ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಕೊಡಮಾಡಲಾಗುವ ಪ್ರತಿಷ್ಠಿತ ವಿಜಯಾ ವಿಷ್ಣು ಭಟ್ ದತ್ತಿ ಪ್ರಶಸ್ತಿಯನ್ನು ಈ ಬಾರಿ ಉಪನ್ಯಾಸಕರು ಹಾಗೂ ಲೇಖಕರಾದ ಪ್ರತಿಮಾ ಹರೀಶ್ ರೈ ಅವರಿಗೆ ಶನಿವಾರ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಕೊಡಮಾಡಲಾಗುವ ಪ್ರತಿಷ್ಠಿತ ವಿಜಯಾ ವಿಷ್ಣು ಭಟ್ ದತ್ತಿ ಪ್ರಶಸ್ತಿಯನ್ನು ಈ ಬಾರಿ ಉಪನ್ಯಾಸಕರು ಹಾಗೂ ಲೇಖಕರಾದ ಪ್ರತಿಮಾ ಹರೀಶ್ ರೈ ಅವರಿಗೆ ಶನಿವಾರ ಪ್ರದಾನ ಮಾಡಲಾಯಿತು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಆಯೋಜಿತ ಪ್ರಶಸ್ತಿ ಪ್ರದಾನ ಮತ್ತು ಜಲಜಾ ಶೇಖರ್ ಹಾಗೂ ಜೆ.ಸಿ. ಶೇಖರ್ ದತ್ತಿ ಉಪನ್ಯಾಸ ಕಾರ್‍ಯಕ್ರಮದಲ್ಲಿ, ಕಾಲೇಜಿನ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಸ್ಥರು ಹಾಗೂ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪುರಸ್ಕೃತೆ ಪ್ರೊ. ನಯನ ಕಶ್ಯಪ್ ಅವರು, ಅಂತರಗಂಗೆ ಅಂಕಣ ಬರಹಗಳ ಪುಸ್ತಕವನ್ನು ರಚಿಸಿರುವ ಪ್ರತಿಮಾ ಹರೀಶ್ ರೈ ಅವರಿಗೆ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಮನೆ ಮನಗಳಲ್ಲಿ ಕನ್ನಡಕ್ಕಿರಲಿ ಆದ್ಯತೆ- ಕಾರ್‍ಯಕ್ರಮವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದ ಪೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೇಜರ್ ಡಾ. ರಾಘವ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡದೆಡೆಗೆ ಯುವ ಸಮೂಹದಿಂದ ಕಂಡು ಬರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ, ಪ್ರತಿಯೊಬ್ಬಪೋಷಕರು ತಮ್ಮ ಮನೆಗಳಲ್ಲಿ ಇಂಗ್ಲಿಷ್ ಭಾಷಾ ವ್ಯಾಮೋಹದಿಂದ ಹೊರ ಬಂದು ಕನ್ನಡದಲ್ಲೇ ತಮ್ಮ ಕುಟುಂಬದ ಸದಸ್ಯರೊಂದಿಗೆ ವ್ಯವಹರಿಸಿದಾಗ ಕನ್ನಡದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಹೆಸರು ಶಾಶ್ವತವಾಗಿರಬೇಕೆನ್ನುವ ಭಾವನೆಯಿಂದ ಕೆಲವರು ತಾವು ಹೋದೆಡೆಗಳಲ್ಲಿನ ಕಲ್ಲು ಬಂಡೆಗಳಲ್ಲಿ ತಮ್ಮ ಹೆಸರನ್ನು ಕೆತ್ತುವುದನ್ನು ಕಾಣುತ್ತೇವೆ. ನಿಜಕ್ಕಾದರೆ, ಸಾವಿನ ಬಳಿಕವೂ ನಮ್ಮ ಹೆಸರು ಶಾಶ್ವತವಾಗಿರಬೇಕಾದರೆ ಜನ ಓದುವ ಕೃತಿಗಳ ರಚನೆ ಮಾಡಬೇಕು. ಇಲ್ಲವೆ ಜನ ಒಪ್ಪುವ ಕೆಲಸ ಮಾಡಬೇಕೆಂದು ತಿಳಿಸಿ, ಕನ್ನಡದಲ್ಲಿ ಸಾಹಿತ್ಯ ರಚನೆಗೆ ಪ್ರತಿಯೊಬ್ಬರು ಆಸಕ್ತರಾಗಬೇಕು ಎಂದರು.

ವಚನಗಳ ಕಲಿಕೆಯಿಂದ ಮನುಜರಾಗಿ..

ಜಲಜಾ ಶೇಖರ್ ಹಾಗೂ ಜೆ.ಸಿ. ಶೇಖರ್ ದತ್ತಿ ಉಪನ್ಯಾಸ ಕಾರ್‍ಯಕ್ರಮದಲ್ಲಿ ವಚನ ಸಾಹಿತ್ಯದ ಹಿರಿಮೆ ಕುರಿತು ಮಾತನಾಡಿದ ಜಿಲ್ಲಾ ಕಸಾಪ ನಿರ್ದೇಶಕ ಹಾಗೂ ಶಿಕ್ಷಕ ಮೇ.ನಾ. ವೆಂಕಟ ನಾಯಕ್, ನವ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ 12ನೇ ಶತಮಾನದ ಶರಣರ ವಚನಗಳನ್ನು ಪ್ರಸ್ತುತ ದಿನಮಾನಗಳಲ್ಲಿ ದಿನಕ್ಕೊಂದು ಕಲಿತರೆ ನಾವೆಲ್ಲರೂ ಮನುಷ್ಯರಾಗಬಹುದು, ಉತ್ತಮ ಸಮಾಜ ನಿರ್ಮಾಣವಾಗಬಲ್ಲುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ನಾಲ್ವಡಿ ಕೃಷ್ಣ ರಾಜ ಒಡೆಯರ್‌ರಿಂದ 1915ರಲ್ಲಿ ಸ್ಥಾಪಿಸಲ್ಪಟ್ಟ ಕನ್ನಡ ಸಾಹಿತ್ಯ ಪರಿಷತ್ತು 110 ವರ್ಷಗಳನ್ನು ಪೂರೈಸಿದೆ. ಪ್ರಸ್ತುತ ರಾಜ್ಯಾದ್ಯಂತ ಪರಿಷತ್ತು 3 ಸಾವಿರಕ್ಕೂ ಹೆಚ್ಚಿನ ದತ್ತಿ ಕಾರ್‍ಯಕ್ರಮಗಳನ್ನು ನಡೆಸುತ್ತಿದೆ. ಕೊಡಗು ಜಿಲ್ಲೆಯಲ್ಲಿ 40 ದತ್ತಿ ಕಾರ್‍ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ವಿಜಯ ವಿಷ್ಣು ಭಟ್ ಅವರು ಜಿಲ್ಲೆಯಲ್ಲಿ ಸುದೀರ್ಘಾವಧಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಅವರ ಅಪೇಕ್ಷೆಯಂತೆ ದತ್ತಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಕಳೆದ ಸಾಲಿನಲ್ಲಿ ಮೊದಲ ಬಾರಿಗೆ ಈ ದತ್ತಿ ಪ್ರಶಸ್ತಿಯನ್ನು ಲೇಖಕಿ ಸ್ಮಿತಾ ಅಮೃತರಾಜ್ ಅವರಿಗೆ ಪ್ರದಾನ ಮಾಡಲಾಗಿತ್ತು, ಈ ಬಾರಿ ಪ್ರತಿಮಾ ಹರೀಶ್ ರೈ ಅವರಿಗೆ ನೀಡುತ್ತಿರುವುದಾಗಿ ಮಾಹಿತಿ ನೀಡಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ದತ್ತಿ ದಾನಿಗಳಾದ ಜಲಜಾ ಶೇಖರ್ ಮತ್ತು ಜೆ.ಸಿ. ಶೇಖರ್, ಮೈಸೂರಿನ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರತಿಭಾ ಡಿ.ಎಸ್., ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷ ಪುದಿಯನೆರವನ ರೇವತಿ ರಮೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಿಲ್ಪ ಸ್ವಾಗತಿಸಿದರು.