ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪಹರಣಕ್ಕೊಳಗಾದ ಹಾಗೂ ಕಾಣೆಯಾದ ಮಕ್ಕಳ ಪತ್ತೆಗಾಗಿ ರಚಿಸಲಾದ ವಿಶೇಷ ಕಾರ್ಯಪಡೆಯ ಸಭೆ ನಡೆಯಿತು.
ಕೊಪ್ಪಳ: ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ರಕ್ಷಣೆ ಕುರಿತು ಶಾಲಾ-ಕಾಲೇಜುಗಳು, ವಸತಿ ನಿಲಯಗಳು ಸೇರಿದಂತೆ ಸಮಾಜದ ಎಲ್ಲ ಹಂತಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪಹರಣಕ್ಕೊಳಗಾದ ಹಾಗೂ ಕಾಣೆಯಾದ ಮಕ್ಕಳ ಪತ್ತೆಗಾಗಿ ರಚಿಸಲಾದ ವಿಶೇಷ ಕಾರ್ಯಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಮಕ್ಕಳ ಕಾಣೆಯಾದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಪಹರಣ ಪ್ರಕರಣವೆಂದು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ದಾಖಲಾಗಿರುವ ಬಹುತೇಕ ಪ್ರಕರಣಗಳಲ್ಲಿ 16ರಿಂದ 18 ವರ್ಷದೊಳಗಿನ ಬಾಲಕಿಯರು ಪ್ರೀತಿ-ಪ್ರೇಮದ ಹಿನ್ನೆಲೆಯಲ್ಲಿ ಪಾಲಕರು ಹಾಗೂ ಮನೆಯಿಂದ ದೂರವಾಗಿರುವುದು ಕಂಡುಬಂದಿದೆ ಎಂದರು.ಪೋಕ್ಸೋ ಕಾಯ್ದೆ–2012ರ ಅನ್ವಯ ಅಪ್ರಾಪ್ತ ವಯಸ್ಸಿನ ಮಕ್ಕಳೊಂದಿಗೆ ಲೈಂಗಿಕ ಚಟುವಟಿಕೆ ನಡೆಸುವುದು ಗಂಭೀರ ಅಪರಾಧವಾಗಿದ್ದು, ಕಠಿಣ ಶಿಕ್ಷೆಗೆ ಒಳಪಡುತ್ತದೆ. ಇಂತಹ ಪ್ರಕರಣಗಳಿಂದ ಕುಟುಂಬಗಳು ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳ ಹಕ್ಕುಗಳು ಹಾಗೂ ಕಾನೂನುಗಳ ಕುರಿತು ಶಾಲೆ, ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಬೇಕು. ಪಾಲಕರು ಕೂಡ ಮಕ್ಕಳ ಸುರಕ್ಷತೆ ಹಾಗೂ ರಕ್ಷಣೆಯಲ್ಲಿ ಪ್ರಮುಖ ಜವಾಬ್ದಾರಿ ವಹಿಸಿ, ಮಕ್ಕಳಿಗೆ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತಕುಮಾರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಕಾಶ ಕಡಗದ್, ಬಾಲ ನ್ಯಾಯ ಮಂಡಳಿ ಸದಸ್ಯೆ ನೇತ್ರಾ ಪಾಟೀಲ್ ಉಪಸ್ಥಿತರಿದ್ದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿಂದು ಅಂಗಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಾ ಕಾರ್ತಿಮಠ ವಂದಿಸಿದರು. ವಿವಿಧ ಪೊಲೀಸ್ ಠಾಣೆಗಳ ಉಪನಿರೀಕ್ಷಕರು, ಸಿಬ್ಬಂದಿ ಹಾಗೂ ಕಾಣೆಯಾದ ಮಕ್ಕಳ ಪಾಲಕರು ಸಭೆಯಲ್ಲಿ ಭಾಗವಹಿಸಿದ್ದರು.