ಕಳೆದ ಮೂರು ವರ್ಷಗಳಲ್ಲಿ ನಿಡಘಟ್ಟ-ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ೩೦೦ ಜನರು ಸಾವನ್ನಪ್ಪಿದ್ದಾರೆ. ತಲೆಗೆ ಪೆಟ್ಟಾದಾಗ ಗಾಯಾಳು ಆರಂಭದಲ್ಲಿ ಮಾಮೂಲಿನಂತೆ ಮಾತನಾಡುತ್ತಿರುವಂತೆ ಕಂಡರೂ ಮೆದುಳಿನ ಒಳಗೆ ಸದ್ದಿಲ್ಲದೆ ರಕ್ತಸ್ರಾವವಾಗುತ್ತಿರಬಹುದು. ಕುಟುಂಬದವರು ಇದನ್ನು ನಿರ್ಲಕ್ಷಿಸಬಾರದು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಿದುಳಿನ ತುರ್ತು ಪರಿಸ್ಥಿತಿ ಮತ್ತು ಹಠಾತ್ ಹೃದಯ ಸಂಬಂಧಿ ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ರಸ್ತೆ ಅಪಘಾತಗಳಲ್ಲಿ ತಲೆಗೆ ಪೆಟ್ಟಾದಾಗ ಮೊದಲ ಒಂದು ಗಂಟೆ ಗೋಲ್ಡನ್ ಅವರ್ ಆಗಿದ್ದು ಅದನ್ನು ನಿರ್ಲಕ್ಷ್ಯ ಮಾಡದಂತೆ ಮೈಸೂರಿನ ಮಣಿಪಾಲ್ ಆಸ್ಪತ್ರೆ ವೈದ್ಯರು ತಿಳಿಸಿದರು.ನ್ಯೂರೋ ಸರ್ಜನ್ ಡಾ.ಎ.ಆರ್.ಮಕ್ಸೂದ್ ಅಹ್ಮದ್, ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಸಿ.ಬಿ.ಕೇಶವಮೂರ್ತಿ ಹಾಗೂ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಬಿ.ಜೆ.ಸಂದೀಪ್ ಪಟೇಲ್ ಮಾಹಿತಿ ನೀಡಿದರು.
ಕಳೆದ ಮೂರು ವರ್ಷಗಳಲ್ಲಿ ನಿಡಘಟ್ಟ-ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ೩೦೦ ಜನರು ಸಾವನ್ನಪ್ಪಿದ್ದಾರೆ. ತಲೆಗೆ ಪೆಟ್ಟಾದಾಗ ಗಾಯಾಳು ಆರಂಭದಲ್ಲಿ ಮಾಮೂಲಿನಂತೆ ಮಾತನಾಡುತ್ತಿರುವಂತೆ ಕಂಡರೂ ಮೆದುಳಿನ ಒಳಗೆ ಸದ್ದಿಲ್ಲದೆ ರಕ್ತಸ್ರಾವವಾಗುತ್ತಿರಬಹುದು. ಕುಟುಂಬದವರು ಇದನ್ನು ನಿರ್ಲಕ್ಷಿಸಬಾರದು. ಪೆಟ್ಟು ಬಿದ್ದ ಒಂದು ಗಂಟೆಯೊಳಗೆ ತಕ್ಷಣದ ತಪಾಸಣೆ ಮತ್ತು ಚಿಕಿತ್ಸೆ ನೀಡುವುದರಿಂದ ರೋಗಿಯ ಪ್ರಾಣ ಉಳಿಸಿ ಶಾಶ್ವತ ಅಂಗವೈಕಲ್ಯ ತಪ್ಪಿಸಬಹುದು ಎಂದು ಡಾ.ಮಕ್ಸೂದ್ ತಿಳಿಸಿದರು.ಬ್ರೈನ್ ಸ್ಟ್ರೋಕ್ ಬಗ್ಗೆ ಗುರುತಿಸುವವರ ಸಂಖ್ಯೆ ಬಹಳ ವಿರಳ. ಇದರಿಂದ ಅನೇಕರು ತಮ್ಮ ಚಲನವಲನ ಹಾಗೂ ಸ್ವಾವಲಂಬಿ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಪಾರ್ಶ್ವವಾಯು ಲಕ್ಷಣಗಳನ್ನು ಗುರುತಿಸಲು ಬ್ಯಾಲೆನ್ಸ್ ತಪ್ಪುವುದು, ದೃಷ್ಟಿಮಂಜು, ಮುಖ ವಾಲುವಿಕೆ, ತೋಳಿನ ದೌರ್ಬಲ್ಯ, ಮಾತಿನ ತೊಂದರೆ, ತಕ್ಷಣ ಪ್ರತಿಕ್ರಿಯೆಯ ಸಮಯವನ್ನೊಳಗೊಂಡ ಬಿ-ಫಾಸ್ಟ್ ಸೂತ್ರವನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಸಲಹೆ ನೀಡಿದರು.
ಹೃದ್ರೋಗ ತಜ್ಞ ಡಾ.ಸಿ.ಬಿ.ಕೇಶವಮೂರ್ತಿ ಮಾತನಾಡಿ, ಕೋವಿಡ್ ಬಳಿಕ ಹಠಾತ್ ಹೃದಯಾಘಾತ ಪ್ರಕರಣಗಳು ಸಂಭವಿಸುತ್ತಿವೆ. ಅನಿಯಯಂತ್ರಿತ ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ, ನಿದ್ರೆಯ ಕೊರತೆ, ವಿಪರೀತ ಒತ್ತಡ, ಬೊಜ್ಜು, ದೈಹಿಕ ಚಟುವಟಿಕೆ ಕೊರತೆ ಹೃದಯಾಘಾತಕ್ಕೆ ಪ್ರಮುಖ ಕಾರಣ. ವಿಪರೀತ ಆಯಾಸ, ಎದೆಭಾರ, ಉಸಿರಾಟದ ತೊಂದರೆ ಇವು ಮುಂಬರುವ ಅಪಾಯದ ಮುನ್ಸೂಚನೆಗಳಾಗಿದ್ದು ಇವುಗಳನ್ನು ತಡೆಗಟ್ಟುವ ಬಗ್ಗೆ ಗಮನಹರಿಸಬೇಕು ಎಂದರು.ಆಸ್ಪತ್ರೆಯ ನಿರ್ದೇಶಕ ಬಿ.ಜೆ.ಸಂದೀಪ್ ಪಟೇಲ್ ಮಾತನಾಡಿ, ಮಣಿಪಾಲ್ ಆಸ್ಪತ್ರೆ ಟ್ರಾಮಾಕೇರ್ ಒಳಗೊಂಡ ನ್ಯೂರೋಸರ್ಜಿಕಲ್ ಸೇವೆ, ಅತ್ಯಾಧುನಿಕ ಕ್ಯಾಥ್‌ಲ್ಯಾಬ್ ಹಾಗು ದಿನದ ೨೪ ಗಂಟೆ ತಜ್ಞ ವೈದ್ಯರ ತಂಡವನ್ನು ಹೊಂದಿದ್ದು ಅತ್ಯುನ್ನತ ಮಟ್ಟದ ತುರ್ತು ಚಿಕಿತ್ಸೆ ಒದಗಿಸಲು ಸನ್ನದ್ಧವಾಗಿದೆ ಎಂದು ಭರವಸೆ ನೀಡಿದರು.