ಕೆಲವು ದೇಶಗಳಲ್ಲಿ ರಾಜಮನೆತನದ ವಂಶಪಾರಂಪರ್ಯವಾಗಿ ಅಧಿಕಾರ ಹಸ್ತಾಂತರವಾಗುತ್ತದೆ. ಆದರೆ ಭಾರತದಲ್ಲಿ ಜನರಿಗೆ ತಮಗೆ ಸೂಕ್ತವೆನಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶವಿದೆ. ಈ ವ್ಯವಸ್ಥೆಯ ಮೂಲಕ ದೇಶದ ಕಟ್ಟಕಡೆಯ ಪ್ರಜೆಗೂ ತನ್ನ ನಾಯಕನನ್ನು ಆಯ್ಕೆ ಮಾಡುವ ಹಕ್ಕು ದೊರೆತಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ. ಪ್ರಜಾಪ್ರಭುತ್ವ ದಿನವನ್ನು ಆಚರಿಸುವುದಷ್ಟೇ ಸಾಲದು. ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಿ ಉಳಿಯಬೇಕಾದರೆ ಮತದಾನದ ಸಂದರ್ಭದಲ್ಲಿ ಯಾರಿಗೆ ಮತ ನೀಡಬೇಕು ಎಂಬ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಬೇಕು ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.ತಾಲೂಕು ಪಂಚಾಯಿತಿ ಆವರಣದಲ್ಲಿ ಕರ್ನಾಟಕ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಸೇರಿ ಸಂವಿಧಾನ ರಚನಾ ಸಭೆಯ ಮಹನೀಯರು ನಮಗೆ ನೀಡಿರುವ ಶ್ರೇಷ್ಠ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವುದು ಹೆಮ್ಮೆಯ ಸಂಗತಿ. ಜನರಿಂದ, ಜನರಿಗಾಗಿ ಮತ್ತು ಜನರ ಮೂಲಕ ನಡೆಯುವ ಆಡಳಿತ ವ್ಯವಸ್ಥೆಯೇ ಪ್ರಜಾಪ್ರಭುತ್ವ. ದೇಶದ ಆಡಳಿತ ನಡೆಸುವ ನಾಯಕರನ್ನು ಮತದಾನದ ಮೂಲಕ ಜನರೇ ಆಯ್ಕೆ ಮಾಡಿಕೊಳ್ಳುವ ಹಕ್ಕು ನಮ್ಮ ಸಂವಿಧಾನ ನೀಡಿದೆ ಎಂದರು.ಕೆಲವು ದೇಶಗಳಲ್ಲಿ ರಾಜಮನೆತನದ ವಂಶಪಾರಂಪರ್ಯವಾಗಿ ಅಧಿಕಾರ ಹಸ್ತಾಂತರವಾಗುತ್ತದೆ. ಆದರೆ ಭಾರತದಲ್ಲಿ ಜನರಿಗೆ ತಮಗೆ ಸೂಕ್ತವೆನಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶವಿದೆ. ಈ ವ್ಯವಸ್ಥೆಯ ಮೂಲಕ ದೇಶದ ಕಟ್ಟಕಡೆಯ ಪ್ರಜೆಗೂ ತನ್ನ ನಾಯಕನನ್ನು ಆಯ್ಕೆ ಮಾಡುವ ಹಕ್ಕು ದೊರೆತಿದೆ ಎಂದು ಹೇಳಿದರು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತಕ್ಕಿದೆ. ಇದಕ್ಕೆ ಭದ್ರವಾದ ಅಡಿಪಾಯ ಹಾಕಿರುವುದು ಸಂವಿಧಾನ. ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಸಂವಿಧಾನ ಪ್ರತಿಪಾದಿಸಿದೆ. ಜಾತಿ, ಧರ್ಮ, ಬಡವ- ಶ್ರೀಮಂತ ಎಂಬ ಯಾವುದೇ ಭೇದವಿಲ್ಲದೆ ಎಲ್ಲರಿಗೂ ಸಮಾನ ಹಕ್ಕು ಮತ್ತು ಸಾಮಾಜಿಕ ನ್ಯಾಯ ದೊರೆಯಬೇಕು ಎಂದರು.ಮತದಾನದ ಸಂದರ್ಭದಲ್ಲಿ ಪ್ರತಿಯೊಬ್ಬರ ಮತಕ್ಕೂ ಒಂದೇ ಮೌಲ್ಯ ಇರುವುದು ಪ್ರಜಾಪ್ರಭುತ್ವದ ನಿಜವಾದ ಶಕ್ತಿ. ಜನಪ್ರತಿನಿಧಿಗಳು ಅಧಿಕಾರದಲ್ಲಿರುವವರು ಎಂಬ ಭಾವನೆಗಿಂತ, ಜನರು ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುವ ಸೇವಕರು ಎಂಬ ಮನೋಭಾವ ಹೊಂದಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ತಾಲೂಕು ಕಚೇರಿ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಹಾಗೂ ಅದರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಶತೇಂದ್ರ ಕುಮಾರ್ ಮಾತನಾಡಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಶಾಂತ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.