ಸತ್ಯಕ್ಕೆ ಸಾಕ್ಷಿ ಕೇಳಬೇಕಾದ ದುಃಸ್ಥಿತಿ: ಬರಗೂರು ರಾಮಚಂದ್ರಪ್ಪ ವಿಷಾದ

| Published : Aug 15 2025, 01:01 AM IST

ಸಾರಾಂಶ

ಮೂಡುಬಿದಿರೆ ಶಿವರಾಮ ಕಾರಂತ ಪ್ರತಿಷ್ಠಾನ ವತಿಯಿಂದ ಬುಧವಾರ ಸ್ಕೌಟ್-ಗೈಡ್ಸ್ ಕನ್ನಡ ಭವನದ ರತ್ನಾಕರವರ್ಣಿ ವೇದಿಕೆಯಲ್ಲಿ ೨೦೨೫ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿ ಹಾಗೂ ಪುರಸ್ಕಾರ ಪ್ರದಾನ ಸಮಾರಂಭ ನೆರವೇರಿತು.

ಮೂಡುಬಿದಿರೆ ಶಿವರಾಮ ಕಾರಂತ ಪ್ರತಿಷ್ಠಾನ ವತಿಯಿಂದ ಪುರಸ್ಕಾರ ಪ್ರದಾನ

ಮೂಡುಬಿದಿರೆ: ಮಾನವತೆಯ ಜಾಗದಲ್ಲಿ ಮತೀಯತೆ, ವಿವೇಕದ ಜಾಗದಲ್ಲಿ ಅವಿವೇಕ, ಸತ್ಯದ ಹಾದಿಯಲ್ಲಿ ಅಸತ್ಯ ವಿಜೃಂಭಿಸುತ್ತಿರುವ ಬಿಕ್ಕಟ್ಟಿನ ಇಂದಿನ ಕಾಲ ಘಟ್ಟದಲ್ಲಿ ಸತ್ಯಕ್ಕೆ ಸಾಕ್ಷಿ ಕೇಳುವ ಪರಿಸ್ಥಿತಿ ಇದೆ. ಇದಕ್ಕೆ ಸೃಜನಶೀಲ, ಚಿಂತನ ಶೀಲ, ಚಲನ ಶೀಲವಾದ ಕನ್ನಡ ಸಾಹಿತ್ಯ ಪರಂಪರೆಯೇ ಪರಿಹಾರ ನೀಡಲು ಸಾಧ್ಯ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.ಮೂಡುಬಿದಿರೆ ಶಿವರಾಮ ಕಾರಂತ ಪ್ರತಿಷ್ಠಾನ ವತಿಯಿಂದ ಬುಧವಾರ ಸಂಜೆ ಸ್ಕೌಟ್-ಗೈಡ್ಸ್ ಕನ್ನಡ ಭವನದ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ೨೦೨೫ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿ ಹಾಗೂ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಅನ್ಯ ಧರ್ಮ, ವಿಚಾರ ಪ್ರಜಾಸತ್ತಾತ್ಮಕವಾಗಿ ಸಹಿಸಿಕೊಳ್ಳಬೇಕು ಎನ್ನುವ 9ನೇ ಶತಮಾನದ ಕವಿರಾಜ ಮಾರ್ಗದ ಹಿತವಚನ ಆದರ್ಶವಾಗಬೇಕಿದೆ. ಚಲನಶೀಲತೆಯೊಂದಿಗೆ ಕಾಲದೊಳಗಿದ್ದು ಕಾಲವನ್ನು ಮೀರ ಬೇಕು ಎನ್ನುವುದಕ್ಕೆ ಆದರ್ಶವಾದವರು ಶಿವರಾಮ ಕಾರಂತವರು ಎಂದರು.

ಪ್ರಶಸ್ತಿ ಪ್ರದಾನ:ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ಸಹಿತ ಹಿರಿಯ ಸಾಹಿತಿ ಪ್ರೊ.ಎನ್.ಟಿ ಭಟ್, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಡಾ.ಮೋಹನ್ ಕುಂಟಾರ್ (ಕೃತಿ: ಅನುವಾದ ಒಲವು ನಿಲುವುಗಳು), ಡಾ.ಎಚ್.ಎಸ್. ಅನುಪಮಾ (ಬೆಡಗಿನೊಳಗು - ಮಹಾದೇವಿ ಅಕ್ಕ) , ಡಾ.ಸಬಿತಾ ಬನ್ನಾಡಿ (ಇದಿರು ನೋಟ) ಮತ್ತು ಡಾ. ಶ್ರೀಪಾದ ಭಟ್ (ದಡವ ನೆಕ್ಕಿದ ಹೊಳೆ) ಅವರನ್ನು ಶಿವರಾಮ ಕಾರಂತ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಕಳೆದ 33 ವರ್ಷಗಳಿಂದಲೂ ಸರ್ಕಾರದ ಯಾವುದೇ ಅನುದಾನವಿಲ್ಲದೇ ದಾನಿಗಳ ಸಹಕಾರದಿಂದ ಪೀಠವು ಬೆಳೆದು ಬಂದಿರುವ ಬಗ್ಗೆ ಜಯಶ್ರೀ ಅಮರನಾಥ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಯ ಪ್ರಜ್ಞೆ, ಧೀರೋದ್ತಾತ ನಡೆ, ನುಡಿಯ ಕಾರಂತರು ತಾಯಿಯ ವಿರೋಧದ ನಡುವೆಯೂ ಆಕೆಯ ಮಗಳಿಗೆ ಅಂತರ್ಜಾತಿಯ ಮದುವೆ ಮಾಡಿಸಿದ್ದ ಕಾರಂತರು ಮುಂದೆ ಅಳಿಯನಾದವ ಅತ್ತೆಗೆ ಆಸ್ತಿಯ ವಿಚಾರದಲ್ಲಿ ವಂಚಿಸಿದಾಗ ಆತನ ವಿರುದ್ಧ ನಿಂತು ಅತ್ತೆಗೆ ನೆರವಾದ ಘಟನೆಯನ್ನು ವಿವರಿಸಿ ಕಾರಂತರ ಮಾನವೀಯ ಅಂತಕರಣಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ ಎಂದರು. ಜ್ಞಾನಪೀಠ ಪ್ರಶಸ್ತಿ ಬಂದಾಗ ಆಂಗ್ಲ ಪತ್ರಿಕೆಯೊಂದು ತಪ್ಪಾಗಿ ಬರೆದುದನ್ನೇ ಉಲ್ಲೇಖಿಸಿ ನನಗೆ ಬಂದದ್ದು ಜ್ಞಾನ ಪಿತ್ತ ಎಂದ ಕಾರಂತರ ಗಂಭೀರತೆಯಲ್ಲೂ ಹಾಸ್ಯವನ್ನು ನೆನಪಿಸಿಕೊಂಡರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ಕಾರಂತರ ವೈಚಾರಿಕ ನಿಲುವುಗಳನ್ನು ಅವರು ಲೋಕಸಭೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಬೆಂಬಲಿಸುವ ಅವಕಾಶ ಸಿಕ್ಕಿದ್ದನ್ನು ಸ್ಮರಿಸಿ ಈ ಪ್ರಶಸ್ತಿ ಮನೆಯಲ್ಲೂ ಮನದಲ್ಲೂಉಳಿಯುತ್ತದೆ ಎಂದರು.ಪ್ರತಿಷ್ಠಾನದ ಉಪಾಧ್ಯಕ್ಷ ಕೆ.ಶ್ರೀಪತಿ ಭಟ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ನಿರೂಪಿಸಿದರು. ಕೋಶಾಧಿಕಾರಿ ಕೆ. ಕೃಷ್ಣರಾಜ ಹೆಗ್ಡೆ ವಂದಿಸಿದರು. ಪದಾಧಿಕಾರಿಗಳಾದ ಎಂ.ಬಾಹುಬಲಿ ಪ್ರಸಾದ್, ರಾಜರಾಂ ನಾಗರಕಟ್ಟೆ, ಡಾ. ಧನಂಜಯ ಕುಂಬ್ಳೆ, ವೇಣು ಗೋಪಾಲ ಶೆಟ್ಟಿ, ಭಾನುಮತಿ ಶೀನಪ್ಪ ಉಪಸ್ಥಿತರಿದ್ದರು.