ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ‘ಭಾರತ ಭಾಗ್ಯ ವಿದಾತ’ ಎಂಬ ಬಿರುದು ನೀಡಿ ಗೌರವಿಸಿದ್ದಾರೆ.

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ‘ಭಾರತ ಭಾಗ್ಯ ವಿದಾತ’ ಎಂಬ ಬಿರುದು ನೀಡಿ ಗೌರವಿಸಿದ್ದಾರೆ.

ಶುಕ್ರವಾರ, ಪುತ್ತಿಗೆ ಮಠದ ವತಿಯಿಂದ ಆಯೋಜಿಸಲಾದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಅವರನ್ನು ಪುತ್ತಿಗೆ ಶ್ರೀಗಳು ಈ ಬಿರುದು ನೀಡಿ ಸನ್ಮಾನಿಸಿದರು. ಈ ಸಂದರ್ಭ ಮೋದಿ ಅವರು ಗೀತೆಯ 15ನೇ, ಪುರುಷೋತ್ತಮ ಯೋಗದ 20 ಶ್ಲೋಕಗಳನ್ನು ಪಠಿಸಿದರು.

ನಂತರ ಸಂದೇಶ ನೀಡಿದ ಶ್ರೀಗಳು, ಗೀತೆಯನ್ನು ಪೂರ್ಣ ಅನುಷ್ಠಾನ ಮಾಡುತ್ತಿರುವವರು ಮೋದಿ, ಗೀತೆಯಲ್ಲಿ ಹೇಳಲಾದ ಆತ್ಮನಿರ್ಭರ ತತ್ವವನ್ನು ನರೇಂದ್ರ ಮೋದಿ ದೇಶದಲ್ಲಿ ಜಾರಿಗೆ ತರುತ್ತಿದ್ದಾರೆ. ಗೀತೆಯಲ್ಲಿ ಹೇಳಿದಂತೆ ಫಲದ ಆಪೇಕ್ಷೆ ಇಲ್ಲದೇ ಮಾಡುವ ನಿಸ್ವಾರ್ಥ ಸೇವೆಯ ಇನ್ನೊಂದು ಹೆಸರೇ ನರೇಂದ್ರ ಮೋದಿ. ಗೀತೆ ಸತ್ಯಾತ್ಮರ ರಕ್ಷಣೆ ಮಾಡಬೇಕು ಎಂದು ಹೇಳಿದೆ, ಮೋದಿ ರಾಷ್ಟ್ರ ರಕ್ಷಣೆಯ ಮೂಲಕ ಅದನ್ನು ಪಾಲಿಸುತಿದ್ದಾರೆ ಎಂದು ಹೇಳಿದರು.

ತಮ್ಮ ವಿಶ್ವ ಗೀತಾ ಪರ್ಯಾಯದ ಸಂದರ್ಭದಲ್ಲಿ ಕೃಷ್ಣನಿಗೆ ಲಕ್ಷ ಗೀತೆ ಪಾರಾಯಣ ಅರ್ಪಿಸಲು ವಿಶ್ವನಾಯಕನೇ ಬಂದಿದ್ದಾರೆ ಎಂದು ಶ್ರೀಗಳು ಮೋದಿ ಅವರನ್ನು ಅರ್ಜುನನಿಗೆ ಹೋಲಿಸಿದರು. ಇಂದ್ರನ ನರವತಾರವೇ ಅರ್ಜುನ, ಈ ಅರ್ಜುನನಿಗೆ ಕೃಷ್ಣ ಗೀತೆಯನ್ನು ಭೋದಿಸಿದ್ದ, ಇಂದು ಕೃಷ್ಣನಿಗೆ ಗೀತೆಯನ್ನು ಸಮರ್ಪಿಸಲು ನರೇಂದ್ರ ಬಂದಿದ್ದಾರೆ. ಇದು ಕೃಷ್ಣ ಭಕ್ತರಿಗೆ ಮಹಾ ಸಂಭ್ರಮದ ದಿನ ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಪ್ರಥಮ ಸಂಕಲ್ಪ ಉಡುಪಿಯಲ್ಲಿಯೇ ಆಗಿತ್ತು, ಇದೀಗ ರಾಮಮಂದಿರದ ನಿರ್ಮಾಣ ಪೂರ್ಣಗೊಳಿಸಿ, ಮೋದಿ ಉಡುಪಿಗೆ ಬಂದಿದ್ದಾರೆ. ಈ ಮೂಲಕ ರಾಮಮಂದಿರ ಕೃಷ್ಣಾರ್ಪಣೆಗೊಳಿಸಿದ್ದಾರೆ ಎಂದು ಶ್ರೀಗಳು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ,ವಿಜಯೇಂದ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಉಡುಪಿ ಚಿಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲೆಯ ಶಾಸಕರಾದ ಯಶ್‌ಪಾಲ್ ಸುವರ್ಣ, ಸುರೇಶ್‌ ಶೆಟ್ಟಿ ಗುರ್ಮೆ, ವಿ. ಸುನಿಲ್ ಕುಮಾರ್, ಗುರುರಾಜ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ ವೇದಿಕೆಯಲ್ಲಿದ್ದರು.ಧರ್ಮಸ್ಥಳ‍ದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು, ವಿದ್ವಾನ್ ಡಾ. ಗೋಪಾಲಾಚಾರ್ಯ ಮತ್ತು ಡಾ. ತನ್ಮಯ ಗೋಸ್ವಾಮಿ ಕಾರ್ಯಕ್ರಮ ನಿರೂಪಿಸಿದರು, ಗೀತೋತ್ಸವದ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ವಂದಿಸಿದರು. ಸಂಪೂರ್ಣ ಗೋರಕ್ಷಣೆ, ಉಡುಪಿ ಕಾರಿಡಾರ್‌ಗೆ ಪ್ರಧಾನಿಗೆ ಮನವಿಪರ್ಯಾಯ ಪುತ್ತಿಗೆ ಶ್ರೀಗಳು ತಮ್ಮ ಸಂದೇಶದಲ್ಲಿ, ಭಾರತದಲ್ಲಿ ಸಂಪೂರ್ಣ ಗೋರಕ್ಷಣೆಯ ನೀತಿ ಜಾರಿಗೊಳಿಸಬೇಕು ಮತ್ತು ವಾರಣಾಸಿ ಕಾರಿಡಾರ್‌ ನಂತೆ ಉಡುಪಿ ಕಾರಿಡಾರ್ ನಿರ್ಮಾಣ ಮಾಡಬೇಕು ಎಂದು ಪ್ರದಾನಿ ನರೇಂದ್ರ ಮೋದಿ ಅವರಲ್ಲಿ ಆಗ್ರಹಪೂರ್ವಕ ಮನವಿ ಮಾಡಿದರು.