ಸಾರಾಂಶ
ಅಜೀಜಅಹ್ಮದ ಬಳಗಾನೂರ
ಧಾರವಾಡ: ಇಂದಿಗೂ ಹಲವು ರೈತರು ಕೃಷಿ ಚಟುವಟಿಕೆಯಲ್ಲಿ ಲಾಭಕ್ಕಿಂತ ನಷ್ಟ ಮಾಡಿಕೊಂಡವರೇ ಜಾಸ್ತಿ. ಇದಕ್ಕೆ ಪ್ರಮುಖ ಕಾರಣ ಬೆಳೆ ಬೆಳೆಯಲು ಬೇಕಾದ ಜೀವನಚಕ್ರದ ಅರಿವು ಇರದಿರುವುದು. ಈ ಕುರಿತು ಜಲಸಂಪನ್ಮೂಲ ಇಲಾಖೆಯ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಇಲ್ಲಿನ ಕೃಷಿಮೇಳದಲ್ಲಿ ಮಣ್ಣಿನ ಮಹತ್ವ ಕುರಿತು ರೈತರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವುದು ಮೇಳದ ಆಕರ್ಷಣೆಗೆ ಕಾರಣವಾಗಿದೆ.ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಆಹಾರ ಉತ್ಪಾದನೆ ಮಾಡುವ ಧಾವಂತದಲ್ಲಿ ರೈತರು ತಮ್ಮ ಹೊಲಗಳಿಗೆ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಸೂಕ್ತ ಮಣ್ಣು ಮತ್ತು ನೀರು ನಿರ್ವಹಣೆಯ ಜ್ಞಾನದ ಅಭಾವದಿಂದ ನೀರನ್ನು ಸಮರ್ಥವಾಗಿ ಬಳಸದೇ ಮಣ್ಣಿನ ಸಮತೋಲನ ತಪ್ಪಿ ಜಮೀನುಗಳು ಜೌಗು, ಸವಳು ಮತ್ತು ಕ್ಷಾರಯುಕ್ತ (ಕರ್ಲು) ಮಣ್ಣಾಗಿ ರೂಪಗೊಳ್ಳುತ್ತಿದೆ. ಇದರಿಂದ ಬಿತ್ತಿದ ಬೆಳೆಗಳ ಇಳುವರಿ ಕಡಿಮೆಯಾಗುತ್ತಿದೆ ಹಾಗೂ ಬೇಸಾಯಕ್ಕಿದ್ದ ಯೋಗ್ಯ ಭೂಮಿಗಳು ಬರಡಾಗುತ್ತಿವೆ. ಈ ಕುರಿತು ರೈತರಲ್ಲಿ "ವಾಲ್ಮಿ "ಯಿಂದ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.
ಮಣ್ಣು ಪರೀಕ್ಷೆ ಏಕೆ?: ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಲಕ್ಷಣಗಳನ್ನು ತಿಳಿಯಲು ಮಣ್ಣು ಪರೀಕ್ಷೆ ಅವಶ್ಯಕ.ಮಣ್ಣಿನಲ್ಲಿರುವ ಪೋಷಕಾಂಶಗಳ ಗುಣಮಟ್ಟ ತಿಳಿದು ಇದರ ಆಧಾರದ ಮೇಲೆ ವಿವಿಧ ಪೋಷಕಾಂಶ, ಗೊಬ್ಬರ ಪ್ರಮಾಣ ನಿರ್ಧರಿಸಲು, ಹೊಲಗಳಿಗೆ ನೀರು ಹಾಗೂ ಗೊಬ್ಬರದ ಸರಿಯಾದ ಬಳಕೆ ಮಾಡಿಕೊಳ್ಳಲು, ಮಣ್ಣಿನಲ್ಲಿರುವ ರಸಸಾರ, ಲವಣಾಂಶ, ಸಾವಯವ ಇಂಗಾಲ, ಜವಳು ಮತ್ತು ಕ್ಷಾರ ಲಕ್ಷಣಗಳನ್ನು ತಿಳಿದು ಅವುಗಳನ್ನು ನಿರ್ವಹಿಸಲು ಮಣ್ಣಿನ ಪರೀಕ್ಷೆ ಸಹಕಾರಿಯಾಗಿದೆ.
ಕೃಷಿಮೇಳದಲ್ಲಿ ಆಗಮಿಸುವ ರೈತರಿಗೆ ಮಣ್ಣಿನ ಪರೀಕ್ಷೆಯಿಂದಾಗುವ ಪ್ರಯೋಜನ, ಮಣ್ಣನ್ನು ಸಂಗ್ರಹಿಸುವ ವಿಧಾನ, ಪರೀಕ್ಷೆ ಹೇಗೆ ಮತ್ತು ಎಲ್ಲಿ ಮಾಡಿಸಬೇಕು. ಪರೀಕ್ಷಿಸಿದ ಮಣ್ಣಿನ ಅನುಸಾರ ಯಾವೆಲ್ಲ ಪೋಷಕಾಂಶ ನೀಡಬೇಕು ಎಂಬುದರ ಕುರಿತು ರೈತರಲ್ಲಿ ಮನದಟ್ಟು ಮಾಡುವ ಕಾರ್ಯ ವ್ಯಾಪಕ ಪ್ರಶಂಸೆಗೆ ವ್ಯಕ್ತವಾಗಿದೆ.ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ: ಇಂದು ರೈತರು ಅವೈಜ್ಞಾನಿಕವಾಗಿ ಕೃಷಿಚಟುವಟಿಕೆ ಕೈಗೊಳ್ಳುತ್ತಿರುವುದರಿಂದ ಹೆಚ್ಚಿನ ಖರ್ಚು, ಹಾನಿ ಅನುಭವಿಸುತ್ತಿದ್ದಾರೆ. ರೈತರ ಅನುಭವ ಹಾಗೂ ಹೊಸ ತಂತ್ರಜ್ಞಾನ ಬಳಕೆಯೊಂದಿಗೆ ಹೆಚ್ಚಿನ ಲಾಭ ಪಡೆಯಬಹುದು. ಪ್ರತಿ ಮೂರು ವರ್ಷಕ್ಕೊಂದು ಬಾರಿ ಮಣ್ಣಿನ ಪರೀಕ್ಷೆ ಕಡ್ಡಾಯವಾಗಿದೆ. ರೈತರು ಹೊಲಗಳಿಗೆ ವೈಜ್ಞಾನಿಕವಾಗಿ ಶಿಫಾರಸ್ಸು ಮಾಡಿದ ಪೋಷಪಾಂಶ ನೀಡಬೇಕು. ಮತ್ತು ಜಾಣತನದಿಂದ ವೈಜ್ಞಾನಿಕವಾಗಿ ಕೆಲಸ ಮಾಡಿದರೆ ಕೃಷಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿದೆ. ಈ ಕುರಿತು ರಾಜ್ಯಾದ್ಯಂತ "ವಾಲ್ಮಿ " ಅಡಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರಲ್ಲಿ ಮಣ್ಣಿನ ಪರೀಕ್ಷೆಯಿಂದ ಆಗುವ ಪ್ರಯೋಜನಗಳ ಕುರಿತು ಮನವರಿಕೆ ಮಾಡಲಾಗುತ್ತಿದೆ.
ಕೃಷಿಮೇಳಕ್ಕೆ ಆಗಮಿಸುವ ರೈತರಿಗೆ ಮಣ್ಣಿನ ಫಲವತ್ತತೆ, ಅದರ ಪರೀಕ್ಷೆಯ ಕಾರ್ಯವಿಧಾನದ ಕುರಿತು ಅರಿವು ಮೂಡಿಸಲಾಗುತ್ತಿದೆ. ಸಾವಿರಾರು ರೈತರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಅದರಲ್ಲೂ ಯುವಕರು ಮಣ್ಣು ಪರೀಕ್ಷೆಯಿಂದಾಗುವ ಪ್ರಯೋಜನದ ಅರಿವು ಹೊಂದುವುದರಿಂದ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ವಾಲ್ಮಿಯ ನಿರ್ದೇಶಕ ಡಾ. ಗಿರೀಶ ಎನ್. ಮರಡ್ಡಿ "ಕನ್ನಡಪ್ರಭ "ಕ್ಕೆ ತಿಳಿಸಿದರು.