಹುಮಾನ (₹ 5000) ಒಳಗೊಂಡಿದೆ.
ಧಾರವಾಡ:
ಹಿರಿಯ ಚಿಂತಕ, ವಿದ್ವಾಂಸ ದಿ. ಡಾ. ಗುರುಲಿಂಗ ಕಾಪಸೆ ಅವರ ಹೆಸರಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದತ್ತಿ ಹಾಗೂ ಸಾಹಿತ್ಯ ಪ್ರಶಸ್ತಿ ಸ್ಥಾಪಿಸಲಾಗಿದೆ ಎಂದು ಸಾಹಿತಿ ಡಾ. ಬಸವರಾಜ ಸಾದರ ಮಾಹಿತಿ ನೀಡಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಡಾ. ಗುರುಲಿಂಗ ಕಾಪಸೆ ಶಿಷ್ಯರು, ಮಕ್ಕಳು, ಹಿತೈಷಿಗಳು ಸೇರಿ ಸಂಗ್ರಹಿಸಿದ ₹ 11,22,111 ಮೊತ್ತವನ್ನು ಸಂಘದ ಹೆಸರಲ್ಲಿ ಠೇವಣಿ ಇರಿಸಲಾಗಿದೆ. ಈ ಠೇವಣಿ ಹಣದಿಂದ ಬರುವ ಬಡ್ಡಿಯಲ್ಲಿ ಪ್ರತಿ ವರ್ಷ ಡಾ. ಗುರುಲಿಂಗ ಕಾಪಸೆ ಜನಿಸಿದ ಏ. 2ರಂದು ಕಾಪಸೆ ಸಾಹಿತ್ಯ ಪ್ರಶಸ್ತಿ, ವಿದ್ಯಾರ್ಥಿ ಬಹುಮಾನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಾಹಿತ್ಯ ಪ್ರಶಸ್ತಿಯನ್ನು ಇಬ್ಬರಿಗೆ (ತಲಾ ₹ 25000), ವಿದ್ಯಾರ್ಥಿ ಬಹುಮಾನ (₹ 5000) ಒಳಗೊಂಡಿದೆ. ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಅಮೋಘ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡುವುದಾಗಿ ತಿಳಿಸಿದರು.ಕವಿಸಂ ಅಧ್ಯಕ್ಷರು, ಕಾರ್ಯದರ್ಶಿ, ಸಾಹಿತ್ಯ ಮಂಟಪದ ಸದಸ್ಯರ ಜತೆ ಚಂದ್ರಶೇಖರ ಕಾಪಸೆ, ಡಾ. ವೀರಣ್ಣ ರಾಜೂರ, ಡಾ. ಶಾಂತಾ ಇಮ್ರಾಪೂರ, ಡಾ. ಚಿದಾನಂದ ಸಿದ್ಧಾಶ್ರಮ ಒಳಗೊಂಡ ಪ್ರಶಸ್ತಿಗೆ ಆಯ್ಕೆ ಸಮಿತಿ ರಚಿಸಿದೆ ಎಂದ ಅವರು, ಸಾಹಿತ್ಯ ಕ್ಷೇತ್ರದ ಎಲ್ಲ ರಂಗಗಳಲ್ಲೂ ಕೆಲಸ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದರು.
ಇನ್ನು, ಕಾಪಸೆ ಕವಿವಿ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದ ಅವರ ಹೆಸರಿನಲ್ಲಿ ಸ್ನಾತಕೋತ್ತರ ಮೊದಲ ವರ್ಷಕ್ಕೆ ಪ್ರವೇಶ ಪಡೆದ ಹೆಚ್ಚಿನ ಅಂಕ ಪಡೆದಿರುವ ವಿದ್ಯಾರ್ಥಿಗೆ ಡಾ. ಗುರಲಿಂಗ ಕಾಪಸೆ ವಿದ್ಯಾರ್ಥಿ ಬಹುಮಾನ ನೀಡಲು ನಿರ್ಧರಿಸಿದೆ. ಒಬ್ಬರಿಗಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾಗ ಹಣ ಎಲ್ಲರಿಗೂ ಹಂಚಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಾಹಿತಿ ಡಾ. ವೀರಣ್ಣ ರಾಜೂರ, ಆನಂದ ಕುಲಕರ್ಣಿ ಇದ್ದರು.