ಟಿಎಸ್‌ಆರ್‌ ಮಾದರಿಯಲ್ಲಿ ದಾನಿ ಪ್ರಶಸ್ತಿಯನ್ನು ಸರ್ಕಾರ ನೀಡಬೇಕು. ಮೊದಲಿಗೆ ಇದು ಖಾಸಗಿಯಾಗಿ ಆರಂಭವಾಗಲಿ. ಬಳಿಕ ಸರ್ಕಾರ ವಹಿಸಿಕೊಂಡು ಮುಂದುವರಿಸುವಂತೆ ಮಾಡಬಹುದು.

ಹುಬ್ಬಳ್ಳಿ:

ಯುವ ಪತ್ರಕರ್ತರಿಗೆ ಮಾದರಿ ಎಂಬಂತೆ ಇದ್ದ ಪತ್ರಕರ್ತ ಸುರೇಂದ್ರ ದಾನಿ ಅವರ ಹೆಸರಲ್ಲಿ ಪ್ರತಿ ವರ್ಷ ಟಿಆರ್‌ಎಸ್‌ ಮಾದರಿಯಲ್ಲಿ ಪ್ರಶಸ್ತಿ ನೀಡುವ ಕೆಲಸ ಆಗಬೇಕು ಎಂದು ಸಚಿವ ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಅಭಿಪ್ರಾಯಪಟ್ಟರು.

ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆದ ಟಿಎಸ್‌ಆರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದಿ. ಸುರೇಂದ್ರ ಭೀಮರಾವ ದಾನಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಟಿಎಸ್‌ಆರ್‌ ಮಾದರಿಯಲ್ಲಿ ದಾನಿ ಪ್ರಶಸ್ತಿಯನ್ನು ಸರ್ಕಾರ ನೀಡಬೇಕು. ಮೊದಲಿಗೆ ಇದು ಖಾಸಗಿಯಾಗಿ ಆರಂಭವಾಗಲಿ. ಬಳಿಕ ಸರ್ಕಾರ ವಹಿಸಿಕೊಂಡು ಮುಂದುವರಿಸುವಂತೆ ಮಾಡಬಹುದು ಎಂದ ಅವರು, ಈ ಸಂಬಂಧ ದಾನಿ ಅವರ ಅಭಿಮಾನಿಗಳು, ಬುದ್ಧಿಜೀವಿಗಳು ಹಾಗೂ ಪತ್ರಿಕಾ ವಲಯದ ಸ್ನೇಹಿತರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು ಎಂದರು.

ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುವುದು, ಅಳವಡಿಸಿಕೊಳ್ಳುವುದಷ್ಟೇ ಅಲ್ಲ. ಅವುಗಳನ್ನು ಕೊನೆಯ ವರೆಗೂ ಉಳಿಸಿಕೊಂಡು ಹೋಗುವುದು ದೊಡ್ಡ ಸವಾಲಿನ ಕೆಲಸ. ಆದರೆ, ಅಂಥ ಮೌಲ್ಯಗಳನ್ನು ಕೊನೆವರೆಗೂ ಉಳಿಸಿಕೊಂಡು ಬದುಕಿದವರು ದಾನಿ. ಇದು ಎಲ್ಲ ಪ್ರಶಸ್ತಿ, ಪುರಸ್ಕಾರಗಳಿಗಿಂತಲೂ ಮಿಗಿಲು. ಹೀಗಾಗಿ ಅತ್ಯಂತ ಮೌಲ್ಯಯುತ ವ್ಯಕ್ತಿ ದಾನಿ ಅವರಾಗಿದ್ದರು ಎಂದರು.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ಗಾಂಧೀಜಿ ವಿಚಾರಧಾರೆಯನ್ನು ಬದುಕು- ಬರಹಗಳಿಗೆ ಅಳವಡಿಸಿಕೊಂಡವರು ದಾನಿ. ಶಿಸ್ತು ಹಾಗೂ ನಿರಂತರ ದುಡಿಮೆ ತೋರಿಸಿಕೊಟ್ಟ ಮಾರ್ಗ ಎಂದರು

ಕವಿವಿ ಪತ್ರಿಕೋದ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಜೆ.ಎಂ. ಚಂದುನವರ ಮಾತನಾಡಿ, ಸುರೇಂದ್ರ ದಾನಿಯವರು ಮೊಹರೆ ಹಣಮಂತರಾಯರು ಹೆಕ್ಕಿ ತೆಗೆದ ಪತ್ರಿಕೋದ್ಯಮದ ರಸಋಷಿ. ಬರೀ ಪತ್ರಕರ್ತರಿಗಷ್ಟೇ ಅಲ್ಲ. ಇಡೀ ಸಮಾಜಕ್ಕೆ ಮಾದರಿ ಎಂಬಂತೆ ಬದುಕಿದವರು. ವೃತ್ತಿಧರ್ಮವನ್ನು ಯಾವ ರೀತಿ ಪಾಲನೆ ಮಾಡಬೇಕು ಎಂಬುದನ್ನು ಬದುಕಿ ತೋರಿಸಿದವರು ಎಂದು ಹೇಳಿದರು.

ಸುರೇಂದ್ರ ದಾನಿ ಜೊತೆ ಜೊತೆಗೆ ಕೆಲಸ ಮಾಡಿದ್ದ ನಾರಾಯಣ ಘಳಗಿ, ಲೇಖಕ ಬಾಬು ಕೃಷ್ಣಮೂರ್ತಿ, ಆಯುರ್ವೇದ ಮಹಾವಿದ್ಯಾಲಯದ ಅಧ್ಯಕ್ಷ ಗೋವಿಂದ ಜೋಶಿ ಮಾತನಾಡಿದರು. ಅದ್ವೈತ ವಿದ್ಯಾಶ್ರಮದ ಶ್ರೀಪ್ರಣವಾನಂದ ತೀರ್ಥರು ಆಶೀರ್ವಚನ ನೀಡಿದರು. ಜನ್ಮ ಶತಮಾನೋತ್ಸವ ಸಮಿತಿಯ ಡಾ. ಶ್ಯಾಮಸುಂದರ ಬಿದರಕುಂದಿ ಪ್ರಾಸ್ತಾವಿಕ ಭಾಷಣ ಮಾಡಿದರು. ಅಶೋಕ ದಾನಿ ಅಧ್ಯಕ್ಷತೆ ವಹಿಸಿದ್ದರು. ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ. ಎಂ.ಎಂ.ಜೋಶಿ ಉಪಸ್ಥಿತರಿದ್ದರು.

ವಿಚಾರ ಸಂಕಿರಣಬಹುಮುಖ ಬೌದ್ಧಿಕ ವ್ಯಕ್ತಿತ್ವದವರಾಗಿದ್ದ ಸುರೇಂದ್ರ ದಾನಿ ಕುರಿತು ಈ ಸಂದರ್ಭದಲ್ಲಿ ವಿಚಾರ ಗೋಷ್ಠಿಗಳು ನಡೆದವು. ದಾನಿ ಕೌಟುಂಬಿಕ ಸಾಧನೆಗಳ ಕುರಿತು ಭಾರತಿ ಜೋಶಿ, `ಮಿಂಚಿನ ಬಳ್ಳಿಯ ಪುನರುಜ್ಜೀವನ ಕುರಿತು ಶ್ರೀನಿವಾಸ ವಾಡಪ್ಪಿ, ನಿವೃತ್ತಿಯ ನಂತರ ದಾನಿಯವರು ತೊಡಗಿಸಿಕೊಂಡಿದ್ದ `ಸುರಾಜ್ಯ ಸಂಸ್ಥೆ'''' ಹಾಗೂ ಇದರೊಂದಿಗಿನ ಒಡನಾಟದ ಕುರಿತು ಶ್ರೀಕೃಷ್ಣ ಸಂಪಗಾಂವಕರ್, ದಾನಿ ಸ್ಥಾಪಿಸಿ ಪ್ರೋತ್ಸಾಹಿಸಿದ ಕುಮಾರವ್ಯಾಸ ಸೇವಾ ಸಂಘ (ಗಮಕ ಕಲಾ ಉತ್ತೇಜಕ) ಕುರಿತು ಪ್ರೊ. ಎನ್.ಎಸ್. ನಾಡಿಗೇರ್ ಮಾತನಾಡಿದರು. ದಾನಿಯವರ ಆಸಕ್ತಿಯ ವಿಷಯವಾಗಿದ್ದ ಗಮಕ ನೃತ್ಯ ರೂಪಕವನ್ನು ಶಶಿಕಲಾ ದಾನಿ ವಂದನಾ ರಾಣಿ ನಡೆಸಿಕೊಟ್ಟರು. ಪದ್ಮಿನಿ ರಾಮಮೂರ್ತಿ ಹಾಗೂ ಸತ್ಯವತಿ ಕೇಶವಮೂರ್ತಿ ಗಮಕ ವಾಚನ ಮಾಡಿದರು.

ಯುವ ಪತ್ರಕರ್ತರಿಗೆ ದಾನಿ ಕಾರ್ಯವೈಖರಿ ಮಾದರಿಶಿಸ್ತಿನ ಸಿಪಾಯಿಯಂತಿದ್ದ ಪತ್ರಕರ್ತ ಸುರೇಂದ್ರ ದಾನಿ ಅವರನ್ನು ಸುಭಾಶ್ಚಂದ್ರ ಎಂದು ಕರೆಯಲಾಗುತ್ತಿತ್ತು. ಅವರ ವಸ್ತು ನಿಷ್ಠ ಹಾಗೂ ನಿಷ್ಪಕ್ಷಪಾತ ವರದಿಗಾರಿಕೆಯಿಂದ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿದ್ದರು. ಇಂದಿನ ಯುವ ಪತ್ರಕರ್ತರು ಅವರ ಆದರ್ಶ ತತ್ವ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ವೆಂಕಟನಾರಾಯಣ ಅಭಿಪ್ರಾಯಪಟ್ಟರು.

ಇಲ್ಲಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಶನಿವಾರ ನಡೆದ ಟಿಎಸ್‌ಆರ್ ಪ್ರಶಸ್ತಿ ಪುರಸ್ಕೃತ ದಿ. ಸುರೇಂದ್ರ ದಾನಿ ಅವರ ಜನ್ಮಶತಮಾನೋತ್ಸವದ ಸಮಾರೋಪದಲ್ಲಿ ಮಾತನಾಡಿದರು.

ಎಂತಹುದ್ದೇ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದೇ, ಸಹನೆಯಿಂದಲೇ ತಮ್ಮ ಕೆಲಸ ಮಾಡಿ ಮುಗಿಸುತ್ತಿದ್ದರು. ಕಚೇರಿಯಲ್ಲಿ ಯಾರೇ ತಪ್ಪು ಮಾಡಿದರೂ ಮೃದುಭಾಷೆಯಲ್ಲಿ ನಿಷ್ಠುರ ಮಾತುಗಳನ್ನು ಸೂಕ್ಷ್ಮವಾಗಿ ಹೇಳುತ್ತಿದ್ದರು ಎಂದು ಸ್ಮರಿಸಿದರು.ಹಿರಿಯ ಪತ್ರಕರ್ತ ಮೋಹನ ಹೆಗಡೆ ಮಾತನಾಡಿ, ಸುರೇಂದ್ರ ಅವರು ಪತ್ರಿಕೆ ಸಂಪಾದಕರಾಗಿದ್ದರೂ, ಸಾಕಷ್ಟು ಸಂಘಟನಾ ಕಾರ್ಯಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ವೃತ್ತಿ ಕ್ಷೇತ್ರದ ಸಾಧನೆಗೆ ತಮಗಿಂತ ಕಿರಿಯರಿಗೆ ಪ್ರಶಸ್ತಿಗಳು ಬಂದರೆ ಪ್ರೋತ್ಸಾಹಿಸುತ್ತಿದ್ದರು. ಎಂದಿಗೂ ಪ್ರಶಸ್ತಿ ಬೆನ್ನತ್ತಿ ಹೋಗಲಿಲ್ಲ ಎಂದರು.ಈಗಾಗಲೇ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಬಗ್ಗೆ ಚಿಂತನೆ ನಡೆದಿದೆ. ಪತ್ರಿಕಾ ಬಳಗ ಹಾಗೂ ಅವರ ಅಭಿಮಾನಿಗಳಿಂದ ಸಹಕಾರ ಬೇಕಿದೆ. ಈ ನಿಟ್ಟಿನಲ್ಲಿ ಲೋಕಶಿಕ್ಷಣ ಟ್ರಸ್ಟ್‌ನ ಆಡಳಿತದೊಂದಿಗೆ ಚರ್ಚಿಸಿ ಒಳ್ಳೆಯ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಮಾತನಾಡಿ, ಸುರೇಂದ್ರ ಅವರು ಮೃದು ಭಾಷೆಯಲ್ಲಿಯೇ ಕಠಿಣ ವಿಷಯ ಹೇಳುತ್ತಿದ್ದರು ಎಂದರು.ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಾ.ಬಂಡು ಕುಲಕರ್ಣಿ, ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ಸಿದ್ದಣ್ಣವರ, ವಿಶ್ವನಾಥ ಕುಲಕರ್ಣಿ, ಶಂಕರಭಟ್ ಜೋಶಿ, ಡಾ. ವಾಮನ ಆಚಾರ್ಯ ಸೇರಿದಂತೆ ಇತರರು ಇದ್ದರು.